ಬಸ್ಸೇ ಬಾರದ ಕುಗ್ರಾಮದ ಡೀವಿ ಈಗ ಕೇಂದ್ರ ಸಚಿವ

ಅದೊಂದು ಕುಗ್ರಾಮ. ಸುಳ್ಯ ತಾಲೂಕಿನ ಕಟ್ಟ ಕಡೆಯ ಗ್ರಾಮ. ಕೇರಳಕ್ಕೆ ಹೊಂದಿಕೊಂಡಿರುವ ಪ್ರದೇಶ. ಇಲ್ಲಿ ಹುಟ್ಟಿ ಬೆಳೆದ ದೇವರಗುಂಡ ವೆಂಕಪ್ಪ ಗೌಡ ಸದಾನಂದ ಗೌಡ ಶಾಸಕರಾದರು, ಸಂಸದರಾದರು, ವಿರೋಧ ಪಕ್ಷದ ಉಪನಾಯಕನಾದರು, ನಾಡಿನ ಮುಖ್ಯಮಂತ್ರಿಯೂ ಆದರು. ಈಗ ಅವರು ಕೇಂದ್ರ ಸಚಿವರಾಗಿದ್ದಾರೆ. ಒಂದು ಕಾಲದಲ್ಲಿ ಬಸ್ ಕೂಡ ಬಾರದ ಪ್ರದೇಶದಿಂದ ಬಂದ ಸದಾನಂದ ಗೌಡರು ಇದೀಗ ಕೇಂದ್ರದ ಸಚಿವರಾಗಿರುವುದು ಹೆಮ್ಮೆಯೇ ಸರಿ.
ಬಾಲ್ಯದಲ್ಲಿ ಸದಾನಂದ ಗೌಡರದು ಕಷ್ಟದ ಬದುಕು. ಕೃಷಿಯೇ ಮೂಲವಾಗಿದ್ದ ಕುಟುಂಬವದು. ವೆಂಕಪ್ಪ ಗೌಡ- ಕಮಲಾ ದಂಪತಿ ತೃತೀಯ ಪುತ್ರನಾಗಿ ಸದಾನಂದ ಗೌಡರ ಜನನ. ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬಳಿಕ ಪುತ್ತೂರು, ಉಡುಪಿಗಳಲ್ಲಿ ಶಿಕ್ಷಣ ಮುಂದುವರಿಸಿದರು.
ಆದರೆ ಗೌಡರು ಹುಲುಸು ಬೆಳೆ ತೆಗೆದದ್ದು ಮಾತ್ರ ರಾಜಕೀಯದಲ್ಲೆ. ಅದಕ್ಕಾಗಿಯೇ ಎಂಬಂತೆ ಸರ್ಕಾರಿ ವೃತ್ತಿಗೆ ರಾಜಿನಾಮೆ ಕೊಟ್ಟು ಬಂದದ್ದು ರಾಜಕೀಯ ಪಡಸಾಲೆಗೆ. ಅಲ್ಲಿ ಬೆಳೆಯುತ್ತಾ ಹೋದವರು ಈಗ ರಾಷ್ಟ್ರದ ಮುಂಚೂಣಿ ನಾಯಕ. ತನ್ನ ಕಾನೂನು ಪದವಿ ಬಳಿಕ 1976ರಿಂದ ಸದಾನಂದ ಗೌಡರು ಸುಳ್ಯ ಮತ್ತು ಪುತ್ತೂರಿನಲ್ಲಿ ನ್ಯಾಯವಾದಿಯಾಗಿ ವೃತ್ತಿ ಆರಂಭಿಸಿದರು. 2 ವರ್ಷದ ಬಳಿಕ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಶಿರಸಿಯಲ್ಲಿ ಸರ್ಕಾರಿ ವೃತ್ತಿ ಆರಂಭಿಸಿದರು. ಆದರೆ ರಾಜಕೀಯ ಆಕಾಂಕ್ಷೆಯೇ ಪ್ರಬಲವಾಗಿದ್ದ ಅವರು 8 ತಿಂಗಳಲ್ಲಿ ಆ ವೃತ್ತಿಗೆ ರಾಜಿನಾಮೆ ನೀಡಿದರು.
ಭಾಷಣ ವೀರ
ಸದಾನಂದ ಗೌಡರು ಊರಿನಲ್ಲಿ ಹೆಸರು ಗಳಿಸಿಕೊಂಡದ್ದೇ ತನ್ನ ಭಾಷಣಗಳ ಮೂಲಕ. ಜನಸಂಘದ ಕಾಲದಿಂದಲೂ ಅಷ್ಟೇ, ಸಭೆ ಸಮಾರಂಭಗಳಲ್ಲಿ ಗೌಡರು ಮಾತಿಗೆ ನಿಂತರೆ ಅದಕ್ಕೆ ಬೇರೆಯದೇ ಖದರ್. ಅವರ ಭಾಷಣದ ವೈಖರಿಗೆ ಕಾರ್ಯಕರ್ತರು ಹುಚ್ಚೆದ್ದು ಕುಣಿಯುತ್ತಿದ್ದರು.
ಹೋರಾಟದ ಹಾದಿ
ರಾಜಕೀಯ ರಂಗದಲ್ಲಿ ಅದ್ವಿತೀಯ ನಾಯಕನಾಗಿ ಮಿಂಚುತ್ತಿರುವ ಸದಾನಂದ ಗೌಡರು ಸಹಕಾರ ಮತ್ತು ಕಾರ್ಮಿಕ ಸಂಘಗಳ ಮೂಲಕ ಸಾರ್ವಜನಿಕ ರಂಗಕ್ಕೆ ಬಂದವರು. ಮುಂದೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಹೋರಾಟದ ಮೂಲ ಸಮಾಜಮುಖಿ ವ್ಯಕ್ತಿತ್ವವನ್ನು ಗಳಿಸಿಕೊಂಡು. ಕೃಷಿ ಮಾಡುತ್ತಿದ್ದ ಸರ್ಕಾರಿ ಭೂಮಿಯನ್ನು ರೈತರಿಗೆ ಮಂಜೂರು ಮಾಡಿಕೊಡಬೇಕೆಂದು ಹಾಗೂ ಅಡಕೆಗೆ ಬೆಂಬಲ ಬೆಲೆ ನೀಡಬೇಕೆಂದು ಅವರು ನಡೆಸಿದ ಹೋರಾಟ ಈಗಲೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಸುಳ್ಯದಲ್ಲಿ ನ್ಯಾಯವಾದಿಯಾಗಿದ್ದ ಸದಾನಂದ ಗೌಡರನ್ನು ಪುತ್ತೂರಿಗೆ ಕರೆಸಿಕೊಂಡ ಉರಿಮಜಲು ರಾಮ ಭಟ್ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವಂತೆ ಆಹ್ವಾನ ನೀಡಿದರು. ಆರಂಭದ ಪ್ರಯತ್ನದಲ್ಲಿ ವಿನಯಕುಮಾರ್ ಸೊರಕೆ ಎದುರು ಪರಾಭವಗೊಂಡ ಗೌಡರು ನಂತರದ ಪ್ರಯತ್ನದಲ್ಲಿ ಜಯಶಾಲಿಯಾದರು. ಬಳಿಕ ತಿರುಗಿ ನೋಡಿಯೇ ಇಲ್ಲ.
ದುರ್ಗಾಕುಮಾರ್ ನಾಯರ್ಕೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


