ಪ್ರಧಾನ ಸುದ್ದಿ

ಶೀಘ್ರದಲ್ಲೇ ಜಾತಿವಾರು ಸಮೀಕ್ಷೆ ಪ್ರಾರಂಭ: ಸಿದ್ದರಾಮಯ್ಯ

ಶೀಘ್ರದಲ್ಲೇ ಜಾತಿವಾರು ಸಮೀಕ್ಷೆ ಪ್ರಾರಂಭ: ಸಿದ್ದರಾಮಯ್ಯ
Published On :

ಬೆಂಗಳೂರು: ಎಲ್ಲಾ ಜಾತಿಗಳ ಸ್ಥಿತಿಗತಿ ತಿಳಿಯಲು ಜಾತಿವಾರು ಸಮೀಕ್ಷೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಘೋಷಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ಮಾಡಲಾಗುವುದು. ಈ ಸಮೀಕ್ಷೆ ಸರ್ಕಾರದಿಂದಲೇ ನಡೆಯಲಿದ್ದು, ನವೆಂಬರ್, ಡಿಸೆಂಬರ್‌ನಲ್ಲಿ ಜಾತಿವಾರು ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಇಂದಿನ ಜಾತಿವಾರು ಸಮೀಕ್ಷೆಯಲ್ಲಿ ಯಾವುದೇ ಶಿಕ್ಷಕರನ್ನು ಬಳಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಜಾತಿವಾರು ಸಮೀಕ್ಷೆ ಆರಂಭಗೊಂಡ ಮೂರ್ನಾಲ್ಕು ತಿಂಗಳೊಳಗೆ ವರದಿ ಸರ್ಕಾರದ ಕೈ ಸೇರಲಿದೆ ಎಂದರು. ಜಾತಿವಾರು ಸಮೀಕ್ಷೆ ಮಾಡಬೇಕೆಂದು 2004ರಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದಾಗಲೇ ನಿರ್ಧಾರಿಸಲಾಗಿತ್ತು. ಆ ಸಮೀಕ್ಷೆ ಕಾರ್ಯ ಇಂದು ಮುಖ್ಯಮಂತ್ರಿ ಆದ ಬಳಿಕ ಕೈಗೂಡುತ್ತಿದೆ ಎಂದರು.

ಇದೇ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರು, ಬರೀ ಅಲ್ಪಸಂಖ್ಯಾತ ವರ್ಗಗಳಲ್ಲಿ ಮಾತ್ರ ಬಡವರಿಲ್ಲ ಎಲ್ಲ ಜಾತಿಯಲ್ಲೂ ಬಡವರಿದ್ದಾರೆ ಹೀಗಾಗಿ ಜಾತಿವಾರು ಸಮೀಕ್ಷೆ ನಡೆಸಿ ಬಡವರಿಗೆ ಸರ್ಕಾರದಿಂದ ನೆರವು ನೀಡಲಾಗುವುದು ಎಂದರು.

ಒಳ ಮೀಸಲಾತಿಗಾಗಿ ಸರ್ಕಾರ ಜಾತಿವಾರು ಸಮೀಕ್ಷೆಗೆ ಮುಂದಾಗಿದ್ದು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲಾಗುವುದು ಎಂದರು.

ಸಮೀಕ್ಷೆಗೆ ಒಟ್ಟು 117 ಕೋಟಿ ರು. ವೆಚ್ಚ: ಕಾಂತರಾಜು

ಜಾತಿವಾರು ಸಮೀಕ್ಷೆ ಕುರಿತಂತೆ ಮಾಹಿತಿ ನೀಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜು ಅವರು, ರಾಜ್ಯದಲ್ಲಿ ಜಾತಿವಾರು ಸಮೀಕ್ಷೆಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಸುಮಾರು 117 ಕೋಟಿ ರುಪಾಯಿ ವೆಚ್ಚವಾಗಲಿದೆ ಎಂದರು.

ಇದಕ್ಕೂ ಮುನ್ನ 1931ರಲ್ಲಿ ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ನಡೆದಿತ್ತು. ಆ ಬಳಿಕ ಇದೀಗ ಜಾತಿವಾರು ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆ ಕಾರ್ಯಕ್ಕೆ 1.25 ಲಕ್ಷ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ಈ ಸಿಬ್ಬಂದಿ ಸುಮಾರು 1.25 ಕೋಟಿ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.