ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಳ ಬಿಟ್ಟು ಬೇರೆ ಆದಾಯ ಮೂಲವಿದೆಯಂತೆ, ಊರಲ್ಲಿ 73 ಎಕರೆ ಹೊಲವೂ ಇದೆಯಂತೆ! ಇದು ಲೋಕಾಯುಕ್ತಕ್ಕೆ ಸಲ್ಲಿಸುವ ವಾರ್ಷಿಕ ಆಸ್ತಿ ವಿವರಣೆ ಪಟ್ಟಿಯಲ್ಲಿ ಉಲ್ಲೇಖಿಸಿದ ಅಂಶಗಳಲ್ಲ. ಖುದ್ದು ಸಿದ್ದರಾಮಯ್ಯ ಅವರೇ ನಿಧಾನವಾಗಿ ಯೋಚಿಸುತ್ತಾ ಹೇಳಿದ ವೈಯಕ್ತಿಕ ಸತ್ಯಾಂಶ.
ಹೌದು. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಆಯೋಜಿಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಾಗಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಬಂದಿದ್ದ ಬಿಬಿಎಂಪಿಯ ಟಸ್ಕರ್ ಟೌನ್ ಶಾಲೆಯ ಶಿಕ್ಷಕ ಶಿವಕುಮಾರ್ ಅವರ ಮುಂದೆ ಸಾಮಾನ್ಯ ನಾಗರಿಕನಂತೆ ಒಂದೊಂದೇ ಪ್ರಶ್ನೆಗೆ ಉತ್ತರಿಸಿದರು. ಬೆಳಗ್ಗೆ 10 ಗಂಟೆಗೆ ಬರುವಂತೆ ಗಣತಿ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿತ್ತು. ಆದರೆ ಸಿದ್ದರಾಮಯ್ಯ ಒಂದು ಗಂಟೆ ತಡವಾಗಿ ಬಂದರು.
ಸಂಬಳ ಬಿಟ್ಟು ಆದಾಯವಿದೆ!
ನನಗೆ ಮುಖ್ಯಮಂತ್ರಿ ಹುದ್ದೆ ನಿಭಾಯಿಸುವುದಕ್ಕೆ ಸರ್ಕಾರ ನೀಡುವ ಸಂಬಳದ ಹೊರತಾಗಿ ಬೇರೆ ಆದಾಯದ ಮೂಲವಿದೆ ಎಂಬುದನ್ನು ಸ್ಪಷ್ಟಪಡಿಸಿದ ಸಿದ್ದರಾಮಯ್ಯ ಅವರು, ಸ್ವಗ್ರಾಮದಲ್ಲೂ ಮನೆ ಇದೆ. ಅಲ್ಲಿ ನಮ್ಮದು ಅವಿಭಕ್ತ ಕುಟುಂಬ. ನಮಗೆ 73 ಎಕರೆ ಜಮೀನು ಇದೆ. ಮನೆಯಲ್ಲಿ ಈಗಲೂ ಕೃಷಿ ಕೆಲಸ ಮಾಡುತ್ತಾರೆ. ಎತ್ತು, ಹಸು, ಕುರಿ, ಕೋಳಿಯಂಥ
ಪ್ರಾಣಿಗಳನ್ನು ಸಾಕಲಾಗುತ್ತಿದೆ' ಎಂದರು. ಕೃಷಿಯಿಂದಲೂ ಆದಾಯ ಬರುತ್ತಿದ್ದು, ಬಾಡಿಗೆಯಿಂದಲೂ ಸ್ವಲ್ಪ ಆದಾಯ ಬರುತ್ತಿದೆ ಎಂದು ಲೆಕ್ಕ ಹಾಕಲಾರಂಬಿsಸಿದರು. ಆಗ ಅವರ
ಸಹಾಯಕರು ನಂತರ ಮಾಹಿತಿ ಒದಗಿಸುವ ಭರವಸೆ ನೀಡಿದರು.
ನನ್ನ ಬಳಿ ಒಂದು ಕಾರು ಇದೆ. ಈಗ ಇರುವ ಸರ್ಕಾರಿ ನಿವಾಸದಲ್ಲಿ ಒಂದು ರೆಫ್ರಿಜರೇಟರ್ ಇದೆ ಎಂದರು. ಇಷ್ಟು ಮಾಹಿತಿ ನೀಡುವಾಗ ಸುಮಾರು 35 ಪ್ರಶ್ನೆಗಳು ಮುಗಿದಿತ್ತು. ಆಗ ಗಣತಿ ಕಾರ್ಯಕರ್ತರು ಇಷ್ಟೇ ಪ್ರಶ್ನೆಗೆ ಉತ್ತರ ಸಾಕು ಬಿಡಿ ಸಾರ್ ಎಂದರು. ಆದರೆ ಇದಕ್ಕೆ ಸಿದ್ಧರಿಲ್ಲದ ಸಿದ್ದರಾಮಯ್ಯ ಎಷ್ಟು ಪ್ರಶ್ನೆ ಇದೇರಿ ಅಲ್ಲಿ? 55 ಅಲ್ವೇನ್ರಿ? ಮತ್ತೆ ಎಲ್ಲ ತುಂಬಿಸ್ಕಳಿ. ಎಲ್ರಿಗೂ ಹೀಗೆ ಮಾಡ್ತೀರಾ? ಎಂದು ಪ್ರಶ್ನಿಸಿದರು.
ಮೀಸಲು ಸೌಲಭ್ಯ ಪಡೆದಿಲ್ಲ
ನಂತರದ ಕಲಮುಗಳಲ್ಲಿ ಕೆಲ ಕುತೂಹಲಕಾರಿ ಅಂಶಗಳನ್ನು ಸಿದ್ದರಾಮಯ್ಯ ಬಹಿರಂಗಪಡಿಸಿದರು. ತಾವು ಎಲ್‍ಎಲ್‍ಬಿ ಪದವಿಧರರಾಗಿದ್ದು, ವೃತ್ತಿಯಲ್ಲಿ ಇದುವರೆಗೆ ಒಮ್ಮೆಯೂ ಮೀಸಲು ಸೌಲಭ್ಯ ಪಡೆದುಕೊಂಡಿಲ್ಲ. ಕೃಷಿ ಕಸುಬಿನಿಂದ ಇದುವರೆಗೆ ನನಗೆ ಯಾವುದೇ ಕಾಯಿಲೆ ಬಂದಿಲ್ಲ ಎಂದು ಮಾಹಿತಿ ನೀಡಿದರು. ಒಟ್ಟು 45 ಪ್ರಶ್ನೆಗೆ ಉತ್ತರಿಸಿದರು.
ಸಿಎಂ ನೀಡಿದ ಮಾಹಿತಿ ಇಲ್ಲಿದೆ
ಧರ್ಮ: ಹಿಂದು, ಜಾತಿ: ಕುರುಬ, ಉಪಜಾತಿ: ಇಲ್ಲ, ವಯಸ್ಸು: 67, ಪತ್ನಿ ಹೆಸರು : ಪಾರ್ವತಿ, ಮಕ್ಕಳು: ರಾಖೇಶ್, ಡಾ.ಯತೀಂದ್ರ, ಮದುವೆಯಾದ ವರ್ಷ :29, ಶಾಲೆಗೆ ಸೇರಿದ ವರ್ಷ: ಗೊತ್ತಿಲ್ಲ. 5ನೇ ತರಗತಿ ಸೇರಿದಾಗ ಬಹುಶಃ 11 ವರ್ಷ ಎಂಬಿತ್ಯಾದಿ ವೈಯಕ್ತಿಕ ವಿವರ ನೀಡಿದರು. ಇದೆಲ್ಲ ವಿಚಾರಗಳಿಗೆ ಸಿದ್ದರಾಮಯ್ಯ ತಾಳ್ಮೆಯಿಂದ ಉತ್ತರಿಸಿದರು. ಆದರೆ ಆಸ್ತಿ ವಿಚಾರ ಬಂದಾಗ ಸ್ವಲ್ಪ ತಡಬಡಾಯಿಸಿದರು.
ನನಗೆ ಬೆಂಗಳೂರಿನಲ್ಲಿ ಸ್ವಂತ ಮನೆಯಿದೆ. ಒಂದು ಕಮರ್ಷಿಯಲ್ ಕಾಂಪ್ಲೆಕ್ಸ್. ಬ್ಯಾಂಕ್ ಅಕೌಂಟ್‍ನಲ್ಲಿ ಠೇವಣಿ ಇದೆ, ಜತೆಗೆ ಸಾಲವೂ ಇದೆ. ಆದರೆ, ಸಾಲ ಮತ್ತು ಠೇವಣಿ ಎಷ್ಟು ಎಂಬುದು ಗೊತ್ತಿಲ್ಲ ಎಂದ ಅವರು, ತಮ್ಮ ಸಹಾಯಕರನ್ನು ಕರೆದು ಅದು ಎಷ್ಟಿದೆ ನೋಡ್ರಿ ಎಂದರು. ಆದರೆ ತಕ್ಷಣ ಮಾಹಿತಿ ಲಭಿಸದೇ ಇದುದ್ದರಿಂದ ನಂತರ ತಾವು ಈ ಮಾಹಿತಿಯನ್ನು ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂಬ ಭರವಸೆ ನೀಡಿದರು.
Advertisement