
ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧವಿದ್ದರೂ ಅಣೆಕಟ್ಟನ್ನು ನಿರ್ಮಾಣ ಮಾಡಿಯೇ ತೀರುತ್ತೇವೆ ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆ ಇಂದು ಹಮ್ಮಿಕೊಂಡಿರುವ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಮಾತನಾಡಿದ ರಾಜ್ಯ ನೀರಾವರಿ ಸಚಿವ ಎಂ ಬಿ ಪಾಟೀಲ್ ಅವರು, ಮೇಕೆದಾಟು ಪ್ರದೇಶದಲ್ಲಿ ಕರ್ನಾಟಕ ಸರ್ಕಾರದ ಉದ್ದೇಶಿತ ನೀರಾವರಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳುವ ಪ್ರಮೇಯವೇ ಇಲ್ಲ. ಅಣೆಕಟ್ಟನ್ನು ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮೇಕೆದಾಟು ಯೋಜನೆ ಸಂಪೂರ್ಣವಾಗಿ ಕಾನೂನಾತ್ಮಕವಾಗಿಯೇ ಇದ್ದು, ಹಿರಿಯ ವಕೀಲ ನಾರಿಮನ್ ಅವರಿಂದ ಈ ಬಗ್ಗೆ ಎಲ್ಲ ರೀತಿಯ ಗೊಂದಲಗಳನ್ನು ಪರೀಕ್ಷಿಸಿದ್ದೇವೆ. ಆ ಬಳಿಕವೇ ನಾವು ಯೋಜನಾ ವರದಿಯನ್ನು ಸಿದ್ಧಪಡಿಸಿದ್ದೇವೆ. ಯೋಜನೆ ಸಂಬಂಧ ಗ್ಲೋಬಲ್ ಟೆಂಡರ್ ಕರೆಯಲಾಗಿದ್ದು, ಇದರಲ್ಲಿ ಐದು ಜನ ಸಮಾಲೋಚಕರ ಭಾಗವಹಿಸಿದ್ದಾರೆ. ಈ ಪೈಕಿ ಮೂವರ ಶಾರ್ಟ್ ಲಿಸ್ಟ್ ಅನ್ನು ನಾವು ತಯಾರಿಸಿದ್ದೇವೆ. ಶೀಘ್ರದಲ್ಲಿಯೇ ನೀರಾವರಿ ಇಲಾಖೆ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಯೋಜನೆ ಸಂಬಂಧ ಡಿಪಿಆರ್ ಸಿದ್ದವಾದ ಬಳಿಕ ಕೇಂದ್ರ ಪರಿಸರ ಇಲಾಖೆಗೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ. ಅಲ್ಲಿಂದ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿಯನ್ನು ಆರಂಭಿಸಲಾಗುತ್ತದೆ. ಈ ಎಲ್ಲ ಕಾರ್ಯಕ್ಕೆ ಸುಮಾರು 1 ವರ್ಷಗಳ ಕಾಲ ಸಮಯ ಬೇಕಾಗುತ್ತದೆ ಎಂದು ಪಾಟೀಲ್ ಹೇಳಿದರು.
ತಮಿಳುನಾಡು ಆರೋಪದಲ್ಲಿ ಹುರುಳಿಲ್ಲ
ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಆರೋಪದಲ್ಲಿ ಹುರುಳಿಲ್ಲ. ನಮ್ಮ ಗಡಿಯಲ್ಲಿ ನಾವು ಅಣೆಕಟ್ಟು ಕಟ್ಟಲು ತಮಿಳುನಾಡು ಸರ್ಕಾರದ ಅನುಮತಿ ಬೇಕಿಲ್ಲ. ಈ ಹಿಂದೆ ಗೆಜೆಟ್ ನೋಟಿಫಿಕೇಷನ್ ಗೂ ಮುಂಚಿತವಾಗಿ ಈ ಪ್ರಸ್ತಾವನೆ ಇತ್ತು. 3 ಯೋಜನೆಗಳನ್ನು ನಮ್ಮ ಗಡಿಯಲ್ಲಿ ಸಿದ್ಧಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. 2008ರಲ್ಲಿ ನಾವು ಕೇಂದ್ರಸರ್ಕಾರ ಎನ್ ಎಚ್ ಪಿಸಿಯೊಂದಿಗೆ ನಾವು ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆವು. ನಮ್ಮ ಗಡಿಯಲ್ಲಿಯೇ ಬರುವ ಮೇಕೆದಾಟು ಮತ್ತು ಶಿವನ ಸಮುದ್ರ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕುರಿತು ನಿರ್ಧರಿಸಲಾಗಿತ್ತು ಎಂದು ನೀರಾವರಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಅಲ್ಲದೆ ತಮಿಳುನಾಡು ಮಾಡಿದ್ದ ಆರೋಪಗಳನ್ನು ತಿರಸ್ಕರಿಸಿದ ಪಾಟೀಲ್ ಅವರು, ಕಾವೇರಿ ನ್ಯಾಯಮಂಡಳಿಯ ಮುಂದೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿಲ್ಲ. ಕರ್ನಾಟಕ ಸರ್ಕಾರ ಏಕಪಕ್ಷೀಯಾವಾಗಿ ನಿರ್ಧಾರ ಕೈಗೊಂಡಿದೆ. ಕರ್ನಾಟಕದಿಂದ ನಮ್ಮ ಕೃಷಿಗೆ ಹೊಡೆತ ಬೀಳಲಿದ್ದು, ನಮ್ಮ ಪಾಲಿನ ನಿಸರ್ಗದತ್ತ ನೀರಿನಲ್ಲಿ ಖೋತಾ ಆಗುತ್ತದೆ ಎಂಬ ಆರೋಪಗಲ್ಲಿ ಹುರುಳಿಲ್ಲ ಎಂದು ಹೇಳಿದರು. ಅಲ್ಲದೆ ದೆಹಲಿಗೆ ನಿಯೋಗವನ್ನು ಕರೆದುಕೊಂಡು ಹೋಗುವ ಕುರಿತು ಮಾತನಾಡಿದ ಅವರು, ಮೇಕೆದಾಟು ಯೋಜನೆ ಈಗಿನ್ನೂ ಡಿಪಿಆರ್ ಹಂತದಲ್ಲಿಯೇ ಇರುವುದರಿಂದ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವ ಅವಶ್ಯಕತೆ ಇರಲಿಲ್ಲ. ಆದರೆ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಈಗಾಗಲೇ ದೆಹಲಿಗೆ ನಿಯೋಗವನ್ನು ಕರೆದುಕೊಂಡು ಹೋಗುವ ಕುರಿತು ನಿರ್ಧರಿಸಿರುವುದರಿಂದ ದೆಹಲಿ ನಾಯಕರಿಗೆ ತಪ್ಪು ಸಂದೇಶ ರವಾನೆಯಾಗಬಾರದು. ಈ ಹಿನ್ನಲೆಯಲ್ಲಿ ಮಾತ್ರ ಸರ್ವಪಕ್ಷ ನಾಯಕರ ನಿಯೋಗವೊಂದನ್ನು ಏಪ್ರಿಲ್. 22ರಂದು ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಪಾಟೀಲ್ ಹೇಳಿದರು.
Advertisement