
ಬೆಂಗಳೂರು: ಮೇಕೆದಾಟು ಯೋಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಬಲ ಘೋಷಿಸಿದ್ದ ಕನ್ನಡ ಚಿತ್ರರಂಗದ ಗಣ್ಯರು ಪ್ರತಿಭಟನಾ ರ್ಯಾಲಿಯಿಂದ ದೂರ ಉಳಿದಿದ್ದಾರೆ.
ಇಂದು ಬೆಳಗ್ಗೆ ಬೆಂಗಳೂರಿನ ಟೌನ್ ಹಾಲ್ ನಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯಲ್ಲಿ ಚಿತ್ರನಟ ನೆನಪಿರಲಿ ಪ್ರೇಮ್ ಮತ್ತು ಹಿರಿಯ ಪೋಷಕ ನಟ ಹೊನ್ನವಳ್ಳಿ ಕೃಷ್ಣ ಅವರನ್ನು ಹೊರತು ಪಡಿಸಿದರೆ ಉಳಿದ ಯಾವ ನಟರು ಕೂಡ ಪಾಲ್ಗೊಂಡಿರಲಿಲ್ಲ. ಈ ಹಿಂದೆ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದ ಚಿತ್ರರಂಗದ ಹಲವು ಗಣ್ಯರು ಪ್ರತಿಭಟನಾ ರ್ಯಾಲಿಯಿಂದ ದೂರ ಉಳಿದಿದ್ದಾರೆ. ಕರ್ನಾಟಕ ಬಂದ್ ಗೆ ಡಾ.ರಾಜ್ ಕುಟುಂಬ ನೈತಿಕ ಬೆಂಬಲ ನೀಡಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ನೈತಿಕ ಬೆಂಬಲ ಸೂಚಿಸಿ ಚಿತ್ರರಂಗದ ಎಲ್ಲ ಕೆಲಸ-ಕಾರ್ಯಗಳನ್ನು ಸ್ಥಗಿತಗೊಳಿಸಿದೆ.
ರಾಜ್ ಬಳಿಕ ಚಿತ್ರರಂಗದಲ್ಲಿ ನಾಯಕತ್ವ ಕೊರತೆ
ತುಮಕೂರಿನಲ್ಲಿ ಮಾತನಾಡಿದ ಚಿತ್ರ ನಟ ಜಗ್ಗೇಶ್ ಅವರು, ಕುಡಿಯುವ ನೀರು ಯೋಜನೆಯಲ್ಲಿ ತಮಿಳುನಾಡು ರಾಜಕೀಯ ಮಾಡಬಾರದು. ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯ ಅಡ್ಡಿಯುಂಟು ಮಾಡುತ್ತಿದ್ದು, ನಮ್ಮ ಅನ್ನದ ತಟ್ಟೆಗೆ ಅದು ಕೈ ಹಾಕಬಾರದು. ಕನ್ನಡಿಗರ ತಾಳ್ಮೆ ಪರೀಕ್ಷಿಸಿದರೆ, ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಭಿಮಾನಿಗಳೊಂದಿಗೆ ಪ್ರತಿಭಟನೆ ನಡೆಸಿದ ಜಗ್ಗೇಶ್, ನಾಡು ನುಡಿ ವಿಚಾರ ಬಂದಾಗ ನಾವೆಲ್ಲ (ಚಿತ್ರರಂಗ) ಒಗ್ಗಟ್ಟಾಗಿರಬೇಕು. ಅಂದು ಸ್ವಯಂ ಪ್ರೇರಿತವಾಗಿ ರಾಜಕುಮಾರ್ ಹೋರಾಟಕ್ಕಿಳಿಯುತ್ತಿದ್ದರು. ಆದರೆ ಇಂದು ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ. ಹಾಗಾಗಿ ನಟ, ನಟಿಯರು ಹೋರಾಟಕ್ಕೆ ಇಳಿಯುತ್ತಿಲ್ಲ. ಕನ್ನಡ ನೆಲ, ಜಲ, ಗಡಿ ರಕ್ಷಣೆಗಾಗಿ ಚಿತ್ರರಂಗ ಒಂದಾಗಬೇಕು. ಸ್ವಯಂ ಪ್ರೇರಿತವಾಗಿ ಕಲಾವಿದರು ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದರು.
Advertisement