ನವದೆಹಲಿ: ಮಹಾರಾಷ್ಟ್ರದ ವಿದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಸಲಿರುವ ೧೫ ಕಿಮೀ ಪಾದಯಾತ್ರೆ ಗುರುವಾರ ಪ್ರಾರಂಭವಾಯಿತು. ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಬೆಳೆ ನಾಶದಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ.
ಬುಧವಾರ ರಾತ್ರಿ ನಾಗಪುರ ತಲುಪಿದ ಗಾಂಧಿ ಗುರುವಾರ ಬೆಳಗ್ಗೆಯೇ ಗುಂಜ್ ಗ್ರಾಮಕ್ಕೆ ಹೊರಟರು. ಅಮರಾವತಿ ನಗರದಿಂದ ಸುಮಾರು ೫೦ ಕಿಮೀ ದೂರದಲ್ಲಿರುವ ಈ ಗ್ರಾಮದಿಂದ ರಾಹುಲ್ ಪಾದಯಾತ್ರೆ ಪ್ರಾರಂಭಿಸಲಿದ್ದಾರೆ.
ಗುಂಜ್ ಗ್ರಾಮದ ರಸ್ತೆಗಳ ಎರಡು ಬದಿಯಲ್ಲಿ ನೆರೆದಿದ್ದ ಗ್ರಾಮಸ್ಥರು ರಾಹುಲ್ ಗಾಂಧಿ ಅವರಿಗೆ ಸ್ವಾಗತ ಕೋರಿದರು. ಅಲ್ಲಿ ಕೆಲವರ ಜೊತೆ ಮಾನಾಡಿದ ರಾಹುಲ್ ಅವರ ತೊಂದರೆಗಳ ಆಳಕ್ಕಿಳಿದು ಅರಿತುಕೊಳ್ಳಲು ಪ್ರಯತ್ನಿಸಿದರು.
ಬೆಳೆ ನಾಶ ಹಾಗು ಮಳೆಯ ವೈಪರೀತ್ಯದಿಂದ ಹಾನಿಗೊಂಡಿರುವ ರೈತರು ಮತ್ತು ಕುಟುಂಬದವರನ್ನು ಭೇಟಿ ಮಾಡಲು ಗಾಂಧಿ ಐದು ಗ್ರಾಮಗಳಿಗೆ ಭೇಟಿ ನೀದಲಿದ್ದಾರೆ. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಚವಾನ್ ರಾಹುಲ್ ಜೊತೆಗಿರಲಿದ್ದಾರೆ ಎಂದು ಪಕ್ಷದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಅಪಾರ ತೊಂದರೆ ಅನುಭವಿಸುತ್ತಿರುವ ಮಹಾರಾಷ್ಟ್ರದ ವಿದರ್ಭ ಮತ್ತು ಅಮರಾವತಿ ಪ್ರದೇಶಗಳಲ್ಲಿ ಪ್ರತಿ ವರ್ಷ ಹೆಚ್ಚೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.