ಇನ್ನು ಮೊಬೈಲ್‍ಗೇ ಬರುತ್ತೆ ಪಡಿತರ ವಿವರ ಎಸ್ಸೆಮ್ಮೆಸ್

ಪಡಿತರ ಹಂಚಿಕೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಯಲು ಆಹಾರ ಇಲಾಖೆ ಸೋಮವಾರದಿಂದ ಎಸ್‍ಎಂಎಸ್ ಮಾಹಿತಿ ವ್ಯವಸ್ಥೆ ಆರಂಭಿಸುತ್ತಿದ್ದು...
ಮೊಬೈಲ್ ಗೆ ಪಡಿತರ ವಿವರ
ಮೊಬೈಲ್ ಗೆ ಪಡಿತರ ವಿವರ
Updated on

ನಾಳೆಯಿಂದಲೇ ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿ; ಪಾರದರ್ಶಕತೆಗೆ ಯತ್ನ

ಬೆಂಗಳೂರು:
ಪಡಿತರ ಹಂಚಿಕೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಯಲು ಆಹಾರ ಇಲಾಖೆ ಸೋಮವಾರದಿಂದ ಎಸ್‍ಎಂಎಸ್ ಮಾಹಿತಿ ವ್ಯವಸ್ಥೆ ಆರಂಭಿಸುತ್ತಿದ್ದು, ಎಲ್ಲ ಕಾರ್ಡ್‍ದಾರರಿಗೆ ಸಿಗುವ  ಪಡಿತರ ವಿವರ ಹಾಗೂ ಅದಕ್ಕೆ ಪಾವತಿಸಬೇಕಾದ ಹಣದ ವಿವರಗಳನ್ನು ರವಾನಿಸುತ್ತಿದೆ.

ಕಾರ್ಡ್‍ದಾರರಿಗೆ ನಿಗದಿಯಾಗಿದ್ದ ಪಡಿತರ ಎಷ್ಟು? ಅದರಲ್ಲಿ ಅವರು ಪಡೆದಿದ್ದು, ಅದಕ್ಕಾಗಿ ಹಣ ಪಾವತಿಸಿದ್ದು ಮತ್ತು ನ್ಯಾಯ ಬೆಲೆ ಅಂಗಡಿಗಳಲ್ಲಿ ಹಂಚಿಕೆಯಾಗದೆ ಉಳಿದ ಪಡಿತರ ಎಷ್ಟು ಎನ್ನುವ ಎಲ್ಲ ವಿವರಗಳು ಇನ್ನು ಇಲಾಖೆಗೆ ತಕ್ಷಣ ರವಾನೆಯಾಗಲಿದೆ. ಪಡಿತರ ಮಾಹಿತಿ ನೀಡುವ ಈ ವ್ಯವಸ್ಥೆ ದೇಶದಲ್ಲೇ ಪ್ರಥಮವಾಗಿದ್ದು, ರು.5 ಲಕ್ಷ ವೆಚ್ಚದಲ್ಲಿ ಇದನ್ನು  ಜಾರಿಗೊಳಿಸಲಾಗುತ್ತಿದೆ. ಇದರಿಂದ ರಾಜ್ಯದ 20,770 ನ್ಯಾಯಬೆಲೆ ಅಂಗಡಿಗಳ ಪಾತ್ರ ಕೇವಲ ಹಂಚಿಕೆಗೆ ಮಾತ್ರ ಸೀಮಿತವಾಗಲಿದೆ. ಇಲಾಖೆ ಈಗ ರಾಜ್ಯಾದ್ಯಂತ 82 ಲಕ್ಷ   ಕಾರ್ಡ್‍ದಾರರಿಗೆ ಎಸ್‍ಎಂಎಸ್ ಮೂಲಕ ಧಾನ್ಯದ ವಿವರದ ಮಾಹಿತಿ ರವಾನಿಸಬೇಕಿದ್ದು, ಸೋಮವಾರದ ವೇಳೆಗೆ ಮಾಹಿತಿ ಕಾರ್ಡ್‍ದಾರರಿಗೆ ತಲುಪಲಿದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪಡಿತರ ಹಂಚಿಕೆಯಾಗಿರುವ ಮಾಹಿತಿ ಪಡೆಯುವ ವ್ಯವಸ್ಥೆ ಇರುವ ಎಲೆಕ್ಟ್ರಾನಿಕ್ ತೂಕದ ವ್ಯವಸ್ಥೆಯ ಕೇಂದ್ರಗಳನ್ನು ಇಲಾಖೆ ಆರಂಭಿಸುತ್ತಿದೆ. ಇದರಲ್ಲಿ ಕಾರ್ಡ್‍ದಾರರು ಪಡಿತರ ಪಡೆದು  ಬಯೋಮೆಟ್ರಿಕ್‍ನಲ್ಲಿ ಬೆರಳು ಒತ್ತಿದ ಕೂಡಲೇ ಅವರು ಯಾವ ಧಾನ್ಯಗಳನ್ನು ಎಷ್ಟೆಷ್ಟು ಪಡೆದಿದ್ದಾರೆ ಎನ್ನುವ ಸಂದೇಶ ಕ್ಷಣ ಮಾತ್ರದಲ್ಲಿ ಇಲಾಖೆ ಸರ್ವರ್‍ಗೆ ಹೋಗುತ್ತದೆ. ಈ ವ್ಯವಸ್ಥೆ  ಪ್ರಾಯೋಗಿಕವಾಗಿ ತುಮಕೂರು, ಚಿಕ್ಕಮಗಳೂರು, ಮೈಸೂರಿನಲ್ಲಿ ಯಶಸ್ವಿಯಾಗಿದ್ದು, ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ.

ಪಡಿತರ ಅಕ್ರಮ ಸುಲಭವಲ್ಲ
ರಾಜ್ಯದಲ್ಲಿ 1.10 ಕೋಟಿ ಪಡಿತರ ಚೀಟಿದಾರರು ಬಿಪಿಎಲ್ ಮತ್ತು ಅಂತೋದಯ ಅನ್ನ ಯೋಜನೆಯ ಫಲಾನುಭವಿಗಳಿದ್ದಾರೆ. ಇವರ ಪೈಕಿ 82 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಮೊಬೈಲ್  ಸಂಖ್ಯೆಗಳನ್ನು ಇಲಾಖೆಗೆ ನೀಡಿ ನೋಂದಾಯಿಸಿದ್ದಾರೆ. ಇದೆಲ್ಲವನ್ನೂ ಸೇರಿಸಿ ಇಲಾಖೆ ಉಚಿತವಾಗಿ ಅಕ್ಕಿ ಮತ್ತು ಧಾನ್ಯ ಪಡೆಯುವ ಚೀಟಿದಾರರನ್ನೆಲ್ಲಾ ಒಂದು ಜಾಲಕ್ಕೆ ತಂದಿದೆ. ಇದೇ  ಮಾದರಿ ಬಳಸಿಕೊಂಡು ಈಗ ಪ್ರತಿ ತಿಂಗಳು ಪಡಿತರ ವಿತರಣೆ ಆರಂಭಕ್ಕೂ ಮುನ್ನವೇ ಅವರಿಗೆ ಎಷ್ಟು ಪಡಿತರ ಸಿಗುತ್ತದೆ. ಅವರು ಎಷ್ಟು ಪಾವತಿಸಬೇಕು ಎನ್ನುವ ಸಂದೇಶ ನೀಡಲಾಗುತ್ತದೆ.  ಅದರಂತೆ ಅವರು ಪಡಿತರವನ್ನು ಪಡೆಯಬಹುದು. ಒಂದುವೇಳೆ ನ್ಯಾಯ ಬೆಲೆ ಅಂಗಡಿಯವರು ಹಂಚಿಕೆಯಲ್ಲಿ ವ್ಯತ್ಯಾಸ ಮಾಡಿದರೆ ಚೀಟಿದಾರರು ತಮ್ಮ ಮೊಬೈಲ್‍ಗೆ ಬಂದಿರುವ  ಸಂದೇಶವನ್ನು ತೋರಿಸಬಹುದು. ಆ ಮೂಲಕ ತಮ್ಮ ಆಹಾರ ಧಾನ್ಯದ ಹಕ್ಕು ಪ್ರತಿಪಾದಿಸಬಹುದು.

ಎಸ್‍ಎಂಎಸ್‍ನಲ್ಲಿ ಏನಿರುತ್ತೆ?
ಪ್ರತಿ ತಿಂಗಳು 1ರಿಂದ 10ನೇ ತಾರೀಖಿನವರೆಗೂ ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣೆ (ಪಡಿತರ ಖಾತ್ರಿ ಅವಧಿ) ಮಾಡಬೇಕಾಗುತ್ತದೆ. ಪಡಿತರದಾರರಿಗೆ ಪ್ರತಿ ತಿಂಗಳು 1ನೇ  ತಾರೀಖಿಗೂ ಮೂರು ದಿನಗಳ ಮುನ್ನವೇ ಎಸ್‍ಎಂಎಸ್ ಸಂದೇಶ ರವಾನಿಸುವ ಇಲಾಖೆ, ಅದರಲ್ಲಿ `ನಿಮ್ಮ ಕಾರ್ಡ್‍ಗೆ ಇಂತಿಷ್ಟು ಅಕ್ಕಿ, ಸಕ್ಕರೆ, ಗೋಧಿ,ಎಣ್ಣೆ, ಉಪ್ಪು ಹಂಚಿಕೆಯಾಗಿದೆ. ಇದಕ್ಕಾಗಿ  ನೀವು ಇಂತಿಷ್ಟು ಹಣ ಪಾವತಿಸಿ ಪಡೆಯಬಹುದು' ಎಂದು ಕಾರ್ಡ್ ದಾರರಿಗೆ ತಿಳಿಸುತ್ತದೆ. ಇಲಾಖೆ ಕಳುಹಿಸುವ ಈ ಮಾಹಿತಿ ಕನ್ನಡದಲ್ಲೇ ಇರುತ್ತದೆ. ಆದರೆ, ಅದಕ್ಕೆ ಇಂಗ್ಲಿಷ್ ಅಕ್ಷರಗಳನ್ನು  ಬಳಸಿಕೊಳ್ಳಲಾಗಿದೆ. ಈ ಮಾಹಿತಿ ಪಡೆಯಬೇಕಾದವರು ಈಗಲೂ ಇಲಾಖೆಯ 97319 79899ಗೆ ತಮ್ಮ ಕಾರ್ಡ್ ಸಂಖ್ಯೆಯನ್ನು ಕಳುಹಿಸಬಹುದು.

ದೂರು ನೀಡಲು 1967
ಇಲಾಖೆಯಿಂದ ಬಂದಿರುವ ಎಸ್‍ಎಂಎಸ್ ಪ್ರಕಾರ ನ್ಯಾಯಬೆಲೆ ಅಂಗಡಿಗಳು ಪಡಿತರ ನೀಡದಿದ್ದರೆ, ಕಾರ್ಡ್‍ದಾರರು ಉಚಿತ ದೂರವಾಣಿ ಸಂಖ್ಯೆ-1967, ಅಥವಾ 1800 425 9339  ಸಂಖ್ಯೆಗಳಿಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಅಥವಾ ಅಧಿಕಾರಿಗಳನ್ನೇ ನೇರವಾಗಿ ಭೇಟಿ ದೂರು ಸಲ್ಲಿಸಬೇಕಾದರೆ ತಾಲೂಕು ಮಟ್ಟದಲ್ಲಿ ಆಹಾರ ನಿರೀಕ್ಷಕರನ್ನು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಪ ನಿರ್ದೇಶಕರನ್ನು ಸಂಪರ್ಕಿಸಬೇಕು. ದೂರು ಕೊಡುವುದಕ್ಕೂ ಮುನ್ನ ಕಾರ್ಡ್‍ದಾರರು ಧಾನ್ಯ ಖರೀದಿಸಿ ರಸೀದಿ ಪಡೆದಿರಬೇಕು.

ಇದು ದೇಶದಲ್ಲೇ ಪ್ರಥಮ ಬಾರಿಗೆ ತಂದಿರುವ ವಿನೂತನ ಕ್ರಮ. ಇದರಿಂದ ನ್ಯಾಯಬೆಲೆ ಅಂಗಡಿಗಳಿಂದ ಅಕ್ರಮ ಅಸಾಧ್ಯ. ಮೊಬೈಲ್‍ಗೆ ಬಂದಿರುವ ಎಸ್‍ಎಂಎಸ್ ಮಾಹಿತಿ ಪ್ರಕಾರ ಪಡಿತರ  ನೀಡದಿದ್ದರೆ ತಕ್ಷಣ ಇಲಾಖೆ ಗಮನಕ್ಕೆ ತರಬೇಕು.
-ಎಸ್.ಎಸ್.ಪಟ್ಟಣಶೆಟ್ಟಿ, ಆಹಾರ ಇಲಾಖೆ ಆಯುಕ್ತ

ಈ ವ್ಯಸ್ಥೆಯಿಂದಾಗಿ ಪಡಿತರದಾರರು ಕೇಳಿ ಪಡೆಯುವುದರಿಂದ ನ್ಯಾಯಬೆಲೆ ಅಂಗಡಿಯವರು ಕಾಳರಸಂತೆಯಲ್ಲಿ ಮಾರಾಟ ಮಾಡಲು ಅಕ್ಕಿಯೇ ಉಳಿಯುವುದಿಲ್ಲ.
-ಗಂಗಾಧರ್, ಹಿರಿಯ ಉಪ ನಿರ್ದೇಶಕ, ಆಹಾರ ಇಲಾಖೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com