ಮೇಕೆದಾಟು ಯೋಜನೆ ಪೂರ್ಣಗೊಳಿಸಿಯೇ ತೀರುವೆವು: ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕದ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಮುಂದಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸಿಯೇ ತೀರುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ 15 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೇಕೆದಾಟು ಯೋಜನೆ ವಿಷಯವನ್ನು ಜಯಲಲಿತಾ ಅವರು ರಾಜಕೀಯಗೊಳಿಸುತ್ತಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಬರಲು ಯಾವುದೇ ಕಾನೂನು ತೊಡಕುಗಳಿಲ್ಲ. ಕಾವೇರಿ ನ್ಯಾಯಾಧೀಕರಣ ನೀಡಿರುವ ತೀರ್ಪನ್ನು ರಾಜ್ಯ ಉಲ್ಲಂಘಿಸುತ್ತಿಲ್ಲ ಅನಗತ್ಯವಾಗಿ ತಮಿಳುನಾಡು ಮುಖ್ಯಮಂತ್ರಿ ಅವರು ವಿಷಯವನ್ನು ರಾಜಕೀಕರಣಗೊಳಿಸಿ ಮತ್ತೆ ಕ್ಯಾತೆ ತೆಗೆಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡು ಪ್ರವಾಸ ಕೈಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನಿನ್ನೆ ಭೋಜನಕೂಟಕ್ಕೆ ಆಹ್ವಾನಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಮಾತುಕತೆ ವೇಳೆ ಪ್ರಧಾನಿಯೊಂದಿಗೆ ಕರ್ನಾಟಕದ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕಾವೇರಿ ನ್ಯಾಯಾಧೀಕರಣದ ಅಂತಿಮ ಆದೇಶಕ್ಕೆ ಈ ಮೇಕೆದಾಟು ಯೋಜನೆ ವಿರೋಧವಾಗಿದೆ ಎಂದು ದೂರು ನೀಡಿದ್ದಾರೆ. ಅಲ್ಲದೆ, ತಮಿಳುನಾಡು ಸರಕಾರದ ಸಹಕಾರವಿಲ್ಲದೇ, ಯೋಜನೆಯನ್ನು ಮುಂದುವರಿಸದಂತೆ ಕರ್ನಾಟಕಕ್ಕೆ ಸೂಚಿಸಬೇಕು. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ನ್ಯಾಯಾಧೀಕರಣ ನೀಡಿದ ಅಂತಿಮ ಆದೇಶ ಜಾರಿಗೊಳಿಸಲು ಕಾವೇರಿ ನದಿ ನಿರ್ವಹಣಾ ಮಂಡಳಿಯೊಂದನ್ನು ರಚಿಸಬೇಕೆಂದು ಹೇಳೆ ಮೋದಿ ಅವರ ಕಿವಿಹಿಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜಯಲಲಿತಾ ಅವರ ಈ ನಡಿಗೆಗೆ ತೀವ್ರ ಕೆಂಡಮಂಡಲವಾಗಿರುವ ಸಿದ್ದರಾಮಯ್ಯ ಅವರು ಇದೀಗ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರಲು ಅದಾವುದೇ ತೊಂದರೆ ಬಂದರು ಸರಿಯೇ ಯೋಜನೆಯನ್ನು ಅನುಷ್ಠಾನಕ್ಕೆ ತಂದೇ ತೀರುತ್ತೇವೆಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ