

ನವದೆಹಲಿ: ಹಿಂದಿನ ಸರ್ಕಾರಗಳಿಂದ 'ಸೋಮಾರಿತನ' ಬಳುವಳಿಯಾಗಿ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ವಿದೇಶದಲ್ಲಿ ಪ್ರಾದೇಶಿಕ ರಾಜಕೀಯವನ್ನು ಚರ್ಚಿಸುವುದರಿಂದ ಪ್ರಧಾನಿ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದೆ.
"ತಾವು ಮುನ್ನಡೆಸುವ ಕಚೇರಿಯ ಘನತೆಯನ್ನು ಪ್ರಧಾನಿ ಕಾಪಾಡಬೇಕು. ನಮ್ಮ ದೇಶದಲ್ಲಿ ಹಿಂದಿನ ಸರ್ಕಾರಗಳನ್ನು ಟೀಕಿಸಿದರೆ ತೊಂದರೆಯೇನಿಲ್ಲ. ಆದರೆ ವಿದೇಶಿ ನೆಲದಲ್ಲಿ ಹಾಗೆ ಮಾಡುವುದರಿಂದ ಹಿಂದುಳಿಯಬೇಕು" ಎಂದು ಪಕ್ಷದ ವಕ್ತಾರ ಮೀಮ್ ಅಪ್ಜಲ್ ತಿಳಿಸಿದ್ದಾರೆ.
ಯುಎಇ ಪ್ರವಾಸದಲ್ಲಿರುವ ಪ್ರಧಾನಿ "ನನಗೆ ಹಿಂದಿನ ಸರ್ಕಾರಗಳ ಪರಂಪರೆಯಿಂದ ಕೆಲವು ತೊಂದರೆಗಳಿವೆ. ನಾನು ಕೇವಲ ಒಳ್ಳೆಯ ಅಂಶಗಳನ್ನಷ್ಟೇ ತೆಗೆದುಕೊಂಡು, ತೊಂದರೆಗಳನ್ನು ಪಕ್ಕಕ್ಕಿಡಲು ಸಾಧ್ಯವಿಲ್ಲ.... ಹಿಂದಿನ ಸರ್ಕಾರದ ಸೋಮಾರಿತನ ಮತ್ತು ಅನಿಶ್ಚಿತತೆಯಿಂದ ಕೆಲವು ಕೆಲಸಗಳು ನಿಂತುಹೋಗಿವೆ.. ಅವುಗಳನ್ನು ಮತ್ತೆ ಪ್ರಾರಂಭಿಸುವುದು ನನ್ನ ಆದ್ಯತೆ" ಎಂದಿದ್ದರು.
ಪ್ರಧಾನಿ ವಿಶ್ವದ ಮೂರನೆ ಅತಿ ದೊಡ್ಡ ಐತಿಹಾಸಿಕ ಶೇಖ್ ಜಾಯದ್ ಗ್ರಾಂಡ್ ಮಸೀದಿಗೆ ಭೇಟಿ ನೀಡಿರುವ ವಿಷಯ ಪ್ರಸ್ತಾಪಿಸಿದ ಅಪ್ಜಲ್, ಅವರು ಭಾರತದಲ್ಲಿನ ಮಸೀದಿಗಳನ್ನು ಕೂಡ ಭೇಟಿ ಮಾಡಿದರೆ ಒಳ್ಳೆಯದು ಎಂದಿದ್ದಾರೆ.
"ಪ್ರಧಾನಿ ಮೋದಿ ಅವರು ವಿದೇಶಿ ನೆಲದಲ್ಲಿ ವಿಪಕ್ಷಗಳ ಬಗ್ಗೆ ಕೀಳಾಗಿ ಮಾತನಾಡುವುದು ಖಂಡನೀಯ. ಇದು ಮುಜುಗರ ತರುವಂತಹ ವಿಷಯ " ಎಂದು ಮತ್ತೊಬ್ಬ ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಟ್ವೀಟ್ ಮಾಡಿದ್ದಾರೆ.