ಸದ್ಯಕ್ಕೆ ಇಳಿಯಲ್ಲ ಈರುಳ್ಳಿ ದರ

ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶನಿವಾರ ಬೆಂಗಳೂರಿನಲ್ಲಿ ಕೆಜಿಗೆ ರು.60ರ ಗಡಿ ದಾಟಿದೆ...
ಈರುಳ್ಳಿ ದರ ಏರಿಕೆ (ಸಂಗ್ರಹ ಚಿತ್ರ)
ಈರುಳ್ಳಿ ದರ ಏರಿಕೆ (ಸಂಗ್ರಹ ಚಿತ್ರ)

ಬೆಂಗಳೂರು: ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶನಿವಾರ ಬೆಂಗಳೂರಿನಲ್ಲಿ ಕೆಜಿಗೆ ರು.60ರ ಗಡಿ ದಾಟಿದೆ. ಇದರಿಂದ ಈರುಳ್ಳಿ ಬೆಳೆಗಾರರಿಗೆ ಕೊಂಚ ಸಂತಸವಾಗಿ ದ್ದರೆ, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.

ಮಹಾರಾಷ್ಟ್ರದಿಂದ ಈರುಳ್ಳಿ ಬರುವವರೆಗೂ ರಾಜ್ಯದ ಗ್ರಾಹಕರು ಹೆಚ್ಚಿನ ಬೆಲೆ  ತೆರಲೇಬೇಕಾಗಿದೆ. ಪ್ರತಿ ವರ್ಷ ಎಪಿಎಂಸಿಗೆ ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡಗಳಿಂದ ಈ ಹಂಗಾಮಿನಲ್ಲಿ 400ರಿಂದ 500 ಟ್ರಕ್‍ಗಳಷ್ಟು ಈರುಳ್ಳಿ ಪೂರೈಕೆ ಆಗುತ್ತಿತ್ತು. ಆದರೆ ಈ ಬಾರಿ ಇಳುವರಿ ಶೇ.50ರಷ್ಟು ಕಡಿಮೆಯಾಗಿದೆ. ಬೆಂಗಳೂರಿನ ವಿವಿಧಮಾರುಕಟ್ಟೆಗಳಲ್ಲಿ ಶನಿವಾರ ಈರುಳ್ಳಿ ಬೆಲೆ ಗಣನೀಯವಾಗಿ ಏರಿಕೆ ಕಂಡು ಪ್ರತಿ ಕೆಜಿಗೆ ರು.60ಕ್ಕೂ ಹೆಚ್ಚು ದಾಟಿದೆ. ಮಾಲ್‍ಗಳಲ್ಲೂ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ.

ಇದರ ಬೆನ್ನಲ್ಲಿಯೇ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನೂರಾರು ಲಾರಿಗಳಲ್ಲಿ ಈರುಳ್ಳಿ ನಗರಕ್ಕೆ ಪೂರೈಕೆ ಆಗುತ್ತಿದೆ. ಯಶವಂತಪುರ ಹಾಗೂ ಕೆ.ಆರ್.ಮಾರುಕಟ್ಟೆ ಸೇರಿದಂತೆ ಪ್ರಮುಖ  ಮಾರುಕಟ್ಟೆಗಳಿಗೆ ಬಾಗಲಕೋಟೆ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಿಂದ ಈರುಳ್ಳಿ ಬರುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಆಗದಿರುವುದು ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣ.

ಏಪ್ರಿಲ್ ಹಾಗೂ ಮೇನಲ್ಲಿ ಬಿತ್ತನೆ ಆಗಿದ್ದ ಬೆಳೆಗೆ ತಿಂಗಳೊಳಗೇ ಕೆಲವು ಜಿಲ್ಲೆಗಳಲ್ಲಿ ಸುರಿದ ಆಲಿಕಲ್ಲು ಮಳೆ ಅರ್ಧ ಫಸಲು ನಾಶಪಡಿಸಿದೆ. ಬಿತ್ತನೆ ಸಂದರ್ಭದಲ್ಲಿ ಕೆಲವು ಕಡೆ ಅಧಿಕ  ಮಳೆಯಿಂದಾಗಿಯೂ ಶೇ.50ರಷ್ಟು ಮಾತ್ರ ಉತ್ತಮ ಫಸಲು ದೊರೆತಿರುವ ಕಾರಣ ಉತ್ಪಾದನೆ ಪ್ರಮಾಣ ಕುಸಿದು ಬೆಲೆ ಏರಿಕೆಯಾಗಿದೆ.

ಈ ಮಧ್ಯೆ ಚಿತ್ರದುರ್ಗ, ಬಳ್ಳಾರಿಯಲ್ಲಿ ಸಕಾಲಕ್ಕೆ ಮಳೆ ಬಾರದ್ದರಿಂದ ಬೆಳೆ ಕೂಡ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಈ ವರ್ಷ ಕೇವಲ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿ ಕೂಡ ಈರುಳ್ಳಿ ಬೆಳೆ ಇಳುವರಿ ಕುಂಠಿತವಾಗಿದೆ. ಜುಲೈ, ಆಗಸ್ಟ್ ನಲ್ಲಿ ಚಿತ್ರದುರ್ಗದ ಹೊಸ ದುರ್ಗದಿಂದ, ಸೆಪ್ಟೆಂಬರ್‍ನಿಂದ ಜನವರಿಯವರೆಗೆ ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಜನವರಿ ನಂತರ  ಮಹಾರಾಷ್ಟ್ರದ ನಾಸಿಕ್‍ನಿಂದ ಪೂರೈಕೆ ಆಗುತ್ತಿತ್ತು.

ಜನವರಿ ಬದಲಿಗೆ ನಾಸಿಕ್‍ನಿಂದ ಈಗಿನಿಂದಲೇ ಈರುಳ್ಳಿ ತರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಬೇರೆ ರಾಜ್ಯಗಳಿಂದ ಈರುಳ್ಳಿ ಪೂರೈಕೆ  ಆಗುವುದರಿಂದ ಸಾಗಣೆ ವೆಚ್ಚದಿಂದಾಗಿ ಬೆಲೆ ದುಬಾರಿ ಆಗಲಿದೆ. ಈಗಾಗಲೇ ಬಿತ್ತನೆ ಆಗಿರುವ ಬೆಳೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೊಯ್ಲು ಆರಂಭವಾಗುವುದರಿಂದ ಅಲ್ಲಿಯವರೆಗೂ ಬೆಲೆ  ಕುಸಿತ ನಿರೀಕ್ಷಿಸುವಂತಿಲ್ಲ.

ಈ ವರ್ಷ ಪಾಕಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಂಡಿರುವ ಕಾರಣ ಬೆಲೆ ಕಡಿಮೆ ಇದೆ ಅನ್ನಬಹುದು. ಇಲ್ಲದಿದ್ದರೆ ರು. 80 ದಾಟುವ ಸಾಧ್ಯತೆಯಿತ್ತು. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ  ಬೆಲೆ ಸ್ಥಿರವಾಗುವ ಸಾಧ್ಯತೆಯಿದೆ
-ಬಿ.ಎಲ್. ಶಂಕರಪ್ಪ , ಅಧ್ಯಕ್ಷ,
ಎಪಿಎಂಸಿ ಯಾರ್ಡ್ ಮರ್ಚೆಂಟ್ ಅಸೋಸಿಯೇಷನ್

ಈರುಳ್ಳಿ ರಫ್ತು ತಡೆಗೆ ಆಮದು ಸುಂಕ ಹೆಚ್ಚಳ

ನವದೆಹಲಿ: ದೇಶಿಯ ಮಾರುಕಟ್ಟೆಯಲ್ಲಿ ಈರುಳ್ಳಿ ದರ ತಗ್ಗಿಸುವ ಕ್ರಮವಾಗಿ ಕೇಂದ್ರ ಸರ್ಕಾರ ಅಖಿಪಿs.ನ ಮೇಲೆ ತಡೆ ಹಾಕಲು ಮುಂದಾಗಿದೆ. ಅದಕ್ಕಾಗಿ ಪ್ರತಿ ಟನ್ ಮೇಲೆ 700 ಡಾಲರ್‍ನಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಿದೆ. ಸದ್ಯ ಅದು ಪ್ರತಿ ಟನ್‍ಗೆ 425 ಡಾಲರ್ ಇದೆ. ಈ ಕ್ರಮದಿಂದಾಗಿ ರಫ್ತುದಾರರು ವಿದೇಶಕ್ಕೆ ಈರುಳ್ಳಿ ಕಳುಹಿಸುವುದರ ಬದಲು ದೇಶಿಯ ಮಾರುಕಟ್ಟೆಯಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಮುಂದಾಗಲಿದ್ದಾರೆ. ಇದರಿಂದಾಗಿ ಬೆಲೆ ತಗ್ಗಲಿದೆ ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರ.

ಕಠಿಣ ಕ್ರಮ ಕೈಗೊಳ್ಳಿ
ಕಾನೂನು ಬಾಹಿರವಾಗಿ ಮಾರುಕಟ್ಟೆಯಲ್ಲಿ ಕೃತಕ ಕೊರತೆ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.  ಆದರೆ ರಾಜ್ಯ ಸರ್ಕಾರಗಳು ಈ ಕ್ರಮ ಕೈಗೊಂಡಿಲ್ಲ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com