ಮೋದಿಗೆ ಮಹದಾಯಿ ಮೊರೆ

ಮಹದಾಯಿ ಜಲವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇದನ್ನು ಪ್ರಧಾನಿ ಅವರಿಗೆ ನಿಯೋಗದ ಮೂಲಕ ಮನವರಿಕೆ ಮಾಡಿಕೊಡಬೇಕು...
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ಮಹದಾಯಿ ಜಲವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಇದನ್ನು ಪ್ರಧಾನಿ ಅವರಿಗೆ ನಿಯೋಗದ ಮೂಲಕ ಮನವರಿಕೆ ಮಾಡಿಕೊಡಬೇಕು.

ಜತೆಗೆ, ಗೋವಾ ಹಾಗೂ ಮಹಾರಾಷ್ಟ್ರ ಸಿಎಂ ಜತೆ ಚರ್ಚಿಸಿ ನ್ಯಾಯಾಲಯದ ಹೊರಗೆ ರಾಜಿ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಅಲ್ಲದೆ, ಪ್ರಧಾನಿ ಭೇಟಿ ಮಾಡುವ ಸರ್ವಪಕ್ಷ ನಿಯೋಗದಿಂದ ರಾಜ್ಯದ ಬರ ಪರಿಹಾರಕ್ಕೆ ಮನವಿ ಸೇರಿದಂತೆ ಕಬ್ಬು, ರೇಷ್ಮೆ, ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರಿಗೂ ಪರಿಹಾರ ನೀಡುವಂತೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಸರ್ವಪಕ್ಷ ನಾಯಕರ ಸಭೆ ನಡೆಯಿತು.

ಪ್ರಧಾನಿ ನರೇಂದ್ರ ಮೋದಿಯವರನ್ನು ಸರ್ವಪಕ್ಷ ನಾಯಕರ ನಿಯೋಗ ಸೋಮವಾರ ಸಂಜೆ 4 ಗಂಟೆಗೆ ಭೇಟಿ ಮಾಡುವ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ನಾಯಕರೂ ರಾಜಕೀಯವನ್ನು ಬದಿಗಿಟ್ಟು ರಾಜ್ಯದ ಹಿತದೃಷ್ಟಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು.

ಒಕ್ಕೊರಲ ನಿರ್ಧಾರ
ಸುಪ್ರೀಂಕೋರ್ಟ್ ನಿರ್ದೇಶನದಂತೆ ಅಂತಾರಾಜ್ಯ ಜಲವಿವಾದ ಕಾಯಿದೆ1956ರ ಅಡಿಯಲ್ಲಿ ರಚಿಸಿರುವ ನ್ಯಾಯಾಧಿಕರಣದ ಮುಂದೆ ಗೋವಾ ಸರ್ಕಾರ ಸಲ್ಲಿಸಿರುವ ತಕರಾರು ಅರ್ಜಿಯನ್ನು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಮಾತುಕತೆಯ ಮೂಲಕ ಬಗೆಹರಿಸಬೇಕು. ಇದಕ್ಕೆ ಪ್ರಧಾನಿಯವರೇ ಮಧ್ಯಸ್ಥಿಕೆ ವಹಿಸಬೇಕು. ಈ ಬಗ್ಗೆ ಪ್ರಧಾನಿ ಅವರ ಮನವೊಲಿಸಬೇಕೆಂದು ಸರ್ವ ಪಕ್ಷಗಳ ಮುಖಂಡರು, ಮಠಾಧೀಶರು, ರೈತ ನಾಯಕರು, ಹೋರಾಟಗಾರರು ಹಾಗೂ ಕಾನೂನು ತಜ್ಞರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ 7.56 ಟಿಎಂಸಿ ಕುಡಿಯುವ ನೀರು ಪೂರೈಸಲಿರುವ ಈ ಯೋಜನೆಯನ್ನು ಮಾನವೀಯತೆ ದೃಷ್ಟಿಯಿಂದ ಪರಿಗಣಿಸಬೇಕು. ಕಳೆದ ಮೂರೂವರೆ ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ ಈ ಯೋಜನೆಯನ್ನು ಆದ್ಯತೆ ಮೇರೆಗೆ ಪರಿಗಣಿಸಿ ಚಾಲನೆ ನೀಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಎಲ್ಲರೂ ಒಮ್ಮತ ಸೂಚಿಸಿದರು.

ರಾಜಕೀಯ ಬೇಡ
ಮಹದಾಯಿ ರಾಜ್ಯದ ಜನರ ಸಮಸ್ಯೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸಮಸ್ಯೆ ಬಗೆಹರಿಸಲು ಎಲ್ಲರೂ ಒಂದಾಗಿ ಪ್ರಯತ್ನಿಸೋಣ ಎಂದು ಸಭೆಯಲ್ಲಿ ಎಲ್ಲರೂ ಅಭಿಪ್ರಾಯಪಟ್ಟರು. ರಾಜ್ಯದ ಸರ್ವಪಕ್ಷ ನಿಯೋಗ ಸೋಮವಾರ ಸಂಜೆ 4ಕ್ಕೆ ಪ್ರಧಾನಿಯವರನ್ನು ಭೇಟಿಯಾದಾಗ ಎಲ್ಲರೂ ಸೇರಿ ಪ್ರಧಾನಿಯವರ ಮನವೊಲಿಸೋಣ ಎಂದು ನಿರ್ಧರಿಸಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿದ್ದು ಮಹದಾಯಿ ಅಲ್ಲದೆ, ರಾಜ್ಯದಲ್ಲಿ ಉಂಟಾಗಿರುವ ಬರಗಾಲ, ಕಬ್ಬು, ರೇಷ್ಮೆ, ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಗಳ ಬಗ್ಗೆಯೂ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಟ್ಟು ಹೆಚ್ಚಿನ ನೆರವು ಕೋರಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ, ಮಹಾರಾಷ್ಟ್ರದ ಪ್ರತಿಪಕ್ಷ ನಾಯಕರ ಜೊತೆ ಮಾತುಕತೆ ನಡೆಸಲಿ. ನಾವು ಆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮನವೊಲಿಸುತ್ತೇವೆ. ಈ ವಿಚಾರದ ಬಗ್ಗೆ ಪ್ರಧಾನಿ ಯವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡೋಣ ಎಂದು ಸಭೆಯಲ್ಲಿ ತಿಳಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗಾರರಿಗೆ ವಿವರಿಸಿದರು.

ವಿಷಯವು ನ್ಯಾಯಾಧಿಕರಣದಲ್ಲಿ ವಿಚಾರಣಾ ಹಂತದಲ್ಲಿದ್ದರೂ, ರಾಜಿ ಸಂಧಾನಕ್ಕೆ ಯಾವುದೇ ಕಾನೂನು ತೊಡಕುಗಳಿಲ್ಲ. ತೆಲುಗು ಗಂಗಾ ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ಮಧ್ಯಸ್ಥಿಕೆಯಿಂದ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಕೃಷ್ಣಾ ನದಿಯಿಂದ ಚೆನ್ನೈ ಮಹಾನಗರಕ್ಕೆ ಕುಡಿಯುವ ನೀರು ಒದಗಿಸುವ ಮಹತ್ವದ ನಿರ್ಧಾರ ಕೈಗೊಂಡಿರುವ ಉತ್ತಮ ಉದಾಹರಣೆ ನಮ್ಮ ಮುಂದಿದೆ. ಅದೇ ಮಾದರಿಯಲ್ಲಿ, ಪ್ರಧಾನ ಮೋದಿಯವರು ಮನಸ್ಸು ಮಾಡಿದಲ್ಲಿ ಈ ಯೋಜನೆಗೂ ಹಸಿರು ನಿಶಾನೆ ದೊರಕಿಸಿಕೊಡಬಹುದು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಾವ್ ರೆಡಿ
ರಾಜ್ಯದ ನೆಲಜಲ ಮತ್ತು ಭಾಷೆಯ ಚಾರದಲ್ಲಿ ನಾವೆಲ್ಲರೂ ಒಂದೇ ಎಂದು ಸ್ಪಷ್ಟಪಡಿಸಿದ ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ತಾವು ಸದಾ ಸಿದ್ಧ ಎಂದರು. ಮಹದಾಯಿ ಜಲ ಯೋಜನೆ ಹಿನ್ನೆಲೆ ಮತ್ತು ಕಾನೂನು ಅಂಶಗಳ ಬಗ್ಗೆ ವಿವರ ನೀಡಿದ ಹಿರಿಯ ವಕೀಲ ಮೋಹನ್ ಕಾತರಕಿ, ಪ್ರಧಾನಿಗಳ ಮಧ್ಯಸ್ಥಿಕೆ ಮತ್ತು ಮಹಾರಾಷ್ಟ್ರ, ಗೋವಾ ಸರ್ಕಾರ ಒಪ್ಪಿದರೆ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಅಭಿಪ್ರಾಯಪಟ್ಟರು.

ಹೋರಾಟಗಾರರ ಆಗ್ರಹ
ಗೋವಾ ಬಳಸಿಕೊಳ್ಳದ ನೀರು ಸಮುದ್ರ ಸೇರುತ್ತಿದೆ. ಅದನ್ನು ನಮಗೆ ಕೊಡಲಿ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ. ಇದಕ್ಕೆ ಸೂತ್ರ ಕಂಡು ಹಿಡಿಯಬೇಕು. ಬಿಜೆಪಿ ನಾಯಕರಲ್ಲಿ ನಮ್ಮ ಮನವಿ ಎಂದರೆ, ಅವರು ಪ್ರಧಾನಿಯವರ ಮೇಲೆ ಅವರು ಹೆಚ್ಚಿನ ಒತ್ತಡ ಹಾಕಲಿ. ಗೋವಾದಲ್ಲಿ ನಿಮ್ಮ ಪಕ್ಷದ ಸರ್ಕಾರ ಇದೆ. ಅವರ ಮನವೊಲಿಸುವ ಕೆಲಸ ಮಾಡಿ. ವಿವಾದ ಬಗೆಹರಿಸಲು ಎಲ್ಲ ಪಕ್ಷದ ನಾಯಕರು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಮಹಾದಾಯಿ ಹೋರಾಟ ಸಮಿತಿ ಮುಖಂಡರು ಹೇಳಿದರು.

ಸಚಿವರಾದ ಎಂ.ಬಿ. ಪಾಟೀಲ್, ಶಿವರಾಜ ಸಂಗಪ್ಪ ತಂಗಡಗಿ, ಟಿ.ಬಿ. ಜಯಚಂದ್ರ , ಎಚ್. ಕೆ. ಪಾಟೀಲ್, ಸತೀಶ್ ಎಲ್. ಜಾರಕಿಹೊಳಿ, ಎಚ್. ಎಸ್. ಮಹದೇವ ಪ್ರಸಾದ್, ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಸಂಸದರಾದ ಎಂ.ವೀರಪ್ಪ ಮೊಯಿಲಿ, ಆಸ್ಕರ್ ಫರ್ನಾಂಡೀಸ್, ಕೆ.ಎಚ್.ಮುನಿಯಪ್ಪ ಮತ್ತು ಬಿ.ಕೆ. ಹರಿಪ್ರಸಾದ್, ಬಿಜೆಪಿಯ ಪ್ರಭಾಕರ ಕೋರೆ, ಸುರೇಶ್ ಅಂಗಡಿ, ಪಿ.ಸಿ. ಗದ್ದಿಗೌಡರ್, ಜೆಡಿಎಸ್ ಮುಖಂಡರಾದ ಸಿ.ಎಸ್. ಪುಟ್ಟರಾಜು, ಬಸವರಾಜ ಹೊರಟ್ಟಿ, ಎನ್.ಎಚ್. ಕೋನರೆಡ್ಡಿ ಇದ್ದರು.

ಕೂಡಲ ಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ, ಕಾನೂನು ತಜ್ಞರಾದ ಮೋಹನ್ ಕಾತರಕಿ, ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು, ರೈತ ಮುಖಂಡರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com