ಆಯುರ್ವೇದ ಚಿಕಿತ್ಸೆ ಕೋರಿದ ಮದನಿ

ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿಗೆ ಇಂಗ್ಲಿಷ್ ಚಿಕಿತ್ಸೆ ಸಾಕಾಗಿದ್ದು ಕೇರಳದ ಆಯುರ್ವೇದ ಚಿಕಿತ್ಸೆ ಬೇಕಂತೆ...
ಬೆಂಗಳೂರು ಸ್ಫೋಟದ ಆರೋಪಿ ಅಬ್ದುಲ್ ನಾಸಿರ್ ಮದನಿ (ಸಂಗ್ರಹ ಚಿತ್ರ)
ಬೆಂಗಳೂರು ಸ್ಫೋಟದ ಆರೋಪಿ ಅಬ್ದುಲ್ ನಾಸಿರ್ ಮದನಿ (ಸಂಗ್ರಹ ಚಿತ್ರ)

ಬೆಂಗಳೂರು: ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿಗೆ ಇಂಗ್ಲಿಷ್ ಚಿಕಿತ್ಸೆ ಸಾಕಾಗಿದ್ದು ಕೇರಳದ ಆಯುರ್ವೇದ ಚಿಕಿತ್ಸೆ ಬೇಕಂತೆ.

ಹೀಗಾಗಿ, ತನಗೆ ಕೇರಳದಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಿ ಎಂದು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಕ್ಕರೆ ಖಾಯಿಲೆ ಸೇರಿದಂತೆ ವಿವಿಧ ಕಾರಣಗಳಿಂದ ಚಿಕಿತ್ಸೆ ಬೇಕೆಂದು ಜೈಲಿನಲ್ಲಿ ಕಾಲ ಕಳೆಯುವುದರಿಂದ ಪಾರಾಗಿರುವ ಮದನಿ, ವೈಟ್‍ ಫೀಲ್ಡ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಜಾಮೀನು ಪಡೆಯುವ ಎಲ್ಲ ಪ್ರಯತ್ನಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಲು ಪ್ರಯತ್ನ ನಡೆಸಿದ್ದಾನೆ. ಕೇರಳ ಆಯುರ್ವೇದ ಚಿಕಿತ್ಸೆ ಪಡೆಯಲು ತೆರಳಲು ಅವಕಾಶ ಕಲ್ಪಿಸಿ ಎಂದು ಅರ್ಜಿ ಸಲ್ಲಿಸಿದ್ದು ಇದಕ್ಕೆ ಆಕ್ಷೇಪಣೆ  ಸಲ್ಲಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಡಿಸಿಪಿ ಜಿತೇಂದ್ರನಾಥ ತಿಳಿಸಿದ್ದಾರೆ.

ಜೈಲಿನಲ್ಲಿ ಚಿಕಿತ್ಸೆ ವ್ಯವಸ್ಥೆ ಇದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಂದು ನ್ಯಾಯಾಲಯಕ್ಕೆ ಹೋಗಿದ್ದ ಮದನಿ ಅದರಲ್ಲಿ ಯಶಸ್ಸು ಕಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾನೆ. ಈ ನಡುವೆ ಆಯುರ್ವೇದ ಚಿಕಿತ್ಸೆ ಬೇಕೆಂದು ಅರ್ಜಿ ಸಲ್ಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರೊಂದಿಗೆ ಚರ್ಚಿಸಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು  ಡಿಸಿಪಿ ಜಿತೇಂದ್ರನಾಥ್ ತಿಳಿಸಿದರು.

ಸಾಕ್ಷಿಗಳ ಮೇಲೆ ಬೆದರಿಕೆ: ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೆಲ ಸಾಕ್ಷಿಗಳ ಮೇಲೆ ಒತ್ತಡ ಹಾಕಿ ಅವರು ನ್ಯಾಯಾಲಯದಲ್ಲಿ ತಮ್ಮ ಪರ ಸಾಕ್ಷಿ ಹೇಳುವಂತೆ ಮದನಿ ಹಾಗೂ ಮತ್ತೊಬ್ಬ ಆರೋಪಿ ಟಿ. ನಾಸೀರ್ ಯತ್ನಿಸುತ್ತಿದ್ದಾರೆ. ಆದರೂ, ಹಲವು ಸಾಕ್ಷಿಗಳು ನಡೆದ ಘಟನೆಯ ಬಗ್ಗೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನು ಹಲವು ಸಾಕ್ಷಿಗಳ ಹೇಳಿಕೆ ನ್ಯಾಯಾಲಯದ ಮುಂದೆ  ದಾಖಲಾಗಬೇಕಿದೆ. ಆದರೆ, ಅವರನ್ನು ಪತ್ತೆ ಹಚ್ಚುತ್ತಿರುವ ಮದನಿ ಪರ ವ್ಯಕ್ತಿಗಳು ಸಾಕ್ಷಿ ಹೇಳದಂತೆ ಒತ್ತಡ ಹೇರುತ್ತಿದ್ದಾರೆ. ಇತ್ತೀಚೆಗೆ ಕೇರಳ ಪೊಲೀಸರು ಮದನಿ ಸಹಚರ ನೋರ್ವನನ್ನು  ಬಂಧಿಸಿದ್ದರು. ಆರೋಪಿ ಬಳಿ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಸಾಕ್ಷಿಗಳ ಹೆಸರುಗಳಿದ್ದು ಅವರ ಮೇಲೆ ಒತ್ತಡ ಹೇರಲು ಆ ಪಟ್ಟಿಯನ್ನು ಇರಿಸಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ತಂಡ ಅಲ್ಲಿಗೆ ತೆರಳಿ ಮಾಹಿತಿಯನ್ನು ಕಲೆ ಹಾಕಿದೆ. ಈ ವೇಳೆ ಆರೋಪಿ ಬಳಿ ಸಿಕ್ಕ ಪತ್ರವೂ ಆರೋಪಿ ನಾಸೀರ್ ಬರೆದುಕೊಟ್ಟಿದ್ದು ಎಂದು ಖಚಿತವಾಗಿದೆ  ಎಂದು ಸಿಸಿಬಿ ಅಧಿಕಾರಿ ಹೇಳಿದರು. 2008ರ ಜುಲೈ ತಿಂಗಳಲ್ಲಿ ನಗರದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿ ಓರ್ವ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು. ಇದರಲ್ಲಿ ಮದನಿ ಸೇರಿ 32ಕ್ಕೂ ಅಧಿಕ ಆರೋಪಿಗಳಿದ್ದಾರೆ.

ಪೊಲೀಸರ ವಿರುದ್ಧ ಹಾಗೂ ಮದನಿ ಪರ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವಂತೆ ಸಾಕ್ಷಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ರೀತಿ ಸಾಕ್ಷಿಗಳ ಹೆಸರು ಹಾಗೂ ವಿವರ ಇಟ್ಟುಕೊಂಡಿದ್ದ  ಆರೋಪಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದರು. ಆ ಪ್ರಕರಣವೇ ನಗರಕ್ಕೆ ವರ್ಗಾವಣೆಯಾಗುತ್ತದಾ ಅಥವಾ ಆರೋಪಿಗಳನ್ನು ನಗರಕ್ಕೆ ಕರೆತಂದು ವಿಚಾರಣೆ ನಡೆಸಬೇಕೆ ಎನ್ನುವ  ಬಗ್ಗೆ ಚರ್ಚೆ ನಡೆಯುತ್ತಿದೆ.
-ಜಿತೇಂದ್ರನಾಥ್ ಡಿಸಿಪಿ ಸಿಸಿಬಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com