ಸಕ್ಕರೆ ಕಾರ್ಖಾನೆಗಳ ಮೌನ

ಕಬ್ಬು ಬೆಳೆಗಾರರ ಬಾಕಿ ಪಾವತಿ ಸೇರಿದಂತೆ ಮುಂದಿನ ಸಾಲಿನ ಪಾವತಿ ವಿಚಾರವಾಗಿ ಕಬ್ಬು ಬೆಳೆಗಾರರ ಆಗ್ರಹ ಮತ್ತು ಸರ್ಕಾರದ ಸೂಚನೆಗಳಿಗೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಮೌನ ಉತ್ತರ ನೀಡಿವೆ...
ವಿಧಾನಸೌಧದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ಕಬ್ಬು ಬೆಳಗಾರರ ಸಭೆ
ವಿಧಾನಸೌಧದಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ಕಬ್ಬು ಬೆಳಗಾರರ ಸಭೆ

ಬೆಂಗಳೂರು: ಕಬ್ಬು ಬೆಳೆಗಾರರ ಬಾಕಿ ಪಾವತಿ ಸೇರಿದಂತೆ ಮುಂದಿನ ಸಾಲಿನ ಪಾವತಿ ವಿಚಾರವಾಗಿ ಕಬ್ಬು ಬೆಳೆಗಾರರ ಆಗ್ರಹ ಮತ್ತು ಸರ್ಕಾರದ ಸೂಚನೆಗಳಿಗೆ ರಾಜ್ಯದ ಸಕ್ಕರೆ  ಕಾರ್ಖಾನೆಗಳು ಮೌನ ಉತ್ತರ ನೀಡಿವೆ.

ಕಬ್ಬಿಗೆ ರಾಜ್ಯದ ಸಲಹಾ ದರ ನಿಗದಿ ಕುರಿತಾಗಿ ವಿಧಾನಸೌಧದಲ್ಲಿ ಮಂಗಳವಾರ ಸಕ್ಕರೆ ಸಚಿವ ಮಹದೇವ ಪ್ರಸಾದ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ  ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಮುಖಂಡ ತೇಜಸ್ವಿ ಪಟೇಲ್, ಪುಟ್ಟಣ್ಣಯ್ಯ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಬ್ಬು ಬೆಲೆ ವಿಚಾರವಾಗಿ  ಸಾಕಷ್ಟು ಚರ್ಚೆ ನಡೆಯಿತಾದರೂ ಕಾರ್ಖಾನೆ ಮಾಲಿಕರು ಮಾತ್ರ ಯಾವುದೇ ನಿಲುವು ಸ್ಪಷ್ಟಪಡಿಸಲಿಲ್ಲ.

ಎಚ್ಚರಿಕೆ: ಸಕ್ಕರೆ ಕಾರ್ಖಾನೆಗಳು ಈ ವರ್ಷ ಎಫ್ ಆರ್‍ಪಿ ದರವನ್ನೇ ಕಬ್ಬು ಬೆಳೆಗಾರರಿಗೆ ನೀಡಬೇಕೆಂಬ ರೈತರ ಒತ್ತಾಯ, ಸರ್ಕಾರದ ಸೂಚನೆಗೆ ಪ್ರತಿಯಾಗಿ, ಕಾರ್ಖಾನೆಗಳ ಪ್ರಮುಖರು ತಮಗೆ ಸಹಾಯ, ಸಹಕಾರದ ಅಗತ್ಯವಿದೆ ಎಂದು ವಾದ ಮಂಡಿಸಿದರು. ಆದರೆ, ಸರ್ಕಾರ ಮಾತ್ರ ಖಡಕ್ ಸಂದೇಶ ರವಾನಿಸಿ, ನೀವು ಮೊದಲು ಬಾಕಿ ಹಣವನ್ನು ಪಾವತಿಸಿ ಬನ್ನಿ ಎಂದು ಸೂಚನೆ  ನೀಡಿದೆ. ಸಭೆಯಲ್ಲಿದ್ದ ಸಚಿವ ಮಹದೇವ ಪ್ರಸಾದ್, ನಿಮ್ಮ ಅಹವಾಲು ಆಲಿಸೋಣ, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸಹಾಯ ಸಹಕಾರ ನೀಡೋಣ. ಆದರೆ, ಮೊದಲು ನೀವು ರೈತರಿಗೆ  ನೀಡಬೇಕಾದ ಬಾಕಿ ಪಾವತಿ ಮಾಡಬೇಕೆಂದು ಕಾರ್ಖಾನೆಗಳ ಪ್ರಮುಖರಿಗೆ ಸ್ಪಷ್ಟಪಡಿಸಿದರು.

ಬಾಕಿ ಪಾವತಿಗೆ ಆದ್ಯತೆ:
ಸಭೆಯ ಆರಂಭದಲ್ಲಿ ಕಬ್ಬು ಬೆಲೆ ಬಾಕಿ ವಿಚಾರವನ್ನು ಪ್ರಸ್ತಾಪಿಸಿದ ರೈತ ಮುಖಂಡರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 201415ನೇ ಸಾಲಿನಲ್ಲಿ 9 ಸಾವಿರ ಬೆಳೆಗಾರರಿಗೆ ಎಫ್  ಆರ್‍ಪಿ ದರವಿರಲಿ, ಒಂದು ಪೈಸೆಯೂ ಪಾವತಿಯಾಗಿಲ್ಲ, ಸರ್ಕಾರ ನಿದ್ದೆ ಮಾಡುತ್ತಿದೆಯೇ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಸ್ಪಂದಿಸಿದ  ಸಚಿವರು, ಕಬ್ಬು ಸರಬರಾಜು ಮಾಡಿ ಒಂದು ರೂಪಾಯಿ ಹಣವನ್ನೂ ಪಡೆದುಕೊಳ್ಳದ ರೈತರ ಪಟ್ಟಿ ಮಾಡಿ ತಕ್ಷಣವೇ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಹಿನ್ನೆಲೆಯಲ್ಲಿ, ಸರ್ಕಾರ ವಶಕ್ಕೆ ಪಡೆದುಕೊಂಡಿರುವ ಸಕ್ಕರೆಯನ್ನು ಹರಾಜು ಮಾಡಿ ರೈತರಿಗೆ ಪಾವತಿ ಮಾಡುವ ಜೊತೆಗೆ ಹಣ ಪಾವತಿ  ಮಾಡಲು ಹಿಂದೇಟು ಹಾಕಿದ ಕಾರ್ಖಾನೆಗಳ  ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರ ಒತ್ತಾಯಿಸಿದರು. ಅದಕ್ಕೆ ಸರ್ಕಾರದಿಂದ ಸಮ್ಮತಿಯೂ ವ್ಯಕ್ತವಾಯಿತು. 201314 ಹಾಗೂ 201415ನೇ ಸಾಲಿನಲ್ಲಿ ರೈತರಿಗೆ ಒಟ್ಟು  ರು.1,400 ಕೋಟಿ ರೂಪಾಯಿ ಬಾಕಿ ಪಾವತಿಯಾಗಬೇಕಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದರು.

ಹೋರಾಟದ ಎಚ್ಚರಿಕೆ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಪುಟ್ಟಣ್ಣಯ್ಯ, ಎಫ್ ಆರ್‍ಪಿ ದರದಂತೆಯೇ ರೈತರಿಗೆ ಪಾವತಿ ಮಾಡಬೇಕು ಎಂಬ ಬೇಡಿಕೆ  ಇಟ್ಟಿದ್ದೇವೆ. ಜೊತೆಗೆ ಸಕ್ಕರೆ ಅಭಿವೃದ್ಧಿ ನಿಧಿ ಸ್ಥಾಪಿಸಬೇಕು, ಈ ಮೂಲಕ ನಿರಂತರವಾಗಿ ಎದುರಾಗುತ್ತಿರುವ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದೇವೆ ಎಂದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘವು ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಮ್ಮ ಬೇಡಿಕೆಗೆ  ಸ್ಪಂದನೆ ದೊರೆಯದೇ ಹೋದಲ್ಲಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ವಿವರಿಸಿದರು.

ಕಟಾವು, ಸಾಗಣೆಗೊಂದು ನಿಕ್ಸ: ಕಬ್ಬು ಕಟಾವು ಮತ್ತು ಸಾಗಣೆ ವಿಚಾರದಲ್ಲಿ ವಂಚನೆಯಾಗುತ್ತಿದ್ದು, ಈ ಸಮಸ್ಯೆಗೊಂದು ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ರೈತರ ಆಗ್ರಹವಾಗಿತ್ತು. ಸರ್ಕಾರ  ಈಗ ಒಂದು ಸ್ಪಷ್ಟ ನೀತಿ ರೂಪಿಸಿದ್ದು, ಇಳುವರಿ ಆಧಾರದ ಮೇಲೆ ಎಫ್  ಆರ್‍ಪಿ ದರವನ್ನು ವಿತರಿಸುವಾಗ ಕಿಲೋಮೀಟರ್ ಆಧಾರದಲ್ಲಿ ಸಾಗಣೆ ದರ ಮತ್ತು ಕಟಾವು ದರವನ್ನು ಲೆಕ್ಕಾಹಾಕಿ ಬಾಕಿ  ಹಣವನ್ನು ರೈತರಿಗೆ ಪಾವತಿಸಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಕೇಂದ್ರ ಸರ್ಕಾರವು ಸಕ್ಕರೆ ಇಳುವರಿ ಮೇಲೆ ಎಫ್  ಆರ್‍ಪಿ ದರ ನಿಗದಿ ಮಾಡಿದೆ. ಶೇ.9.5ರಷ್ಟು ಇಳುವರಿಗೆ ಎಫ್ ಆರ್‍ಪಿ  ದರ ರು.2,300. ನಂತರದ ಪ್ರತಿ ಶೇ.1ರ ಹೆಚ್ಚಳಕ್ಕೆ ರು.245 ಹೆಚ್ಚಳವಾಗುತ್ತದೆ. ಶೇ.12.5ರಷ್ಟು ಇಳುವರಿಗೆ ರು.3,090 ದೊರೆಯುತ್ತದೆ.

ಕಾರ್ಖಾನೆಗಳ ವಿರುದ್ಧ ವ್ಯಗ್ರ
ಕಬ್ಬಿಗೆ ರು.1,500, ರು.1,600, ರು.1,700 ದರ ಕೊಡುತ್ತೇವೆಂದು ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಿದ ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಎಫ್ ಆರ್‍ಪಿ ದರ ನೀಡಬೇಕೆಂದು ಸರ್ಕಾರದ ಆದೇಶವಿದ್ದರೂ ಪತ್ರಿಕೆಗಳಲ್ಲಿ ಜಾಹಿರಾತು ನೀಡಿ ವಂಚನೆಗಿಳಿಯುವ ಕಾರ್ಖಾನೆಗಳ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಿ  ಎಂದು ರೈತ ಮುಖಂಡರು ಒತ್ತಾಯಿಸಿದರು. ಈ ವೇಳೆ ಕಾರ್ಖಾನೆ ಮಾಲಿಕರು ಮೌನಕ್ಕೆ ಶರಣಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com