

ಚೆನ್ನೈ: ಕೇಂದ್ರ ಸರ್ಕಾರ ಈ ಮುಂಚೆ ತಮಿಳುನಾಡಿಗೆ ಬಿಡುಗಡೆ ಮಾಡಿದ್ದ 940 ಕೋಟಿ ರುಪಾಯಿ ಹಣ ಪ್ರವಾಹ ಪರಿಹಾರಕ್ಕಾಗಿ ಅಲ್ಲ. ಅದು ನಿರ್ಧಿಷ್ಟ ಯೋಜನೆಗಳಿಗೆ ನೀಡಿದ ಹಣ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ಚೆನ್ನೈಗೆ ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಮಾತನಾಡಿದ್ದ ಮೋದಿ, ಕೇಂದ್ರ ಸರ್ಕಾರ ಈಗಾಗಲೇ 940 ಕೋಟಿ ರುಪಾಯಿ ಪರಿಹಾರ ನೀಡಿದ್ದು, ಇನ್ನೂ 1 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಸೂಚಿಸಿರುವುದಾಗಿ ಹೇಳಿದ್ದರು.
ಬಳಿಕ ಪ್ರಧಾನಿಯೊಂದಿಗೆ ನಡೆದ ಚರ್ಚೆಯ ವೇಳೆ, ಕುಂಭದ್ರೋಣ ಮಳೆಯಿಂದ ತತ್ತರಿಸಿದ್ದ ರಾಜ್ಯಕ್ಕೆ 8,481 ಕೋಟಿ ಪರಿಹಾರ ನೀಡುವಂತೆ ಮತ್ತು ತಕ್ಷಣ 2 ಸಾವಿರ ಕೋಟಿ ನೀಡುವಂತೆ ಮನವಿ ಮಾಡಲಾಗಿತ್ತು. ಆ ಕಂತಿನಲ್ಲಿ 940 ಕೋಟಿ ನೀಡಲಾಗಿದೆ ಎಂದು ಜಯಾ ಪ್ರಧಾನಿಗೆ ನೆನಪಿಸಿದರು.
552 ಕೋಟಿ ವಿಶೇಷ ನೆರವು ಸೇರಿದಂತೆ ಕೇಂದ್ರ ಒಟ್ಟು 940 ಕೋಟಿಯ ಪ್ಯಾಕೇಜ್ ಬಿಡುಗಡೆ ಮಾಡಿದೆ. ಈ ಹಣ ನಿರ್ಧಿಷ್ಟ ಯೋಜನೆಗಳಿಗೆ ನೀಡಲಾಗಿದೆ. ಪ್ರವಾಹ ಪರಿಹಾರಕ್ಕೆ ಅಲ್ಲ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.