
ಬೆಂಗಳೂರು: ಸರ್ಕಾರಿ ಹುದ್ದೆಯ ಸೇವಾ ಅವಧಿಯಲ್ಲಿರುವಾಗಲೇ ವ್ಯಕ್ತಿಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರಿ ಸೇವೆ ನೀಡಲಾಗುತ್ತದೆ. ಅದೇ ರೀತಿ ಸೈನಿಕರ ಕುಟುಂಬಕ್ಕೂ ಸರ್ಕಾರಿ ಹುದ್ದೆ ನೀಡಬೇಕು ಎಂದು ರಾಜ್ಯಪಾಲ ವಜೂಭಾಯಿ ವಾಲಾ ಸಲಹೆ ನೀಡಿದರು.
ರಾಜಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಲ್ಲಿ ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮತ್ತು ಧ್ವಜ ನಿಧಿ ಪಾರಿತೋಷಕಗಳನ್ನು ವಿತರಿಸಿ ಅವರು ಮಾತನಾಡಿದರು. ರಾಷ್ಟ್ರಕ್ಕಾಗಿ ಸೈನಿಕರು ಹಗಲಿರುಳೆನ್ನದೆ ಸೇವೆ ಸಲ್ಲಿಸುತ್ತಾರೆ. ಅವರು ಎಷ್ಟು ದಿನ ಬದುಕಿದ್ದರು ಎನ್ನುವುದಕ್ಕಿಂತ ಹೇಗೆ ಬದುಕಿದ್ದರು ಎಂಬುದು ಮುಖ್ಯವಾಗುತ್ತದೆ. ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡುವ ಸೈನಿಕರಿಗೂ ಸರ್ಕಾರಿ ಹುದ್ದೆಗೆ ಆದ್ಯತೆ ನೀಡಬೇಕಿದೆ ಎಂದರು.
ಗುಜರಾತ್ ಮಾದರಿ: ಗುಜರಾತ್ ಸೈನಿಕರು ಹುತಾತ್ಮರಾದರೆ ಅವರ ಕುಟುಂಬಕ್ಕೆ ಅಲ್ಲಿ 16 ಎಕರೆ ಜಮೀನು ನೀಡುತ್ತಾರೆ. ಅದೇ ರೀತಿ ರಾಜ್ಯದಲ್ಲಿಯೂ ಕೇಂದ್ರದ ಸೌಲಭ್ಯಗಳ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿ ಸೌಲಭ್ಯಗಳನ್ನು ನೀಡುವಂತಾದರೆ ಸೈನಿಕರ ಕುಟುಂಬಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.
ರು.5.40 ಕೋಟಿ ನಿಧಿ ಸಂಗ್ರಹ: ಆಂತರಿಕ ಗಲಭೆ, ನೆರೆ ಹಾವಳಿ, ಭೂಕಂಪ ಸೇರಿದಂತೆ ಅನೇಕ ಕಾರ್ಯದಲ್ಲಿ ಸೈನಿಕರ ಕಾರ್ಯ ಪ್ರಶಂಸನೀಯ. ಸೈನಿಕರು, ಅವರ ಕುಟುಂಬದ ಪ್ರೋತ್ಸಾಹಕ್ಕಾಗಿ ರು.5.40 ಕೋಟಿಯನ್ನು ಸೈನಿಕರ ನಿಧಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಹುತಾತ್ಮ ಯೋಧರ ಕಾರ್ಯಾಚರಣೆ ಮತ್ತು ಶೌರ್ಯ/ಶೌರ್ಯೇತರ ಪ್ರಶಸ್ತಿ ಪುರಸ್ಕೃತ ಯೋಧರನ್ನು ಸನ್ಮಾನಿಸಲಾಯಿತು. ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಹುತಾತ್ಮ ಪೇದೆ ಭೀಮಾ ಶಂಕರ ಅವರ ಪತ್ನಿ ಜಯಶ್ರೀ, 161 ಮೀಡಿಯಂ ರೆಜಿಮೆಂಟ್‍ನ ಯೋಗಾನಂದ, ಕ್ಲರ್ಕ್ ಮಾಲು ದಿನ್ನಿಮನಿ, ಎಫ್ ಲ್ಯಾನ್ಸ್ ನಾಯಕ್ ತಿಲಕ್, ತಾನಾಜಿ ಸಿದ್ದಗೊಂಡ ಪೂಜಾರಿ ಅವರ ಕುಟುಂಬಕ್ಕೆ ನಗದು ಬಹುಮಾನ ವಿತರಿಸಲಾಯಿತು. ಸೈನಿಕ ನಿಧಿ ಸಂಗ್ರಹಿಸಿದ ಇಲಾಖೆಗಳನ್ನು ಗೌರವಿಸಲಾಯಿತು.
Advertisement