ಅನಿಲಕ್ಕೆ ಪೈಪ್ ಲೈನ್

ಭಾರತದ ವಿದ್ಯುತ್ ಸ್ಥಾವರಗಳ ಅನಿಲ ದಾಹ ತೀರುವ ಸಮಯ ಸಮೀಪಿಸಿದೆ. ತುರ್ಕ್ ಮೆನಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಮಹತ್ವಾಕಾಂಕ್ಷಿ ಟಾಪಿ ಪೈಪ್ ಲೈನ್ ಯೋಜನೆಗೆ ಭಾನುವಾರ ಚಾಲನೆ ದೊರೆತಿದೆ...
ಗ್ಯಾಸ್ ಪೈಪ್ ಲೈನ್ ನಿರ್ಮಾಣಕ್ಕೆ ನಾಯಕರ ಒಪ್ಪಿಗೆ (ಚಿತ್ರಕೃಪೆ: ಪಿಟಿಐ)
ಗ್ಯಾಸ್ ಪೈಪ್ ಲೈನ್ ನಿರ್ಮಾಣಕ್ಕೆ ನಾಯಕರ ಒಪ್ಪಿಗೆ (ಚಿತ್ರಕೃಪೆ: ಪಿಟಿಐ)

ಮೇರಿ(ತುರ್ಕ್ ಮೆನಿಸ್ತಾನ್): ಭಾರತದ ವಿದ್ಯುತ್ ಸ್ಥಾವರಗಳ ಅನಿಲ ದಾಹ ತೀರುವ ಸಮಯ ಸಮೀಪಿಸಿದೆ. ತುರ್ಕ್ ಮೆನಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಮಹತ್ವಾಕಾಂಕ್ಷಿ  ಟಾಪಿ ಪೈಪ್ ಲೈನ್ ಯೋಜನೆಗೆ ಭಾನುವಾರ ಚಾಲನೆ ದೊರೆತಿದೆ.

7.6 ಶತಕೋಟಿ ಡಾಲರ್ ವೆಚ್ಚದ ಈ ಯೋಜನೆಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪಾಕ್ ಪ್ರಧಾನಿ ನವಾಜ್  ಷರೀಫ್ , ಆಫ್ಘನ್ ಅಧ್ಯಕ್ಷ ಅಶ್ರಫ್  ಘನಿ ಮತ್ತು ತುರ್ಕ್ ಮೆನಿಸ್ತಾನ ಅಧ್ಯಕ್ಷ  ಗುರ್ಬಂಗುಲಿ ಬರ್ಡಿಮುಹಮೆದೋ ಅವರು ಇಲ್ಲಿನ ಮೇರಿ ನಗರದಲ್ಲಿ ಚಾಲನೆ ನೀಡಿದ್ದಾರೆ. ಈ ನಾಯಕರು ಗುಂಡಿಯೊಂದನ್ನು ಒತ್ತಿದೊಡನೆ ಪೈಪ್‍ನ ವೆಲ್ಡಿಂಗ್ ಪ್ರಕ್ರಿಯೆ ಆರಂಭವಾಯಿತು.  ಬಳಿಕ ಇವರೆಲ್ಲರೂ ಪೈಪ್ ಮೇಲೆ ಸಹಿಗಳನ್ನು ಹಾಕಿದರು. ನಂತರ ದಾಖಲೆಗೆ ಸಹಿ ಹಾಕಿ, ಅದನ್ನು ಕ್ಯಾಪ್ಸ್ಯೂಲ್ ವೊಂದರೊಳಗೆ ಇಟ್ಟು ಭೂಮಿಯಡಿ ಇಡಲಾಯಿತು. ಈ ಮೂಲಕ ಪೈಪ್ ಲೈನ್  ಕಾಮಗಾರಿಗೆ ಹಸಿರು ನಿಶಾನೆ ತೋರಲಾಯಿತು.

ಕಾರ್ಯಕ್ರಮದಲ್ಲಿ ಬರ್ಡಿಮುಹಮೆದೋ, 2019ರ ಡಿಸೆಂಬರ್ ವೇಳೆಗೆ ಯೋಜನೆ ಕಾರ್ಯಾನುಷ್ಠಾನಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಾಪಿ ಪೈಪ್ ಲೈನ್ 30 ವರ್ಷಗಳ ಕಾಲ ದಿನಕ್ಕೆ 90  ದಶಲಕ್ಷ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (ಎಂಎಂಎಸ್‍ಸಿಎಂಡಿ)ನಷ್ಟು ಗ್ಯಾಸ್ ಸಾಗಿಸುವ ಸಾಮರ್ಥ್ಯ ಹೊಂದಿದೆ. ಈಪೈಕಿ ಭಾರತ ಮತ್ತು ಪಾಕಿಸ್ತಾನವು ತಲಾ 38 ಎಂಎಂಎಸ್‍ಸಿಎಂಡಿ  ಗ್ಯಾಸ್ ಪಡೆದರೆ, ಆಫ್ಘನ್‍ಗೆ 14 ಎಂಎಂಎಸ್ ಸಿಎಂಡಿ ಗ್ಯಾಸ್ ಪೂರೈಕೆಯಾಗಲಿದೆ.

ಆಕಾಂಕ್ಷೆಯ ಪ್ರತಿಬಿಂಬ: ಈ ಯೋಜನೆಯನ್ನು ನಮ್ಮೆಲ್ಲರ ಆಕಾಂಕ್ಷೆಯ ಪ್ರತಿಬಿಂಬ ಎಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಬಣ್ಣಿಸಿದ್ದಾರೆ. ಜತೆಗೆ, ``ಈ ಯೋಜನೆಗೆ ಅಡ್ಡಿ ಬರುವ  ನಕಾರಾತ್ಮಕ ಶಕ್ತಿಗಳನ್ನು ಸೂಕ್ತವಾಗಿ ಎದುರಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಆ ಮೂಲಕ ಆರ್ಥಿಕ ಅಭಿವೃದ್ಧಿ ಮತ್ತು ನಮ್ಮ ಜನರ ಭದ್ರತೆಗೆ ಬೆದರಿಕೆಯೊಡ್ಡಲು ಹಿಂಸೆಯ ಶಕ್ತಿಗಳಿಗೆ  ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಡಬೇಕು'' ಎಂದೂ ಹೇಳಿದ್ದಾರೆ. ಇದೇ ವೇಳೆ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಯೋಜನೆಯ ಸಾಕಾರಕ್ಕೆ ಶ್ರಮಪಟ್ಟ ಎಲ್ಲರನ್ನೂ  ಅನ್ಸಾರಿ ಶ್ಲಾಘಿಸಿದ್ದಾರೆ.

ಏನಿದು ಟಾಪಿ ಪೈಪ್ ಲೈನ್?
ಇದು ನೈಸರ್ಗಿಕ ಗ್ಯಾಸ್ ಪೈಪ್ ಲೈನ್ ಆಗಿದ್ದು, ಇದನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿರ್ಮಿಸಲಿದೆ. ಟಾಪಿ ಪೈಪ್ ಲೈನ್ ತುರ್ಕ್ ಮೆನಿಸ್ತಾನದ ಗಾಲ್ಕಿನಿಷ್ ತೈಲಕ್ಷೇತ್ರದಿಂದ ಗ್ಯಾಸ್ ಅನ್ನು  ಹೊತ್ತು ತರಲಿದೆ. ಈ ಕ್ಷೇತ್ರದಲ್ಲಿ 16 ಲಕ್ಷಕೋಟಿ ಕ್ಯೂಬಿಕ್ ಅಡಿಯಷ್ಟು ಗ್ಯಾಸ್ ನಿಕ್ಷೇಪವಿದೆ. ಇಲ್ಲಿಂದ ಆರಂಭವಾಗುವ ಪೈಪ್ ಲೈನ್ ಆಫ್ಘನ್‍ನ ಹೆರಾತ್ ಮತ್ತು ಕಂದಹಾರ್ ಪ್ರಾಂತ್ಯಗಳನ್ನು  ದಾಟಿ, ಪಾಕಿಸ್ತಾನದ ಕ್ವೆಟ್ಟಾ ಮೂಲಕ ಮುಲ್ತಾನ್ ತಲುಪಿ, ಕೊನೆಗೆ ಭಾರತದ ಪಂಜಾಬ್‍ನಲ್ಲಿರುವ ಫಜಿಲ್ಕಾದಲ್ಲಿ ಮುಗಿಯಲಿದೆ. ಭಾರತವು ತನ್ನ ಪಾಲಿನ ಅನಿಲವನ್ನು ವಿದ್ಯುತ್, ರಸಗೊಬ್ಬರ  ಮತ್ತು ಸಿಟಿ ಗ್ಯಾಸ್ ವಲಯದಲ್ಲಿ ಬಳಸಿಕೊಳ್ಳಲಿದೆ.

ಈ ಯೋಜನೆಯು ನಮ್ಮ ಆಕಾಂಕ್ಷೆಯ ಪ್ರತಿಬಿಂಬ. ಯೋಜನೆಯ ಯಶಸ್ಸಯನ್ನು ಬಯಸದ ನೆಗೆಟಿವ್ ಶಕ್ತಿಗಳನ್ನು ಸೂಕ್ತವಾಗಿ ಎದುರಿಸುವ ಸಲುವಾಗಿ ನಾವೆಲ್ಲರೂ ಒಂದುಗೂಡಿ ಕೆಲಸ  ಮಾಡಬೇಕು.
-ಹಮೀದ್ ಅನ್ಸಾರಿ ಉಪರಾಷ್ಟ್ರಪತಿ

ಇದು ಹಲವು ಸಂದೇಹಗಳ ಇತಿಹಾಸವನ್ನು ದಾಟಿ ಬರುವಂತೆ ಮಾಡಿದ ಐತಿಹಾಸಿಕ ದಿನ. ಹವಾಮಾನ ಶೃಂಗಕ್ಕೆ ತೆರೆ ಬೀಳುತ್ತಿದ್ದಂತೆ ನಾವು ಗ್ಯಾಸ್ ಅನ್ನು ಅವಲಂಬಿಸುವ ಮೂಲಕ ಇಂಗಾಲ  ತಗ್ಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಂತಾಗಿದೆ.
-ಅಶ್ರಫ್  ಘನಿ ಆಫ್ಘನ್ ಅಧ್ಯಕ್ಷ

ಪ್ರಾದೇಶಿಕ ಸಂಪರ್ಕ ಎಂಬುದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದದ್ದು. ಇದು ಸಮೃದ್ಧಿ ಮತ್ತು ಶಾಂತಿಗೆ ಪೂರಕ. ಚೀನಾಪಾಕಿಸ್ತಾನ ಆರ್ಥಿಕ ಕಾರಿಡಾರ್‍ಗೆ ಎಲ್ಲ ದೇಶಗಳ ನೆರವು
ಕೋರುತ್ತೇನೆ.
-ನವಾಜ್ ಷರೀಫ್  ಪಾಕ್ ಪ್ರಧಾನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com