ಸೀಮೆಸುಣ್ಣಕ್ಕೂ ಕಷ್ಟ: 3 ದಿನ ಶಾಲೆಗಳ ಬಂದ್?

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತಾಯಿಸಿ ಜನವರಿ ಮಾಸದಲ್ಲಿ ಮೂರು ದಿನಗಳ ಕಾಲ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಿ ಸರ್ಕಾರವನ್ನು ಎಚ್ಚರಿಸಲು ಕರ್ನಾಟಕ ರಾಜ್ಯ..
ಸರ್ಕಾರಿ ಶಾಲೆಗಳು (ಸಂಗ್ರಹ ಚಿತ್ರ)
ಸರ್ಕಾರಿ ಶಾಲೆಗಳು (ಸಂಗ್ರಹ ಚಿತ್ರ)
Updated on

ಬೆಂಗಳೂರು: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತಾಯಿಸಿ ಜನವರಿ ಮಾಸದಲ್ಲಿ ಮೂರು ದಿನಗಳ ಕಾಲ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಿ ಸರ್ಕಾರವನ್ನು ಎಚ್ಚರಿಸಲು ಕರ್ನಾಟಕ ರಾಜ್ಯ  ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉದ್ದೇಶಿಸಿದೆ.

ಕೆಲವೊಂದು ಶಾಲೆಗಳಲ್ಲಿ ಸೀಮೆಸುಣ್ಣ, ಬಿಳಿ ಹಾಳೆ ಖರೀದಿಗೂ ಹಣದ ಕೊರತೆ ಎದುರಿಸುತ್ತಿರುವ ಕುರಿತಂತೆಯೂ ವೇದಿಕೆಯ ಸದಸ್ಯರು ಗಂಭೀರವಾಗಿ ಚರ್ಚಿಸಿದ್ದಾರೆ. ಹೀಗಾಗಿ ಶಾಲೆಗಳ   ಬಂದ್ಗೆ ಮುಂದಾಗಿದ್ದಾರೆ. ಭಾನುವಾರ ಶಿಕ್ಷಕರ ಸದನದಲ್ಲಿ ವೇದಿಕೆಯು ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಮೇಲುಸ್ತುವಾರಿ ಸಮಿತಿಗಳ ಪಾತ್ರ ಕುರಿತಾಗಿನ ಸಭೆಯಲ್ಲಿ ಈ  ವಿಚಾರ ಪ್ರಸ್ತಾಪವಾಗಿದ್ದು, ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ವೇದಿಕೆಯ ಪ್ರಮುಖರು ತಿಳಿಸಿದ್ದಾರೆ. 30 ಜಿಲ್ಲೆಗಳ 90ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಸರ್ಕಾರಿ ಶಾಲೆಗಳು ಹಂತಹಂತವಾಗಿ ಮುಚ್ಚಲ್ಪಡುತ್ತಿರುವುದು, ಸರ್ಕಾರದಿಂದ ಸೂಕ್ತ ಕಾಲದಲ್ಲಿ ಅನುದಾನ ಬಿಡುಗಡೆ ಆಗದೇ ಇರುವುದು, ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ದಿನೇ ದಿನೇ  ಹೆಚ್ಚುತ್ತಿರುವುದು, ಶಿಕ್ಷಕರ ಕೊರತೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆಯಾಯಿತು. ಪ್ರಮುಖವಾಗಿ ಶಾಲೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇರುವ ವಿಚಾರ ಗಂಭೀರ  ಚರ್ಚೆಯಾಯಿತು. ಅನುದಾನವಿಲ್ಲದೇ ಅನೇಕ ಶಾಲೆಗಳಲ್ಲಿ ಸೀಮೆಸುಣ್ಣ, ಬಿಳಿಹಾಳೆಗೂ ಕಷ್ಟವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಕಟ್ಟಡಗಳ ತುರ್ತು ನಿರ್ವಹಣೆಯಾಗಬೇಕಾಗಿದೆ, ಶಾಲೆಯ ಸಣ್ಣಪುಟ್ಟ ಖರ್ಚನ್ನೂ ಎಸ್‍ಡಿಎಂಸಿ ಭರಿಸುವಂತಾಗಿದೆ. ಇದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ ಎಂದು ಕೆಲವು ಸದಸ್ಯರು ಸರ್ಕಾರವನ್ನು ಟೀಕಿಸಿದರು.

ಅನೇಕ ಕಡೆ ಶಿಕ್ಷಕರ ಕೊರತೆ ಗಂಭೀರವಾಗಿ ದ್ದು ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿಲ್ಲ. ಎಸ್‍ಡಿಎಂಗಳು ಹಣಹಾಕಿ ಶಿಕ್ಷಕರನ್ನು ನೇಮಿಸುವಂತಾಗಿದೆ. ಸೂಕ್ತ ಕಾಲದಲ್ಲಿ  ನೇಮಕಾತಿಗಳು ನಡೆಯದ ಕಾರಣ ಗುತ್ತಿಗೆ ಶಿಕ್ಷಕರ ಸಂಖ್ಯೆ ಹೆಚ್ಚಿದ್ದು, ಇದು ಹೊಸ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರದ ನೀತಿ ಖಂಡಿಸಿ  ಜನವರಿಯಲ್ಲಿ 3 ದಿನ ಶಾಲೆಗಳನ್ನು ಮುಚ್ಚುವ ಚರ್ಚೆ ನಡೆದಿದ್ದು ಶೀಘ್ರ ನಿರ್ಧಾರ ಪ್ರಕಟಿಸುವುದಾಗಿ ವೇದಿಕೆಯ ಪ್ರಮುಖರು ತಿಳಿಸಿದರು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ  ನಿರಂಜನ ಆರಾಧ್ಯ, ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಕಡೆಗಣಿಸುವುದು ಸರಿಯಲ್ಲ. ಈ ಬಗ್ಗೆ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಎಸ್‍ಡಿಎಂಸಿ ಪ್ರಮುಖರು ತಮ್ಮ ಸಮಸ್ಯೆಗಳನ್ನು  ಹೇಳಿಕೊಂಡರು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸುವತ್ತ ಕ್ರಮ ಕೈಗೊಳ್ಳಲಿ ಎಂದರು. ಸಾಹಿತಿ ಚಂದ್ರಶೇಖರ ಕಂಬಾರ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ  ಸಂಘದ ಅಧ್ಯಕ್ಷ ಗುರಿಕಾರ, ಅಖಿಲ ಭಾರತ ಮಹಾ ಕಾರ್ಯದರ್ಶಿ ಕಮಲಾಕರ ತ್ರಿಪಾಠಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com