ಲೋಕಾಗೆ ಮತ್ತೆ ಅಡಿ ಇಟ್ಟ ಆಡಿ

ಉಪ ಲೋಕಾಯುಕ್ತ ಸುಭಾಷ್ ಬಿ. ಆಡಿ ಪದಚ್ಯುತಿ ಪ್ರಕರಣದಲ್ಲಿ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿದ್ದು, ಅವರು...
ನ್ಯಾ ಸುಭಾಷ್ ಬಿ ಆಡಿ
ನ್ಯಾ ಸುಭಾಷ್ ಬಿ ಆಡಿ
Updated on: 
ಬೆಂಗಳೂರು: ಉಪ ಲೋಕಾಯುಕ್ತ ಸುಭಾಷ್ ಬಿ. ಆಡಿ ಪದಚ್ಯುತಿ ಪ್ರಕರಣದಲ್ಲಿ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿದ್ದು, ಅವರು ಕರ್ತವ್ಯಕ್ಕೆ ಹಾಜರಾಗಬಹುದು ಎಂದು ಹೈಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನ್ಯಾ.ಸುಭಾಷ್ ಅಡಿ ಕೆಲಸಕ್ಕೆ ಮರಳಿದ್ದಾರೆ.
ಉಪ ಲೋಕಾಯುಕ್ತ ಸುಭಾಷ್ ಅಡಿಯವರ ಪದಚ್ಯುತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ಲೋಕಾಯುಕ್ತ ರಿಜಿಸ್ಟ್ರಾರ್‍ಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಉಪಲೋಕಾಯುಕ್ತರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವಂಥ ಅಂಶಗಳಿಲ್ಲ ಎಂದು ಸರ್ಕಾರ ಶುಕ್ರವಾರ ಹೈಕೋರ್ಟ್ ಗೆ ಸ್ಪಷ್ಟಪಡಿಸಿತು. ಇದರಿಂದಾಗಿ ಉಪಲೋಕಾಯುಕ್ತರ ಕರ್ತವ್ತಯ ನಿರ್ಹವಣೆ ಸಂಬಂಧ ಉಂಟಾಗಿದ್ದ ಗೊಂದಲ ವಿವಾದಕ್ಕೆ ತೆರೆ ಬಿದ್ದಿದೆ.
ವಿಧಾನಸಭೆಯಲ್ಲಿ ಪದಚ್ಯುತಿ ನಿರ್ಣಯ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಣೆಯಿಂದ ದೂರವುಳಿದಿದ್ದ ಸುಭಾಷ್ ಆಡಿ ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.  ನ್ಯಾ.ಆನಂದ ಭೈರಾರೆಡ್ಡಿ ಅವರಿದ್ದ ಪೀಠದ ಮುಂದೆ ಉಪಲೋಕಾಯುಕ್ತರ ಅಡ್ವೋಕೇಟ್ ಜನರಲ್ ಮಧುಸೂದನ್ ಆರ್ .ನಾಯಕ್ ಹೇಳಿಕೆ ನೀಡಿದರು. 
ನ್ಯಾ. ಸುಭಾಷ್ ಆಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ಸಂವಿಧಾನ ಬದ್ಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುವವರವಿರುದ್ಧ ಆರೋಪ ಸಾಬೀತಾದ ಬಳಿಕ ನಿರ್ಣಯ ಮಂಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ನಿರ್ಣಯ ಮಂಡನೆಗೂ ಮುನ್ನ ತನಿಖೆ ನಡೆಸಿ ದುರ್ನಡತೆ ಕಂಡು ಬಂದಲ್ಲಿ ಮಾತ್ರ ಮುಂದಿನ ಕ್ರಮಕ್ಕೆ ಮುಂದಾಗಬೇಕು.
ಆದರೆ ಪ್ರಾಥಮಿಕ ಹಂತದಲ್ಲೇ ವಿಚಾರಣೆಗೆ ಸರಿಯಾದ ನಿಯಮ ಅನುಸರಿಸಿಲ್ಲ. ಆದ್ದರಿಂದ ಈ ನಿರ್ಣಯ ಅಸಂವಿಧಾನಿಕವಾಗಿದೆ ಎಂದರು. ಸಭಾಧ್ಯಕ್ಷರ ಕಚೇರಿಯಿಂದ ಲೋಕಾಯುಕ್ತ ಕಚೇರಿಗೆ ಕಳುಹಿಸಿರುವ ಪತ್ರದಲ್ಲಿ ಕರ್ನಾಟಕ  ಲೋಕಾಯುಕ್ತ ಕಾಯ್ದೆ 2015ರ ಸೆಕ್ಷನ್ 6(14)ನ್ನು ಉಲ್ಲೇಖಿಸಲಾಗಿದೆ. ಈ ಕಾಯ್ದೆ ಉಪಲೋಕಾಯುಕ್ತರು ತಮ್ಮ ಕರ್ತವ್ಯದಿಂದ ನಿರ್ಗಮನ ಮಾಡುವುದನ್ನು ಸೂಚಿಸುತ್ತದೆ ಎಂದು ವಾದಿಸಿದರು. 
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ಸದನದಲ್ಲಿ ಈ ಬಗ್ಗೆ ಚರ್ಚೆಯಾಗಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಸಭಾಧ್ಯಕ್ಷರಿಗೆ ಕಳುಹಿಸಲಾಗಿದೆ. ಆದರೆ, ಈ ನಿರ್ಣಯವು ಸುಭಾಷ್ ಆಡಿಯವರ ಕರ್ತವ್ಯಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ನ್ಯಾಯಪೀಠ, ಈ ಹೇಳಿಕೆಯನ್ನು ದಾಖಲಿಸಿಕೊಳ್ಳಲೇ ಎಂದು ಪ್ರಶ್ನಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಅಡ್ವೋಕೇಟ್ ಜನರಲ್, ಈ ಬಗ್ಗೆ ಸರ್ಕಾದ ಅಭಿಪ್ರಾಯ ಪಡೆಯಬೇಕು ಎಂದು ತಿಳಿಸಿದ ಪರಿಣಾಮ ವಿಚಾರಣೆಯನ್ನು ಮಧ್ಯಾಹ್ನ 1.15ಕ್ಕೆ ಮುಂದೂಡಲಾಯಿತು.
ಬಳಿಕ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ, ಸುಭಾಷ್ ಆಡಿ ಪದಚ್ಯುತಿಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚಿಸಿ ಸಭಾಧ್ಯಕ್ಷರಿಗೆ ಕಳುಹಿಸಲಾಗಿದೆ. ಸಭಾಧ್ಯಕ್ಷರು ನಿರ್ಣಯವನ್ನು ಪುರಸ್ಕರಿಸಿದ್ದಾರೆ ವಿನಃ ಅಂಗೀಕರಿಸಿಲ್ಲ. ಅಲ್ಲದೆ, ಪ್ರಕರಣ ಸಂಬಂಧ ಮತ್ತಷ್ಟು ದಾಖಲೆಗಳನ್ನು ಕಲೆ ಹಾಕುತ್ತಿದ್ದು, ಆರೋಪದಲ್ಲಿ ಸತ್ಯಾಂಶ ಕಂಡು ಬಂದಲ್ಲಿ ಮಾತ್ರ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುವುದು. 
ಆ ಬಳಿಕ ಮುಖ್ಯ ನ್ಯಾಯಮೂರ್ತಿಗಳು ಈ ಸಂಬಂಧ ತನಿಖೆ ನಡೆಸಲು ಸಮಿತಿ ರಚಿಸಬೇಕಾಗುತ್ತದೆ. ಒಂದು ವೇಳೆ  ಮುಖ್ಯ ನ್ಯಾಯಾಮೂರ್ತಿಗಳ ಸಮಿತಿಯಲ್ಲಿ ಆರೋಪಗಳು ಸಾಬೀತಾಗದೇ ಇದ್ದಲ್ಲಿ ಸುಭಾಷ್ ಆಡಿ ವಿರುದ್ಧದ ಪದಚ್ಯುತಿ ನಿರ್ಣಯ ಬಿದ್ದು ಹೋಗುತ್ತದೆ ಎಂದು ಹೇಳಿಕೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಿ ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವುದಕ್ಕೆ ಸರ್ಕಾರಕ್ಕೆ ಸೂಚಿಸಿದೆ. 
ಆಡಿ ವಿರುದ್ಧ ಆರೋಪವೇನು ?
ಉಪ ಲೋಕಾಯುಕ್ತರಾಗಿದ್ದ ಎಸ್.ಬಿ.ಮಜಗೆ ಅವರು ಸುಭಾಷ್ ಆಡಿ ವಿರುದ್ಧ ಕೆಲವೊಂದು ಆರೋಪ ಮಾಡಿದ್ದರು. ತಮ್ಮ ಕಾರ್ಯವ್ಯಾಪ್ತಿಗೆ ಬರುವ ಜಿಲ್ಲೆಗಳ ಪ್ರಕರಣಗಳನ್ನು ಸುಭಾಷ್ ಆಡಿ ಅವರು ಸ್ವಪ್ರೇರಣೆಯಿಂದ ವಿಚಾರಣೆ ನಡೆಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನನ್ನ ಕಚೇರಿಯಲ್ಲಿದ್ದ ಕಡತ ನಾಪತ್ತೆಯಾಗಿ ಸುಭಾಷ್ ಆಡಿಯವರ ಕಚೇರಿ ತಲುಪಿತ್ತು ಎಂದು ದೂರಿದ್ದರು. ಇದರ ಆಧಾರದ ಮೇಲೆ ಉಪಲೋಕಾಯುಕ್ತ ಸುಭಾಷ್ ಆಡಿ ಪದಚ್ಯುತಿ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಸಂಬಂಧ ಸದನದಲ್ಲಿ ಚರ್ಚೆಯಾಗಿದ್ದು, ನಿರ್ಣಯವನ್ನು ಸಭಾಧ್ಯಕ್ಷರಿಗೆ ಸಲ್ಲಿಸಲಾಗಿತ್ತು. ಸಭಾಧ್ಯಕ್ಷರ ಕಚೇರಿಯಿಂದ ಡಿಸೆಂಬರ್ 3ರಂದು ನಿರ್ಣಯ ಕೈಗೊಂಡಿರುವ ಬಗ್ಗೆ ಪತ್ರ ಬರೆಯಲಾಗಿತ್ತು.
ಕರ್ತವ್ಯಕ್ಕೆ ಹಾಜರಾದ ಉಪಲೋಕಾಯುಕ್ತ
ತಮ್ಮ ಪದಚ್ಯುತಿ ನಿರ್ಣಯದ ಹಿನ್ನೆಲೆಯಲ್ಲಿ ನ.28ರಿಂದ ಸುದೀರ್ಘ ರಜೆ ಪಡೆದಿದ್ದ 2ನೇ ಉಪಲೋಕಾಯುಕ್ತ ಸುಭಾಷ್ ಬಿ.ಆಡಿ ಅವರು ಹೈಕೋರ್ಟ್ ಆದೇಶ ಹಿನ್ನಲೆಯಲ್ಲಿ ಶುಕ್ರವಾರ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜನವರಿ ಎರಡನೇ ವಾರಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್ ಅಲ್ಲಿಯವರೆಗೆ ಆಡಿ ಅವರು ಕೆಲಸ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದೆ.
ತೀರ್ಪು ಸಂಬಂಧ ತಮ್ಮ ವಕೀಲ ಬಿವಿ ಆಚಾರ್ಯ ಅವರೊಂದಿಗೆ ಚರ್ಚಿಸಿದ ಆಡಿ, ಸಂಜೆ 4 ಗಂಟೆಗೆ ಕಚೇರಿಗೆ ಆಗಮಿಸಿ, ಕೊಠಡಿಯಲ್ಲಿದ್ದ ದೇವರ ಪೋಟೋಗೆ ಕೈಮುಗಿದು ಆಸೀನರಾದರು. ಕೆಲ ಹೊತ್ತು ಕೊಠಡಿಯಲ್ಲಿ ಕುಳಿತು ರಿಜಿಸ್ಟ್ರಾರ್ ರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಗುರುವಾರ ನೂತನ ಉಪಲೋಕಾಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿ ನ್ಯಾ.ಆನಂದ್ ಅವರೊಂದಿಗೆ ಸುಮಾರ್ 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com