ಮೆಜೆಸ್ಟಿಕ್‍ನಲ್ಲಿ ಇಂದು ಪಾರ್ಕಿಂಗಿಲ್ಲ

ಸಾರ್ವತ್ರಿಕ ರಜಾ ದಿನಗಳ ಹಿನ್ನೆಲೆಯಲ್ಲಿ ಬುಧವಾರ (ಡಿ.23)ದಂದು ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳ ಬಳಿ ಹೆಚ್ಚು ಸಂಚಾರ ದಟ್ಟಣೆಯಾಗುವುದರಿಂದ ನಗರ ಸಂಚಾರ ಪೊಲೀಸರು ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಾರ್ವತ್ರಿಕ ರಜಾ ದಿನಗಳ ಹಿನ್ನೆಲೆಯಲ್ಲಿ ಬುಧವಾರ (ಡಿ.23)ದಂದು ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳ ಬಳಿ ಹೆಚ್ಚು ಸಂಚಾರ ದಟ್ಟಣೆಯಾಗುವುದರಿಂದ ನಗರ ಸಂಚಾರ ಪೊಲೀಸರು ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ.

ಧನ್ವಂತ್ರಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಪ್ಲಾಟ್ ಫಾರಂ ರಸ್ತೆ ಕಡೆ ಮತ್ತು ಖೋಡೇಸ್ ಜಂಕ್ಷನ್‍ಗಳಲ್ಲಿ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಮೈಸೂರು ರಸ್ತೆ, ಕೊಡಗು ಮತ್ತು ಕೇರಳ ಕಡೆಗೆ ಹೋಗುವ ಎಲ್ಲ ಬಸ್‍ಗಳು ಮೈಸೂರು ರಸ್ತೆ ನಿಲ್ದಾಣದಿಂದಲೇ ಹೊರಡುತ್ತವೆ. ತಮಿಳುನಾಡು ಕಡೆ ಸಂಚರಿಸುವ ಬಸ್‍ಗಳು ಶಾಂತಿನಗರ ಬಸ್ ನಿಲ್ದಾಣದಿಂದ ಮಾತ್ರ ಹೊರಡುತ್ತವೆ. ದಾವಣಗೆರೆ ಕಡೆ ಹೊರಡುವ ಬಸ್‍ಗಳು ಚಿಕ್ಕಲಾಲ್‍ಬಾಗ್ ಬಸ್ ನಿಲ್ದಾಣದಿಂದ ಸಂಚರಿಸಲಿವೆ. ಇನ್ನೂ ಬಹುದೂರ ಕ್ರಮಿಸುವ ಎಲ್ಲ ಸಾರಿಗೆ ವಾಹನಗಳು ತಟಸ್ಥ ನಿಲುಗಡೆಗೆ ಬಾಳೇಕಾಯಿಮಂಡಿ, ಜಕ್ಕರಾಯನಕೆರೆ, ಎನ್‍ಜಿಇಎಫ್ ಮತ್ತು ಪೀಣ್ಯ ನೂತನ ಬಸ್ ಟರ್ಮಿನಲ್‍ಗಳಲ್ಲಿ ಸೀಮಿತಗೊಳಿಸಲಾಗಿದೆ.

ಹೊರ ಊರುಗಳಿಗೆ ಪ್ರಯಾಣಿಸುವವರು ಕಡ್ಡಾಯವಾಗಿ ಬಿಎಂಟಿಸಿ ಬಸ್ ಮತ್ತು ಆಟೋ ರಿಕ್ಷಾಗಳ ಮೂಲಕ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಆಗಮಿಸಬೇಕು. ಮೈಸೂರು ಮತ್ತು ಆಚೆಗಿನ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲೇ ಬಸ್ ಹತ್ತಬೇಕು. ಕೆಎಸ್‍ಆರ್ ಟಿಸಿ, ಎಸ್‍ಇಟಿಸಿ ಪ್ರೀಮಿಯರ್ ಬಸ್‍ಗಳಲ್ಲಿ (ಚೆನ್ನೈ, ತಿರುಚಿ, ಕರೈಕುಡಿ, ಪುಡಿಕೊಟ್ಟೆ, ತಂಜಾವೂರು, ಕೊಯಮತ್ತೂರು, ಮಧುರೈ ಮತ್ತು ಕುಂಬಕೋಣಂ) ಪ್ರಯಾಣಿಸುವವರು ಶಾಂತಿನಗರ ಬಸ್ ನಿಲ್ದಾಣದಿಂದ ಪ್ರಯಾಣಿಸಬೇಕು. ಡಿ.23ರಂದು ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಕೆಂಪೇಗೌಡ ರಸ್ತೆ, ಗೂಡ್‍ಷೆಡ್ ರಸ್ತೆ, ಶೇಷಾದ್ರಿ ರಸ್ತೆ, ಸುಬೇದಾರ್ ಛತ್ರಂ ರಸ್ತೆ, ಪ್ಲಾಟ್ ಫಾರಂ ರಸ್ತೆ ಉಪಯೋಗಿಸದಿರಲು ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com