
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಹಠಾತ್ ಪ್ರವಾಸ ಕೈಗೊಂಡಿರುವುದು ಪೂರ್ವ ನಿರ್ಧರಿತವಾಗಿತ್ತು. ಜತೆಗೆ ಇದೊಂದು ಖಾಸಗಿ ಉದ್ಯಮಿಗೋಸ್ಕರ ಆಯೋಜಿಸಲಾಗಿರುವ ಭೇಟಿ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ಮೋದಿ ಲಾಹೋರ್‍ನಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಜತೆಗೆ ಭೇಟಿಯಾಗುತ್ತಿದ್ದಂತೆ ದೆಹಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಆನಂದ ಶರ್ಮಾ ಈ ಪ್ರವಾಸ ದೇಶದ ಹಿತಾಸಕ್ತಿಗೆ ಮಾರಕ, ಊಹಿಸಲಾಗದ್ದು, ನಿಷ್ಪ್ರಯೋಜಕ ಎಂದು ಬಣ್ಣಿಸಿದ್ದಾರೆ. ಮುಂಬೈ ದಾಳಿಯ ರೂವಾರಿ ಝಕಿವುರ್ ರೆಹಮಾನ್ ಲಖ್ವಿಯನ್ನು ಭಾರತಕ್ಕೆ ಗಡಿಪಾರುವ ಬಗ್ಗೆ ಆ ರಾಷ್ಟ್ರದಿಂದ ಯಾವ ರೀತಿಯ ಭರವಸೆ ದೊರೆತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ``ಪ್ರಧಾನಿ ಭೇಟಿ ರಾಜತಾಂತ್ರಿಕ ವಾದದ್ದು'' ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಒಪ್ಪಲಿಲ್ಲ. ಇದು ನಿಜಕ್ಕೂ ಉದ್ಯಮಿಯೊಬ್ಬರಿಂದಲೇ ಪೂರ್ವ ನಿಗದಿಯಾಗಿರುವ ಭೇಟಿ ಎಂದು ಶರ್ಮಾ ಬಲವಾಗಿ ಪ್ರತಿಪಾದಿಸಿದ್ದಾರೆ. ``ಪ್ರಧಾನಿ ಮೋದಿ ಕೇವಲ ಉದ್ಯಮಿಯೊಬ್ಬರ ಖಾಸಗಿ ಹಿತಾಸಕ್ತಿ ಉತ್ತೇಜಿಸಲು ಪಾಕಿಸ್ತಾನಕ್ಕೆ ತೆರಳಿದ್ದಾರೆಯೇ ಹೊರತು ಭಾರತ ರಾಷ್ಟ್ರೀಯ ಹಿತಾಸಕ್ತಿಯನ್ನಲ್ಲ'' ಎಂದಿದ್ದಾರೆ. ಹೀಗಾಗಿ ಘೋಷಿತವಾಗದ ಪ್ರಧಾನಿ ಪ್ರವಾಸ ರಾಜತಾಂತ್ರಿಕ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಹೇಳಿಕೆ ದುರದೃಷ್ಟಕರ: ಕಾಂಗ್ರೆಸ್ ನಾಯಕ ಆನಂದ ಶರ್ಮಾ ಹೇಳಿಗೆ ಬಿಜೆಪಿ ವಕ್ತಾರ ಶ್ರೀಕಾಂತ ಶರ್ಮಾ ಆಕ್ಷೇಪಿಸಿದ್ದಾರೆ. ಪ್ರಧಾನಿ ಮೋದಿ ಪಾಕ್ ಭೇಟಿ ನಿಜಕ್ಕೂ ಆಶ್ಚರ್ಯಕರವಾಗಿದೆ. ಎರಡೂ ರಾಷ್ಟ್ರಗಳ ನಡುವೆ ಈ ಭೇಟಿ ಧನಾತ್ಮಕ ಅಂಶಗಳನ್ನು ನೀಡಲಿದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಹ್ವಾನ ನೀಡಿದ ಬಳಿಕವೇ ಪಿಎಂ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯ ಲಾಹೋರ್ ಭೇಟಿಯ ಕಾರಣ ಏನೇ ಇರಬಹುದು. ಆದರೆ ಈ ಭೇಟಿಯ ಬಳಿಕವಾದರೂ ಪಾಕಿಸ್ತಾನವು ತನ್ನ ನೆಲದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಿ. ನಮ್ಮ ಡೈನಾಮಿಕ್ ಪ್ರಧಾನಿಯ ಮಧ್ಯಪ್ರವೇಶವು ಬದಲಾವಣೆ ತರಲಿ.
- ಪ್ರವೀಣ್ ತೊಗಾಡಿಯಾ
ವಿಎಚ್‍ಪಿ ನಾಯಕ
Advertisement