ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್
ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್

ಪಾಕ್ ಗೆ ಪ್ರಧಾನಿ ಮೋದಿ ಸಾಹಸದ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ಪಾಕಿಸ್ತಾನ ಭೇಟಿ ಎರಡೂ ದೇಶಗಳ ಇತಿಹಾಸದಲ್ಲಿ ಅಭೂತಪೂರ್ವವಾದ ಬೆಳವಣಿಗೆ...
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ಪಾಕಿಸ್ತಾನ ಭೇಟಿ ಎರಡೂ ದೇಶಗಳ ಇತಿಹಾಸದಲ್ಲಿ ಅಭೂತಪೂರ್ವವಾದ ಬೆಳವಣಿಗೆ.

ಎರಡೂ ದೇಶಗಳ ನಡುವೆ ಮೈತ್ರಿ ಅಷ್ಟೇನೂ ಉತ್ತಮವಿಲ್ಲದಿರುವಾಗ ಮತ್ತು ಭಾರತ ವಿರೋಧಿ ಭಯೋತ್ಪಾದಕರು ರಾಜಾರೋಷವಾಗಿ ತಿರುಗುತ್ತಿರುವ ಸನ್ನಿವೇಶದಲ್ಲಿ ಪಾಕ್ ಪ್ರಧಾನಿ ನವಾಜ್  ಷರೀಫ್ ಅವರಲ್ಲಿ ನಂಬಿಕೆಯಿಟ್ಟು ಮೋದಿ ಅವರು ಲಾಹೋರ್ ಗೆ ಭೇಟಿ ನೀಡಿರುವುದು ಸಾಹಸವೇ ಸರಿ. ಅದೇ ರೀತಿ ಅಂಥ ವಾತಾವರಣದ ನಡುವೆ ಯಾವುದೇ ರೀತಿಯ ಭದ್ರತೆಯ ಪೂರ್ವ  ಸಿದ್ಧತೆಯಿಲ್ಲದೆ ಮೋದಿ ಅವರನ್ನು ಪಾಕಿಸ್ತಾನಕ್ಕೆ ಬರಮಾಡಿಕೊಂಡದ್ದು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡದ್ದು ನವಾಜ್ ಷರೀಫ್  ಅವರ ಇಚ್ಛಾಶಕ್ತಿ ಮತ್ತು  ಆಡಳಿತದ ಮೇಲಿರುವ ಹಿಡಿತವನ್ನು ಪ್ರದರ್ಶಿಸಿದೆ.

ಷರೀಫ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲೆಂದು ಮೋದಿ ಅವರು ಲಾಹೋರ್‍ಗೆ ಭೇಟಿ ನೀಡಿದ ಈ ಬೆಳವಣಿಗೆ ಮೇಲ್ನೋಟಕ್ಕೆ ಸಾಮಾನ್ಯ ಘಟನೆಯಾಗಿ ಕಂಡರೂ ಅದು ಅಷ್ಟೇ ಆಗಿ  ಉಳಿದಿಲ್ಲ. ಎರಡೂ ದೇಶಗಳ ನಡುವಣ ಬಾಂಧವ್ಯ ವೃದ್ಧಿ ದಿಸೆಯಲ್ಲಿ ಉಭಯ ನಾಯಕರ ನಡುವೆ ಪರಸ್ಪರ ವಿಶ್ವಾಸ ಅಭಿವೃದ್ಧಿಯ ಬಹುಮುಖ್ಯ ಹೆಜ್ಜೆಯಾಗಿದೆ. ಈ ದೃಷ್ಟಿಯಿಂದ ಈ ಭೇಟಿ  ಸ್ವಾಗತಾರ್ಹವಾದುದು. ಈ ಬೆಳವಣಿಗೆಗಳು ಕೇವಲ ಸಂಕೇತಗಳಾಗಿ ಉಳಿಯದೆ ಬಾಂಧವ್ಯ ನಿಜವಾಗಿ ಗಟ್ಟಿಗೊಳ್ಳಲು ಕಾರಣವಾಗಬೇಕಿದೆ.

ಮೋದಿ ಅವರ ಈ ಅಸಾಂಪ್ರದಾಯಿಕ, ರಾಜತಾಂತ್ರಿಕವಲ್ಲದ ನಡೆಗೆ ದೇಶದಲ್ಲಿರುವ ಮತ್ತು ಆಡಳಿತ ಪಕ್ಷದ ಬೆಂಬಲದ ಕೆಲವು ಸಂಘಟನೆಗಳಲ್ಲಿರುವ ಪಾಕಿಸ್ತಾನ ವಿರೋಧಿಗಳು ಹಾಗೂ  ವಿರೋಧ ಪಕ್ಷಗಳು ಸಹಜವಾಗಿಯೇ ಆಕ್ರೋಶ ವ್ಯಕ್ತ ಮಾಡಲಿವೆ. ಮೋದಿ ಅವರ ಮಾತು ಮತ್ತು ಕೃತಿ ನಡುವೆ ಅಂತರವಿರುವುದೇ ಈ ಆಕ್ರೋಶಕ್ಕೆ ಕಾರಣ. ಉಭಯ ದೇಶಗಳ ನಡುವೆ ಬಾಂಧವ್ಯ ಅಭಿವೃದ್ಧಿಯಾದರೆ ಮಾತ್ರ ಮೋದಿ ಅವರ ಈ ಹೆಜ್ಜೆಗೆ ಬೆಲೆ ಬರುತ್ತದೆ. ಇಲ್ಲವಾದರೆ ಇಂಥ ನಡೆಗಳು ನಿರುಪಯುಕ್ತವಾಗಲಿವೆ.

ಧಾರ್ಮಿಕ ರಾಜತಾಂತ್ರಿಕ ಹೆಜ್ಜೆಗಳತ್ತ ಒಂದು ನೋಟ
ಭಾರತಪಾಕಿಸ್ತಾನದ ನಡುವೆ ಎಷ್ಟೇ ವೈಮನಸ್ಸುಗಳಿದ್ದರೂ ಇಲ್ಲಿನ ಧಾರ್ಮಿಕ ಪ್ರವಾಸೋದ್ಯಮ ಮಾತ್ರ ಸದಾ ಚುರುಕಾಗಿ ಸಾಗುತ್ತಾ ಬಂದಿದೆ. ದೇಶ ವಿಭಜನೆ ಆದಾಗಿನಿಂದಲೂ ಈ  ಧಾರ್ಮಿಕ  ಡಿಪ್ಲೋಮೆಸಿ ನಡೆಯುತ್ತಿದೆ. 1965 ಮತ್ತು 1971ರ ಯುದ್ಧಗಳು ನಡೆದಾಗ ಗಡಿಗಳನ್ನು ಮುಚ್ಚಲಾಯಿತು. ಹೀಗಾಗಿ, ವಿಭಜಿತ ನೆಲಗಳ ನಡುವೆ ಪ್ರಯಾಣವು  ಕಷ್ಟಕರವಾಯಿತು. ಆದರೆ, ಇದನ್ನು  ಅರಿತ ದೇಶಗಳು ಯಾತ್ರಿಗಳ ಪ್ರಯಾಣಕ್ಕೆ ನೆರವಾಗುವತ್ತ ಹೆಜ್ಜೆಯಿಟ್ಟವು. ಇದರ ಫಲವೇ ದೆಹಲಿ-ಲಾಹೋರ್ ಬಸ್ ಸೇವೆ.

-ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಹಾಗೂ ಅಂದಿನ ಪಾಕ್ ಪ್ರಧಾನಿಯಾಗಿದ್ದ ನವಾಜ್ ಷರೀಫ್ 1999ರಲ್ಲಿ ಈ ಸೇವೆ ಆರಂಭಿಸಿದರು.
- ನಂತರ ಬಂದ ಮನಮೋಹನ್‍ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಇನ್ನೂ ಕೆಲವು ಹೊಸ ಬಸ್‍ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಅಮೃತ್‍ಸರನಂಕನಾ ಸಾಹಿಬ್, ಶ್ರೀನಗರ ಮುಜಾಫರಾಬಾದ್ ನಡುವೆ ಬಸ್‍ಗಳು ಸಂಚರಿಸಲಾರಂಭಿಸಿದವು.
-ಅತ್ತ ಪಾಕಿಸ್ತಾನ ಸರ್ಕಾರವೂ ಪಶ್ಚಿಮ ಪಂಜಾಬ್‍ನ ಚಕ್ವಾಲ್ ಜಿಲ್ಲೆಯಲ್ಲಿ ಕಟಸ್ರಾಜ್ ದೇವಾಲಯದ ನವೀಕರಣ ಕಾರ್ಯಕ್ಕೆ ಆದೇಶಿಸಿದರು.
- 2012ರಲ್ಲಿ ಪಾಕ್ ಅಧ್ಯಕ್ಷ ಆಸಿಫ್  ಅಲಿ ಜರ್ದಾರಿ ಅವರು ಅಜ್ಮೇರ್ ಷರೀಫ್ ಗೆ ಭೇಟಿ ಕೊಟ್ಟರು. ನಮ್ಮ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್ ಬಲೂಚಿಸ್ತಾನಕ್ಕೆ ತೆರಳಿ ಹಿಂಗಲಾಜ್ ಮಠ  ದೇವಾಲಯಕ್ಕೆ ಭೇಟಿ ನೀಡಿದರು.
- ಇದೇ ಮೇ ತಿಂಗಳಲ್ಲಿ ಪಾಕ್ ಸರ್ಕಾರವು ಕಟಸ್‍ರಾಜ್ ದೇವಾಲಯದ ಪವಿತ್ರ ನೀರನ್ನು ಬಿಜೆಪಿ ಹಿರಿಯ ನಾಯಕ ಆಡ್ವಾಣಿ ಅವರಿಗೆ ಕಳುಹಿಸಿಕೊಟ್ಟಿತು.
- 14ನೇ ಶತಮಾನದ ಸೂಫಿ ಸಂತ ಹಜ್ರತ್ ನಿಜಾಮುದ್ದೀನ್ ಔಲಿಯಾ ಅವರ ವಾರ್ಷಿಕ ಉರೂಸ್‍ಗೆ ಆಗಮಿಸಲು ಪಾಕಿಸ್ತಾನಿ ಪಂಜಾಬ್‍ನ ಮುಖ್ಯಮಂತ್ರಿ, ನವಾಜ್ ಷರೀಫ್ ರ ಕಿರಿಯ ಸಹೋದರ ಶಹಬಾಜ್ ಷರೀಫ್  ಅವರಿಗೆ ನೀಡಲಾಗಿದ್ದ ಆಮಂತ್ರಣವನ್ನು ಇತ್ತೀಚೆಗಷ್ಟೇ ಎನ್‍ಡಿಎ ಸರ್ಕಾರವು ಅಂಗೀಕರಿಸಿದೆ.

ಕಾಶ್ಮೀರಿ ಚಾಯ್ ಪೇ ಚರ್ಚಾ
ಷರೀಫ್  ನಿವಾಸದಲ್ಲಿ ಚಾಯ್ ಪೇ ಚರ್ಚಾ ನಡೆಸಿದ ಮೋದಿ, ಪಾಲಕ್ ಪನ್ನೀರ್, ಖೀರು, ಕಾಶ್ಮೀರಿ ಚಹಾ ಸವಿದರು. ಮೋದಿ ಅವರು ಷರೀಫ್ ರ ಮೊಮ್ಮಗಳು, ನವವಧು ಮೆಹರುನ್ನಿಸಾಗೆ  ಭಾರತೀಯ ಉಡುಗೆಯೊಂದನ್ನು ಉಡುಗೊರೆಯಾಗಿ ನೀಡಿದರು. ಜತೆಗೆ, ಷರೀಫ್  ಪತ್ನಿ ಕುಲ್ಸುಮ್ ಅವರಿಗೆ ಶಾಲೊಂದನ್ನು ನೀಡಿದರು. ಎರಡು ಗಂಟೆ ಪಾಕ್‍ನಲ್ಲಿ ಕಳೆದ ಮೋದಿ ಬಳಿಕ  ಸ್ವದೇಶಕ್ಕೆ ವಾಪಸಾದರು. ನಂತರ ಮಾತನಾಡಿದ, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಇಜಾಝ್ ಚೌಧರಿ, ``ಭಾರತ-ಪಾಕ್ ನಡುವೆ ಸಮಗ್ರ ಮಾತುಕತೆ ಶುರುವಾಗಿದೆ. ಇದು ಎರಡೂ  ದೇಶಗಳ ಬಾಂಧವ್ಯ ವೃದ್ಧಿಯಲ್ಲಿಟ್ಟ ಮಹತ್ವದ ಹೆಜ್ಜೆ'' ಎಂದು ತಿಳಿಸಿದ್ದಾರೆ.

ಮೋದಿ ಡೇಔಟ್
- 1.30 ಪಾಕ್ ಭೇಟಿ ಬಗ್ಗೆ ಪಿಎಂ ಮೋದಿ ಟ್ವೀಟ್
- 5.10 ಲಾಹೋರ್ ವಿಮಾನ ನಿಲ್ದಾಣಕ್ಕೆ ಆಗಮನ
- 5.20 ಕಾಪ್ಟರ್‍ನಲ್ಲಿ ಷರೀಫ್  ಜತೆಗೆ ಮೋದಿ ಪ್ರಯಾಣ
- 5.40 ಷರೀಫ್  ನಿವಾಸಕ್ಕೆ ಆಗಮನ
- 6.50 ಮೋದಿನವಾಜ್ ಭೇಟಿ ಮುಕ್ತಾಯ
- 7.11 ನವಾಜ್ ನಿವಾಸದಿಂದ ಏರ್ ಪೋರ್ಟ್‍ಗೆ ಪಿಎಂ ಮೋದಿ
- 7.20 ಲಾಹೋರ್‍ನಿಂದ ದೆಹಲಿಗೆ
- 8.35 ದೆಹಲಿ ಆಗಮನ

ಭಾರತಪಾಕ್ ಪ್ರಧಾನಿ ಮಟ್ಟದ ಭೇಟಿ
1953 ಜು.25-25
- ಪಂ.ಜವಾಹರ್‍ಲಾಲ್ ನೆಹರೂ ಕರಾಚಿಗೆ ಭೇಟಿ ನೀಡಿ ಪಾಕಿಸ್ತಾನ ಪ್ರಧಾನಿ ಜತೆ ಮಾತುಕತೆ
- ಭಾರತಪಾಕಿಸ್ತಾನ ನಡುವೆ ಮೊದಲ ಬಾರಿಗೆ ವಿವಾದ ಪರಿಹಾರಕ್ಕೆ ಉನ್ನತ ಮಟ್ಟದ ಮಾತುಕತೆ
1960 ಸೆ.19-23
- ಪಂ.ಜವಾಹರ್‍ಲಾಲ್ ನೆಹರೂ ಕರಾಚಿಗೆ, ಮುರೀ, ನತಿಯಾಗಾಲಿ, ರಾವಲ್ಪಿಂಡಿ ಮತ್ತು ಲಾಹೋರ್‍ಗೆ ಭೇಟಿ, ಈ ಪ್ರವಾಸದ ವೇಳೆ ಸಿಂಧೂ ಜಲ ಒಪ್ಪಂದಕ್ಕೆ ಸಹಿ
1988 ಡಿ.29-31
-ಈ ವರ್ಷ ರಾಜೀವ್ ಗಾಂಧಿ ಭೇಟಿ ನೀಡಿದ್ದರು. 28 ವರ್ಷಗಳ ಪಾಕ್ ಭೇಟಿ ನೀಡಿದ್ದ ಭಾರತದ ಪ್ರಧಾನಿ
- ಇದೇ ಸಂದರ್ಭದಲ್ಲಿ ನಾಲ್ಕನೇ ಸಾರ್ಕ್ ಸಮ್ಮೇಳನ ಆಯೋಜನೆಗೊಂಡಿತ್ತು. ಪಾಕ್ ಪ್ರಧಾನಿ ಬೆನಝೀರ್ ಭುಟ್ಟೋ ಜತೆ ಮೂರು ದ್ವಿಪಕ್ಷೀಯ ಒಪ್ಪಂದ
1989 ಜು.16-17
- ರಾಜೀವ್ ಗಾಂಧಿ ಇಸ್ಲಾಮಾಬಾದ್‍ಗೆ ಭೇಟಿ
- ಭಾರತಕ್ಕೆ ಸಂಬಂಧಿಸಿದ ನಿಲುವುಗಳ ಬಗ್ಗೆ ಪಾಕಿಸ್ತಾನ ಸೇನೆ ಪ್ರಭಾವ ಬೀರಿದ್ದರಿಂದ ಪ್ರವಾಸ ಫಲಪ್ರದವಾಗಲಿಲ್ಲ
1999 ಫೆ.19-20
- ಲಾಹೋರ್‍ಗೆ ಬಸ್ ಯಾತ್ರೆ ಕೈಗೊಳ್ಳುವ ಮೂಲಕ ಎ.ಬಿ.ವಾಜಪೇಯಿ ಪಾಕಿಸ್ತಾನಕ್ಕೆ, ವಾಘಾ ಗಡಿಯಲ್ಲಿ ಜ.ಪರ್ವೇಜ್ ಮುಷರ್ರಫ್ ರಿಂದ ಖುದ್ದು ಸ್ವಾಗತ, ಲಾಹೋರ್ ಘೋಷಣೆ ಕರಡು  ಸಿದ್ಧಗೊಂಡಿದ್ದರೂ ಅನುಷ್ಠಾನಗೊಳ್ಳಲಿಲ್ಲ. ಇದಾದ ಕೆಲವೇ ತಿಂಗಳಲ್ಲಿ ಕಾರ್ಗಿಲ್‍ನಲ್ಲಿ ಪಾಕ್ ಆಕ್ರಮಣ ನಡೆಸಿತ್ತು.
2004 ಜ.4-6
- 12ನೇ ಸಾರ್ಕ್ ಸಮ್ಮೇಳನಕ್ಕೆ ತೆರಳಿದ ವಾಜಪೇಯಿ
- ಲಾಹೋರ್ ಘೋಷಣೆ ಅನುಷ್ಠಾನಕ್ಕೆ ವಾಜಪೇಯಿ-ಝಫರುಲ್ಲಾ ಖಾನ್ ಜಮಾಲಿ ಒಪ್ಪಿಗೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com