ಮತಪತ್ರ ಹೊರ ತಂದ ಮಹಿಳಾ ಸದಸ್ಯರು, ಫೋಟೋ ಕ್ಲಿಕ್ಕಿಸಿದ ನಗರಸಭೆ ಸದಸ್ಯರು

ಭಾನುವಾರ ನಡೆದ ವಿಧಾನಪರಿಷತ್ ಚುನಾವಣೆ ವೇಳೆ ಗ್ರಾಮ ಪಂಚಾಯಿತಿ 8 ಮಹಿಳಾ ಸದಸ್ಯರು ಮತಪತ್ರಗಳನ್ನೇ ಹೊರ ತಂದ ಘಟನೆ ನಡೆಯಿತು...
ವಿಧಾನ ಪರಿಷತ್ ಚುನಾವಣೆ (ಸಂಗ್ರಹ ಚಿತ್ರ)
ವಿಧಾನ ಪರಿಷತ್ ಚುನಾವಣೆ (ಸಂಗ್ರಹ ಚಿತ್ರ)

ಬೆಂಗಳೂರು: ಭಾನುವಾರ ನಡೆದ ವಿಧಾನಪರಿಷತ್ ಚುನಾವಣೆ ವೇಳೆ ಗ್ರಾಮ ಪಂಚಾಯಿತಿ 8 ಮಹಿಳಾ ಸದಸ್ಯರು ಮತಪತ್ರಗಳನ್ನೇ ಹೊರ ತಂದ ಘಟನೆ ನಡೆಯಿತು.

ಆನೇಕಲ್ ತಾಲೂಕಿನ ಮುಗಳೂರು ಗ್ರಾಮ ಪಂಚಾಯತ್​ನ 8 ಮಂದಿ ಮಹಿಳಾ ಸದಸ್ಯರು ಮತದಾನ ಪ್ರಕ್ರಿಯೆ ವೇಳೆ ಮತಪತ್ರಗಳನ್ನು ಮತಗಟ್ಟೆಯಿಂದ ಹೊರತಂದರು. ಇದರಿಂದ ಅಲ್ಲಿ  ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಚುನಾವಣಾಧಿಕಾರಿಗಳು ತಕ್ಷಣ ಮತಪತ್ರಗಳನ್ನು ವಾಪಸ್​ ಪಡೆದುಕೊಂಡರು. ಈ ವಿಚಾರ  ತಿಳಿಯುತ್ತಿದ್ದಂತೆಯೇ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳ ಬೇಜವಾಬ್ದಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ  ಏಕ ಕಾಲಕ್ಕೆ 8 ಮಂದಿ ಸದಸ್ಯರು ಮತಪತ್ರಗಳನ್ನು ಹೊರ ತೆಗೆದುಕೊಂಡು ಹೋಗಿದ್ದು ಹೇಗೆ? ಅದರ ಹಿಂದಿನ ಉದ್ದೇಶವೇನು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ  ತೆಗೆದುಕೊಂಡರು.

ಮತಗಟ್ಟೆಯಲ್ಲಿ ಫೋಟೋ ಕ್ಲಿಕ್ಕಿಸಿ ಪರದಾಡಿದ ನಗರಸಭೆ ಸದಸ್ಯರು
ಮತ್ತೊಂದೆಡೆ ಮತದಾನ ಪ್ರಕ್ರಿಯೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ನಗರಸಭೆ ಸದಸ್ಯರು ಮತಗಟ್ಟೆಯೊಳಗೆ ಮೊಬೈಲ್​ ತಗೆದುಕೊಂಡು ಹೋಗಿ ಮತ ಚಲಾವಣೆ ಮಾಡುವುದನ್ನು ಫೋಟೋ  ಕ್ಲಿಕ್ಕಿಸಿಕೊಂಡು, ಅಧಿಕಾರಿಗಳ ಕೈಗೆ ಸಿಕ್ಕಿ ಪರದಾಡಿದ ಘಟನೆ ನಡೆಯಿತು. ನಗರಸಭೆ ಸದಸ್ಯರಾದ ಗಜೇಂದ್ರ ಮತ್ತು ಮಂಜುನಾಥ್ ಇಲ್ಲಿನ ನಗರಸಭೆ ಮತಗಟ್ಟೆಯ 101ರಲ್ಲಿ ಮತ ಚಲಾವಣೆ  ಮಾಡುವ ವೇಳೆ ಫೋಟೋ ಕ್ಲಿಕ್ಕಿಸಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ಮೊಬೈಲ್​ ತಗೆದುಕೊಂಡು ಹೋಗಿರುವುದನ್ನು ಪ್ರಶ್ನೆಸಿದಾಗ ಪೋಟೋ ಡಿಲೀಟ್​ ಮಾಡಿ ಮತಗಟ್ಟೆಯಿಂದ ಇಬ್ಬರು  ಸದಸ್ಯರು ಹೊರ ನಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com