
ಬೆಂಗಳೂರು: ಹ್ಯಾಪಿ ನ್ಯೂ ಇಯರ್ ಬೆಂಗಳೂರು... ಹೀಗೆ 2015ರ ಕೊನೆ ಮೀರಿ 2016ರ ಹೊಸ ದಿನಕ್ಕೆ ಕಾಲಿಡುತ್ತಿದ್ದಂತೆ ಮರು ತುಂಬಿದ ದೇಹ, ನಶೆ ಏರಿದ ತಲೆ, ಖುಷಿ ತುಂಬಿದ ಮನಸ್ಸು, ಹಾಡಿನ ಝಲಕ್ ಗೆ ಮೈಮರೆತು ಕುಣಿದ ಬೆಂಗಳೂರಿನ ಜನತೆಯ ಒಳಧ್ವನಿಯಿಂದ ಉದ್ಘರಿಸುತ್ತಿದ್ದ ಹ್ಯಾಪಿ ನ್ಯೂ ಇಯರ್ ಬೆಂಗಳೂರು...ಹ್ಯಾಪಿ ನ್ಯೂ ಇಯರ್ ಬೆಂಗಳೂರು...ಶೂಭಾಶಯಗಳ ಝೇಂಕಾರಕ್ಕೆ ಸಮಯ 12 ಗಂಟೆ ಮೀರಿತ್ತು...
ಆದರೂ ನಗರದ ಪ್ರತಿಷ್ಠಿತ ರಸ್ತೆಗಳಾದ ಬ್ರಿಗೇಡ್ ರಸ್ತೆ, ಮಹಾತ್ಮ ಗಾಂಧಿ ರಸ್ತೆ, ಚರ್ಚೆ ರಸ್ತೆಯಲ್ಲಿ ಜನಜಂಗುಳಿ ಕಡಿಮೆಯಾಗಿರಲಿಲ್ಲ...ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಗಳಲ್ಲಿ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯುತ್ತಿದ್ದರೆ ಇತರೆ ರಸ್ತೆಗಳಲ್ಲೂ ಹರ್ಷದ ಹೊನಲು ಮುಗಿಲು ಮುಟ್ಟಿತ್ತು. ಬೈಗಿನ ಆಗಸದಲ್ಲಿ ಚಿತ್ತಾರ ಬರೆಯುತ್ತಿದ್ದ ಪಟಾಕಿಗಳ ರಂಗೋಲಿ ಕಣ್ಣಿನ ಹೊಳಿಪಿನಲ್ಲಿ ಬೆಳಕು ಚಿಮಿಕಿಸುತ್ತಿತ್ತು.
ಮಕ್ಕಳಾದಿಯಾಗಿ ದೊಡ್ಡವರು ಇಗೋ ಮರೆತು ಹರ್ಷದ ಹೊಳೆಯಲ್ಲಿ ಮಿಂದಿದ್ದ ರಮ್ಯ ಕ್ಷಣಕ್ಕೆ ಬೆಂಗಳೂರು ಸಾಕ್ಷಿಯಾಗಿತ್ತು. ನಗರದ ಯಶವಂತರಪುರದ ತಾಜ್ ವಿವಾಂತದಲ್ಲಿ ಆಯೋಜಿಸಿರುವ ಲಾಸ್ ವೆಗಾಸ್ ಗೋಲ್ಡನ್, ಲೀಲಾ ಪ್ಯಾಲೇಸ್, ಓಬೆರಾಯ್, ಲೀ ಮಂಡಿಯನ್, ಐಟಿಸಿ ಗಾರ್ಡೆನಿಯಾ, ಲಲಿತ್ ಅಶೋಕ್, ವಿಂಡ್ಸರ್ ಮ್ಯಾನರ್, ದಿ ಏಟ್ರಿಯಾ ತಾಜ್ ವೆಸ್ಟೆಂಡ್, ಗೋಲ್ಡ್ ಫಿಂಚ್, ದಿ ಆರ್ಕಿಡ್, ಛಾನ್ಸೆರಿ ಪೆವಿಲಿಯನ್, ಒರೆಯಾನ್, ಮಂತ್ರಿ ಸ್ಕ್ವೇರ್, ಬಿಗ್ ಬಜಾರ್ ಲಿಡೋ ಮಾಲ್ ಮುಂತಾದ ಕಡೆಗಳಲ್ಲಿ ರಾಕ್ ಸಂಗೀತ ಝಲಕ್ಕು ಮೊಳಗುತ್ತಿತ್ತು. ವೈಟ್ ಫೀಲ್ಡ್ ನಲ್ಲಿರುವ ಕೀಸ್ ಹೋಟೆಲ್ ನಲ್ಲಿ ರಷ್ಯನ್ ನರ್ತಕಿಯರ ನರ್ತನ ಮುದ ನೀಡಿತು. ಇದರೊಂದಿಗೆ ಮ್ಯಾಜಿಕ್ ಷೋ, ಜಂಪಿಂಗ್ ಕ್ಯಾಸ್ಟಲ್
ಮುಂತಾದ ಕಾರ್ಯಕ್ರಮಗಳು ಗಮನ ಸೆಳೆದವು.
ಪೋಲಿಗಳ ಕಣ್ಗಾವಲಿಗೆ ಪೊಲೀಸರು
ಹೊಸ ವರ್ಷಾಚರಣೆ ವೇಳೆ ಮುಜುಗರ ತರುವಂತಹ ಕೃತ್ಯಕ್ಕೆ ಕೈ ಹಾಕುವ ಪೊಲಿಗಳ ಕಣ್ಗಾವಲಿಗೆ ಪೊಲೀಸರು ರಾತ್ರಿಯಿಡೀ ಕಣ್ಣಾಗಿ ನಿಯಂತ್ರಿಸುತ್ತಿದ್ದರು. ಇದಕ್ಕಾಗಿಯೇ ಪೊಲೀಸ್ ಇಲಾಖೆ ಡಿಸಿಪಿ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಭದ್ರತೆಗಾಗಿ 10 ಮಂದಿ ಎಸಿಪಿ, 20 ಮಂದಿ ಇನ್ ಸ್ಪೆಕ್ಟರ್, 60 ಮಂದಿ ಎಎಸ್ಐ, 600 ಮಂದಿ ಪೇದೆಗಳು ಹಾಗೂ ವಿಶೇಷವಾಗಿ 12 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿತ್ತು.
ಹೆಚ್ಚಿನ ನಿಗಾವಹಿಸಲು 48 ಸಿಸಿಟಿವಿ ಹಾಗೂ 60 ವಾಚ್ ಟವರ್ ಗಳನ್ನು ಅಳವಡಿಸಲಾಗಿತ್ತು. ಪಾರ್ಟಿ ಹಾಲ್ ನಿಂದ ಮನೆಗೆ ತೆರಳಲು ಕಾರುಗಳ ವ್ಯವಸ್ಥೆ, ವಾಹನ ವ್ಯವಸ್ಥೆ ಮಾಡಲಾಗಿತ್ತು. ಮೆಟ್ರೋ ರೈಲುಗಳು ಮಧ್ಯ ರಾತ್ರಿ ಒಂದು ಗಂಟೆಯವರೆಗೂ ಸೇವೆ ನೀಡಿದವು. ಬಿಎಂಟಿಸಿಯೂ ಸಹಕರಿಸಿತು.
ಇದಕ್ಕೂ ಮೊದಲು ಕೇಂದ್ರ ವಲಯ ಡಿಸಿಪಿ ಸಂದೀಪ್ ಪಾಟೀಲ್, ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಹಾಗೂ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲಾ ಸಿಸಿಟಿವಿಗಳನ್ನು ಖುದ್ದಾಗಿ ಪರಿಶೀಲಿಸಿದರು. ಮೇಲೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಮೊದಲೇ ಎಚ್ಚರಿಕೆ ನೀಡಿದ್ದರು.
Advertisement