

ತ್ರಿಶೂರ್: ಕೇರಳದ ತ್ರಿಶೂರ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ನಾನು ನನ್ನ ಪತ್ನಿಯನ್ನು ಕಳೆದುಕೊಂಡಿದ್ದೇನೆ ಆದರೂ ಸುಳ್ಳು ಮತ್ತು ತಪ್ಪು ಮಾಹಿತಿಗಳಿಂದ ಕೂಡಿದ ಈ ಮಾಧ್ಯಮ ವರದಿಗಳಿಂದ ನೆಮ್ಮದಿಯಾಗಿ ಶೋಕಾಚರಣೆಗೂ ಅವಕಾಶವಿಲ್ಲದಾಗಿದೆ ಎಂದಿದ್ದಾರೆ ಶಶಿ ತರೂರ್.
"ದೆಹಲಿ ಪೊಲೀಸರು ನನ್ನ ಪತ್ನಿ ಸುನಂದಾ ಪುಷ್ಕರ್ ಕೊಲೆಯಾಗಿದ್ದಾರೆಂದು ಎಫ್ ಐ ಆರ್ ದಾಖಲು ಮಾಡಿದಾಕ್ಷಣ ನಾನು ಹೇಳಿಕೆ ನೀಡಿದ್ದೇನೆ. ನನ್ನ ಕುಟುಂಬದ ಯಾವುದೇ ಸದಸ್ಯ ಈ ಸಾವಿನಲ್ಲಿ ಯಾವುದೇ ಪಿತೂರಿ ಇದೆ ಎಂದು ನಂಬಿರಲಿಲ್ಲ. ಆದುದರಿಂದ ನನಗೆ ಆಘಾತವಾಗಿದೆ. ನಾವೆಲ್ಲಾ ಅವಳನ್ನು ಬಹಳ ಪ್ರೀತಿಸುತ್ತಿದ್ದೆವು" ಎಂದಿದ್ದಾರೆ ತರೂರ್. ನಾನು ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಈಗಾಗಲೇ ಹೇಳಿದ್ದೇನೆ ಎಂದಿದ್ದಾರೆ.
ಈ ವಿಷಯದ ಬಗ್ಗೆ ಮೌನವಾಗಿದ್ದಿರೇಕೆ ಎಂಬ ಪ್ರಶ್ನೆಗೆ "ನಾನು ಮೌನವಾಗಿರುವುದರಿಂದ ನಾನೇನೋ ಪಾಪ ಮಾಡಿದ್ದೇನೆ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ನನ್ನ ಪತ್ನಿ ಮರಣ ಹೊಂದಿರುವುದರಿಂದ ನಾನು ಸಹಜವಾಗಿಯೇ ಮೌನವಾಗಿದ್ದೇನೆ. ಪೊಲೀಸ್ ತನಿಖೆ ಜಾರಿಯಲ್ಲಿರುವಾಗ, ನಾನು ಇಲ್ಲಸಲ್ಲದ ಸಾರ್ವಜನಿಕೆ ಹೇಳಿಕೆ ಕೊಟ್ಟು, ಅವರ ತನಿಖೆಗೆ ಅಡ್ಡಿಪಡಿಸುವುದು ತಪ್ಪು. ಅದು ಪೊಲೀಸ್ ತನಿಖೆಗೆ ಎಸಗುವ ಅಪಚಾರ. ನಾನು ಪೊಲೀಸ್ ವಿಚಾರಣೆಯಲ್ಲಿ ನಂಬಿಕೆಯಿಟ್ಟಿದ್ದೇಣೆ. ಟಿ ಆರ್ ಪಿ ಗೋಸ್ಕರ ಸಾರ್ವಜನಿಕ ಚರ್ಚೆಯಲ್ಲಿ ಪಾಲ್ಗೊಳ್ಳಲು ನನಗೆ ಇಷ್ಟವಿಲ್ಲ. ಪೊಲೀಸರಿಗೆ ಬೇಕಾಗ ಎಲ್ಲ ನೆರವನ್ನೂ ನೀಡುತ್ತೇನೆ" ಎಂದಿದ್ದಾರೆ.