"ಲೋಕಾ" ಲಂಚ ಹಗರಣ: ರಿಯಾಜ್ ಬಂಧನ

ಲೋಕಾಯುಕ್ತ ಕಚೇರಿ ಲಂಚ ಹಗರಣ ಸಂಬಂಧ ಲೋಕಾಯುಕ್ತ ಜಂಟಿ ಆಯುಕ್ತ, ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯ್ಯದ್ ರಿಯಾಜ್ ಅವರನ್ನು ಎಸ್‍ಐಟಿ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ...
ಲೋಕಾಯುಕ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯ್ಯದ್ ರಿಯಾಜ್
ಲೋಕಾಯುಕ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯ್ಯದ್ ರಿಯಾಜ್
ಬೆಂಗಳೂರು: ಲೋಕಾಯುಕ್ತ ಕಚೇರಿ ಲಂಚ ಹಗರಣ ಸಂಬಂಧ ಲೋಕಾಯುಕ್ತ ಜಂಟಿ ಆಯುಕ್ತ, ಸಾರ್ವಜನಿಕ ಸಂಪರ್ಕಾಧಿಕಾರಿ ಸೈಯ್ಯದ್ ರಿಯಾಜ್ ಅವರನ್ನು ಎಸ್‍ಐಟಿ ಅಧಿಕಾರಿಗಳು  ಭಾನುವಾರ ಬಂಧಿಸಿದ್ದಾರೆ.
ಧಾರ್ಮಿಕ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದ ಸೈಯ್ಯದ್ ರಿಯಾಜ್ ಅನಾರೋಗ್ಯದಿಂದ ಕೋರಮಂಗಲದ ತಮ್ಮ ಮನೆ ಸಮೀಪದ ಖಾಸಗಿ ಆಸ್ಪತ್ರೆಗೆ 2 ದಿನಗಳ ಹಿಂದೆಂಯೇ ದಾಖ  ಲಾಗಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಎಸ್‍ಐಟಿ ಅಧಿಕಾರಿಗಳು, ಮಧ್ಯಾಹ್ನವೇ ಆಸ್ಪತ್ರೆಗೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ. ರಿಯಾಜ್‍ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಿ  ಅನಾರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ನಿಯಮಗಳ ಪ್ರಕಾರ ರಿಯಾಜ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಯಾವುದೇ ಗಂಭೀರ  ಆರೋಗ್ಯ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದ ನಂತರ, ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಕರೆದೊಯ್ಯಲಾಗಿದೆ.
ಸೋಮವಾರ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿ, ನಂತರ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆಯುವುದಾಗಿ ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಧಾರ್ಮಿಕ ಪ್ರವಾಸಕ್ಕೆಂದು 17 ದಿನಗಳ ಕಾಲ ರಜೆ ಹಾಕಿದ್ದ ರಿಯಾಜ್ ರಜೆ ಅವಧಿ ಮುಗಿದು ಒಂದು ವಾರ ಕಳೆದರೂ ಕೆಲಸಕ್ಕೆ ಹಾಜರಾಗಿರಲಿಲ್ಲ. ಅಲ್ಲದೇ, ರಜೆ ವಿಸ್ತರಣೆ ಕೋರಿ ಅರ್ಜಿ   ಸಲ್ಲಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ಲೋಕಾಯುಕ್ತದಲ್ಲಿರುವ ಅವರ ಕಚೇರಿಗೆ ಎಸ್‍ಐಟಿ ಅಧಿಕಾರಿಗಳು ಬೀಗ ಜಡಿದಿದ್ದರು. ಲೋಕಾಯುಕ್ತ ಹಂಗಾಮಿ ರಿಜಿಸ್ಟ್ರಾರ್ ರಿಯಾಜ್ ರಜೆ ವಿಸ್ತರಣೆಗೆ ನಿರಾಕರಿಸಿದ್ದರು. ರಿಯಾಜ್ ಅವರು ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಲುಕ್ ಔಟ್ ನೋಟಿಸ್ ಕೂಡಾ ಜಾರಿಯಾಗಿತ್ತು ಎಂಬ ಸುದ್ದಿ ಕೂಡಾ ಹರಡಿತ್ತು. ಆದರೆ, ಎಸ್ ಐಟಿ ಹಿರಿಯ ಅಧಿಕಾರಿಂಯೊಬ್ಬರು ಇದನ್ನು ನಿರಾಕರಿಸಿದ್ದು, ರಿಯಾಜ್ ಅವರು ನಗರದಲ್ಲೇ ಇರುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಹುಡುಕಾಟ ನಡೆಸುತ್ತಿದ್ದೆವು ಎಂದಿದ್ದಾರೆ.
ರಿಯಾಜ್ ಹಿನ್ನೆಲೆ
10ಕ್ಕೂ ಹೆಚ್ಚು ವರ್ಷಗಳಿಂದ ಲೋಕಾಯುಕ್ತ ಪಿಆರ್‍ಓ ಆಗಿರುವ ಸೈಯ್ಯದ್ ರಿಯಾಜ್ ಇಲಾಖೆಗೆ ಸೇರಿಕೊಂಡಿದ್ದು ಸಬ್ ಇನ್ಸ್‍ಪೆಕ್ಟರ್ ಆಗಿ. ಲೋಕಾಯುಕ್ತ ಕಚೇರಿಯಲ್ಲಿ ಅವರಿಗೆ  ನೀಡಲಾಗಿರುವ ಕೊಠಡಿಯ ಪಕ್ಕದಲ್ಲಿರುವ ಕಾನ್ಫರೆನ್ಸ್ ಹಾಲ್‍ನಲ್ಲಿ ಸುಲಿಗೆ ವ್ಯವಹಾರಗಳು ನಡೆಯುತ್ತಿದ್ದವು ಎನ್ನುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಲ್ಲದೇ, ದೂರುದಾರ ಕೃಷ್ಣಮೂರ್ತಿಗೆ ರು.1 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದು ಕೂಡಾ ಅದೇ ಹಾಲ್‍ನಲ್ಲೇ ಎನ್ನುವುದು ಖಚಿತಗ ಗೊಂಡಿದೆ. ರಿಯಾಜ್ ಅವರನ್ನು ಬಂಧಿಸಿ  ವಿಚಾರಣೆ ನಡೆಸುವ ಅಗತ್ಯತೆ  ಹೆಚ್ಚಾಗಿತ್ತು. ಲೋಕಾಯುಕ್ತ ಅವರ ಪುತ್ರ ಅಶ್ವಿನ್‍ರಾವ್ ಅವರ ಪಾತ್ರ ಇದೆ ಎಂಬ ಬಗ್ಗೆಯೂ ರಿಯಾಜ್ ಅವರಿಂದಲೇ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಎಸ್‍ಐಟಿ ಅಧಿಕಾರಿಗಳು  ಹೇಳಿದ್ದಾರೆ.
ಹಾಸನದಲ್ಲೂ ಕಾರ್ಯಾಚರಣೆ: ರಿಯಾಜ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಅವರ ಸಂಬಂಧಿ ಸಾದಿಕ್ ಪಾತ್ರ ಇರುವುದರಿಂದ ಆತನ ಬಂಧನಕ್ಕೆ ಶಿವಮೊಗ್ಗ, ಹಾಸನದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿದಿದೆ. ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಸಂಬಂಧ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳಾದ ಅಶೋಕ್ ಕುಮಾರ್, ಶಂಕರಗೌಡ ಮತ್ತು ಶ್ರೀನಿವಾಸಗೌಡ ಅವರನ್ನು ಗೌಪ್ಯ ಸ್ಥಳದಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಆರೋಪಿಗಳ ಹೇಳಿಕೆಗಳನ್ನು ಹೋಲಿಕೆ ಮಾಡಲಾಗುತ್ತಿದೆ. ಅಲ್ಲದೇ, ಅವರು ನೀಡಿರುವ ಮಾಹಿತಿ  ಆಧರಿಸಿ ಕೆಲವರನ್ನು ಎಸ್ಐಟಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಲಾಗಿದೆ. ಇದರಲ್ಲಿ ಕೆಲವು ಪತ್ರಕರ್ತರು, ಸರ್ಕಾರಿ ಸಿಬ್ಬಂದಿ ಸೇರಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ,  ಪೊಲೀಸರಿಗೆ ಕೆಲವರು ಮಾಹಿತಿ ನೀಡಲು ಮುಂದಾಗುತ್ತಿದ್ದು, ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎಸ್‍ಐಟಿ ವಿರುದ್ಧ ಹೈಕೋರ್ಟ್‍ಗೆ ಅರ್ಜಿ: ಪ್ರಮುಖ ಆರೋಪಿ ಅಶ್ವಿನ್ ರಾವ್ ಬಂಧಿಸದೆ ವಿಳಂಬ ನೀತಿ ತೊರುತ್ತಿರುವ ಎಸ್‍ಐಟಿ ಅಧಿಕಾರಗಳ ವಿರುದ್ಧವೇ ತನಿಖೆ ನಡೆಸಬೇಕು ಎಂದು ಕೋರಿ  ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗುವುದು. ಲೋಕಾಯುಕ್ತ ಕಚೇರಿ ಲಂಚ ಹಗರಣವನ್ನು ಸಿಬಿಐಗೆ ವಹಿಸುವಂತೆಯೂ ಕೋರಲಾಗುವುದು. ಎಸ್‍ಐಟಿ ಅಧಿಕಾರಿಗಳ ಕರ್ತವ್ಯದ ಬಗ್ಗೆ  ಅನುಮಾನವಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಅರ್ಜಿಯಲ್ಲಿ ಕೋರಲಾಗುವುದು ಎಂದು ಎಂದು ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ ಎಸ್. ಆರ್. ಹಿರೇಮಠ ತಿಳಿಸಿದರು.
ಲೋಕಾಯುಕ್ತ ಕಚೇರಿ ರು.1 ಕೋಟಿ ಲಂಚ ಹಗರಣದ ಬಗ್ಗೆ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು ದಾಖಲಿಸಿದ್ದ ಎಫ್ಐಆರ್‍ನಲ್ಲಿ ನ್ಯಾ. ವೈ.ಭಾಸ್ಕರ್‍ರಾವ್ ಅವರ ಪುತ್ರ ಅಶ್ವಿನ್‍ರಾವ್  ಹೆಸರು ನಮೂದಿಸಲಾಗಿದ್ದು, ಜತೆಗೆ ಇತರ ಆರೋಪಿಗಳು ಎಂದು ಹೇಳಲಾಗಿದೆ. ಆದರೆ, ಎಸ್‍ಐಟಿ ಅಧಿಕಾರಿಗಳು ಕಳೆದೊಂದು ವಾರದಿಂದ ನಡೆಸುತ್ತಿರುವ ತನಿಖೆಯಲ್ಲಿ ಪ್ರಮುಖ  ಆರೋಪಿಯನ್ನೇ ಬಿಟ್ಟು ನಂತರದ ಸ್ಥಾನದಲ್ಲಿ ರುವ ಆರೋಪಿಗಳ ಬಂಧಿಸಿದ್ದಾರೆ. ಇದರಿಂದಾಗಿ ತನಿಖಾಧಿಕಾರಿಗಳ ಕರ್ತವ್ಯನಿಷ್ಠೆ ಬಗ್ಗೆ ಅನುಮಾನ ಮೂಡಿಸಿದೆ. ಹೀಗಾಗಿ, ಅವರ ವಿರುದ್ಧವೂ  ತನಿಖೆಯಾಗಲಿ ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹಿರೇಮಠ ಹೇಳಿದರು.
ಇಂದು ಅಶ್ವಿನ್ ಸೆರೆ?
ಲಂಚ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್‍ರಾವ್ ಬಂಧನಕ್ಕೆ ಶೋಧ ಕಾರ್ಯ ಮತ್ತಷ್ಟು ತೀವ್ರಗೊಂಡಿದೆ. ಆರೋಪಿಗಾಗಿ ಶೋಧ ತೀವ್ರಗೊಂಡಿದ್ದು, ಸೋಮವಾರ ಸಂಜೆಯೊಳಗೆ  ಬಂಧಿಸುವ ಭರವಸೆ ಇದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಬಿಡಿಎ ಬ್ರೋಕರ್ ವಾಸು, ವಿ ಭಾಸ್ಕರ್ ಅಲಿಯಾಸ್  420 ಭಾಸ್ಕರ್ ಗಾಗಿಯೂ ಶೋಧ ತೀವ್ರಗೊಂಡಿದೆ.
ಲೋಕಾ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್ ಬಂಧಿಸದೆ ವಿಳಂಬ ನೀತಿ ತೋರುತ್ತಿರುವ ಎಸ್‍ಐಟಿ ಅಧಿಕಾರಗಳ ವಿರುದ್ಧವೇ ತನಿಖೆ ನಡೆಸಬೇಕು. ಈ ಹಗರಣವನ್ನು ಸಿಬಿಐಗೆ  ಒಪ್ಪಿಸಬೇಕು. ಎಸ್‍ಐಟಿ ಅಧಿಕಾರಿಗಳ ಕರ್ತವ್ಯದ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಹೈಕೋರ್ಟ್‍ಗೆ ಅರ್ಜಿ ಸಲ್ಲಿಸುತ್ತೇವೆ.
-ಎಸ್.ಆರ್. ಹಿರೇಮಠ, ಸಮಾಜ ಪರಿವರ್ತನಾ ಸಮುದಾಯ ಮುಖ್ಯಸ್ಥ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com