ಭಾರತ ನಮ್ಮ ನೆಲದಲ್ಲಿ ದಾಳಿ ನಡೆಸಿಯೇ ಇಲ್ಲ: ಮಯನ್ಮಾರ್

ಮಯನ್ಮಾರ್ ಗಡಿದಾಟಿ ನೂರಕ್ಕೂ ಅಧಿಕ ಬಂಡು ಕೋರರನ್ನು ಹತ್ಯೆ ಮಾಡಿರುವುದಾಗಿ ಭಾರತ ಘೋಷಿಸಿದ ಮರುದಿನವೇ ನೆರೆಯ ದೇಶ ತನ್ನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ/ಯಾಂಗೂನ್: ಮಯನ್ಮಾರ್  ಗಡಿದಾಟಿ ನೂರಕ್ಕೂ ಅಧಿಕ ಬಂಡು ಕೋರರನ್ನು ಹತ್ಯೆ ಮಾಡಿರುವುದಾಗಿ ಭಾರತ ಘೋಷಿಸಿದ ಮರುದಿನವೇ ನೆರೆಯ ದೇಶ ತನ್ನ ನೆಲದಲ್ಲಿ ಇಂಥ ಕಾರ್ಯಾಚರಣೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಬಂಡುಕೋರರ ಮೇಲೆ ನಡೆದ ದಾಳಿ ನಡೆದದ್ದು ಭಾರತದ ಗಡಿಯಲ್ಲಿ ಎಂದು ಹೇಳುವ ಮೂಲಕ ಮಯನ್ಮಾರ್  ಉಲ್ಟಾ ಹೊಡೆದಿದೆ. ``ನಮ್ಮ ಸೇನೆ ಕಳುಹಿಸಿ ಕೊಟ್ಟಿರುವ ಮಾಹಿತಿ ಪ್ರಕಾರ ಬಂಡುಕೋರರ ಮೇಲೆ ದಾಳಿ ನಡೆದದ್ದು ಭಾರತ ಗಡಿಯಲ್ಲಿ'' ಎಂದು ಮಯನ್ಮಾರ್ ಅಧ್ಯಕ್ಷರ ಕಚೇರಿ ನಿರ್ದೇಶಕ ಝಾ ಹಾಯ್ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ.

ಮಯನ್ಮಾರ್ ಯಾವುದೇ ಕಾರಣಕ್ಕೂ ವಿದೇಶಿಯರಿಗೆ ನಮ್ಮ ನೆಲ ಬಳಸಿಕೊಂಡು ನೆರೆಯ ದೇಶಗಳ ಮೇಲೆ ದಾಳಿ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ. ಈ ಮೂಲಕ ನಮ್ಮ ನೆಲದಲ್ಲಿ ಸಮಸ್ಯೆ ಸೃಷ್ಟಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ವಿಶೇಷ ಪಡೆಗಳು ಮಯನ್ಮಾರ್ ನೊಳಗೆ ನುಗ್ಗಿ ಬಂಡುಕೋರರ ಎರಡು ಕ್ಯಾಂಪ್‍ಗಳ ಮೇಲೆ ದಾಳಿ ನಡೆಸಿ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿವೆ. ಈ ಮೂಲಕ ಮಣಿಪುರದಲ್ಲಿ 18 ಯೋಧರ ಹತ್ಯೆಗೆ ಪ್ರತೀಕಾರ ತೀರಿಸಿಕೊಂಡಿವೆ ಎಂದು ಭಾರತ ಹೇಳಿಕೆ ನೀಡಿದ ಬೆನ್ನಲ್ಲೇ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ಉಗ್ರರ ಶಿಬಿರಗಳ ಮೇಲಿನ ದಾಳಿಯನ್ನು ಮಯನ್ಮಾರ್  ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಡೆಸಲಾಗಿತ್ತು ಎಂದು ಸೇನೆ ಹೇಳಿಕೊಂಡಿತ್ತು.

ಪಾಕ್‍ಗೆ ನಡುಕ: ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆದದ್ದು ಗಡಿಯಾಚೆಯೋ ಅಥವಾ ಈಚೆಯೋ. ಆದರೆ ಇದು ಪಾಕಿಸ್ತಾನದಲ್ಲಂತು ಆತಂಕ ಹುಟ್ಟಿಸಿದೆ.
ಈ ದಾಳಿಯನ್ನು ಮುಂದಿಟ್ಟುಕೊಂಡು ಯಾವುದೇ ಕಾರಣಕ್ಕೂ ಭಯೋತ್ಪಾದನೆ ಯನ್ನು ಸಹಿಸಿಕೊಳ್ಳುವುದಿಲ್ಲ, ಇದಕ್ಕಾಗಿ ಗಡಿದಾಟಲೂ ಹಿಂದೇಟು ಹಾಕುವುದಿಲ್ಲ ಎನ್ನುವ ಎಚ್ಚರಿಕೆ ಭಾರತದಿಂದ ಹೊರಬಿದ್ದ ಬೆನ್ನಲ್ಲೇ ಪಾಕಿಸ್ತಾನ ಕಿಡಿಕಿಡಿಯಾಗಿದೆ. ಪಾಕಿಸ್ತಾನವೇನು ಮಯನ್ಮಾರ್  ಅಲ್ಲ ಎಂದು ಗುಟುರು ಹಾಕಿದೆ. ``ವಿದೇಶದಿಂದ
ಎದುರಾಗುವ ಯಾವುದೇ ಸವಾಲನ್ನು ಹಿಮ್ಮೆಟ್ಟಿಸುವ ತಾಕತ್ತು ಪಾಕ್ ಸೇನೆಗಿದೆ. ಭಾರತೀಯ ರಾಜಕಾರಣಿಗಳು ಹಗಲುಕನಸು ಕಾಣುವುದನ್ನು ಬಿಡಬೇಕು'' ಎಂದು ಪಾಕ್ ಗೃಹ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಹೇಳಿದ್ದಾರೆ.

ಚಾಂದೇಲಲ್ಲಿ ಸ್ಫೋಟ: 100 ಮಂದಿ ಉಗ್ರರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಚಾಂಡೇಲ್ ನಲ್ಲಿ ಅಲ್ಪ ತೀವ್ರತೆಯ ಸ್ಫೋಟ ಸಂಭವಿಸಿದೆ. ಅಲ್ಲಿನ ಮೊರೇ ಠಾಣಾ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣದಲ್ಲಿ ಈ ಘಟನೆ ಸಂಭವಿಸಿದೆ. ಅದರಲ್ಲಿ ಯಾರೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಇದೇ ವೇಳೆ, ಪರಿಸ್ಥಿತಿ ಅವಲೋಕನ ನಡೆಸಲು ಪ್ರಧಾನಿ ಮೋದಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‍ರನ್ನು ಮಣಿಪುರಕ್ಕೆ ಭೇಟಿ ನೀಡಲು ಆದೇಶ ನೀಡಿದ್ದಾರೆ.
ಧೋವಲ್ ಮಯನ್ಮಾರ್ ಗೆ: ಈ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಯನ್ಮಾರ್ ಗೆ ಭೇಟಿ ನೀಡಿ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸುವ ಬಗ್ಗೆ ಅಲ್ಲಿನ ಸರ್ಕಾರದ ಜತೆ ಮಾತುಕತೆ ನಡೆಸಲಿದ್ದಾರೆ.
ಇದರ ಜತೆಗೆ ಮಯನ್ಮಾರ್ ನಲ್ಲಿ ಭಾರತೀಯ ರಾಯಭಾರಿ ಗೌತಮ್ ಮುಖ್ಯೋಪಾಧ್ಯಾಯ ಮಯನ್ಮಾರ್  ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com