ಹಿಂದುಳಿದ ಪ್ರತಿಭಾವಂತರಿಗೆ ಶುಲ್ಕ ಭಾಗ್ಯ

ಸಿಇಟಿ ಮೂಲಕ ವೃತ್ತಿಪರ ಕೋರ್ಸ್‍ಗಳಿಗೆ ಆಯ್ಕೆಗೊಂಡ ಎಸ್‍ಸಿ, ಎಸ್‍ಟಿ ಮತ್ತಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಲಿದ್ದು, ಪ್ರವೇಶ ನಿರಾಕರಿಸುವ ಕಾಲೇಜುಗಳ ಮಾನ್ಯತೆ...
ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ
ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ
Updated on

ಬೆಂಗಳೂರು: ಸಿಇಟಿ ಮೂಲಕ ವೃತ್ತಿಪರ ಕೋರ್ಸ್‍ಗಳಿಗೆ ಆಯ್ಕೆಗೊಂಡ ಎಸ್‍ಸಿ, ಎಸ್‍ಟಿ ಮತ್ತಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಲಿದ್ದು, ಪ್ರವೇಶ
ನಿರಾಕರಿಸುವ ಕಾಲೇಜುಗಳ ಮಾನ್ಯತೆ ರದ್ದುಪಡಿಸುವುದಕ್ಕೂ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ವೃತ್ತಿಪರ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ, ಪಂಗಡ,  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಿತ ಕಾಯಲು ಸರ್ಕಾರ ಬದ್ಧವಿದೆ. ಸಿಇಟಿ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರದವತಿಯಿಂದಲೇ ಕಾಲೇಜು ಆಡಳಿತಮಂಡಳಿಗೆ ಭರಿಸಲಾಗುತ್ತದೆ ಎಂದರು. ಈ ವರ್ಗದ ವಿದ್ಯಾರ್ಥಿಗಳ ಬೋಧನಾ,  ವಾಚನಾಲಯ, ಪರೀಕ್ಷೆ, ಪ್ರಯೋಗಾಲಯ ಮತ್ತು ಪ್ರವೇಶ ಶುಲ್ಕುವನ್ನು ಸರ್ಕಾರವೇ ಭರಿಸುತ್ತದೆ. ಕಾಲೇಡು ಆಡಳಿತ ಮಂಡಳಿಯವರು ಮೀಸಲು ಸೌಲಭ್ಯ ಪಡೆದ ವಿದ್ಯಾರ್ಥಿಗಳಿಂದ ಈ ಶುಲ್ಕವನ್ನು ಪಡೆಯಬಾರದು. ಈ ಸಂಬಂಧ ಶಿಕ್ಷಣ ಸಚಿವರು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆಗೆ ಚರ್ಚೆ ನಡೆಸಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಈ ನಿಯಮ ಉಲ್ಲಂಘಿಸುತ್ತಿದೆ ಎಂದು ವಿದ್ಯಾರ್ಥಿಗಳು ದೂರು ನೀಡಿದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ನಿಯಮ ಉಲ್ಲಂಘಿಸಿದ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡುವುದಕ್ಕೂ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಅವರು ಎಚ್ಚರಿಸಿದರು. 2014-15ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್‍ಗಳಿಗೆ ಪ್ರವೇಶ ಪಡೆದ 2.82 ಲಕ್ಷ ಮೀಸಲು ಸೌಲಭ್ಯ ಪಡದೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ರು.178 ಕೋಟಿ ಶುಲ್ಕವನ್ನು ಸರ್ಕಾರವೇ ಭರಿಸಿದೆ. ವಿದ್ಯಾಸಿರಿ ಯೋಜನೆ ಅನ್ವಯ 66699 ವಿದ್ಯಾರ್ಥಿಗಳಿಗೆ ರು.75 ಕೋಟಿ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ ಎಂದರು.

ಮರು ಪರಿಶೀಲನೆ
ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಡೇಟಾ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುತ್ತಿದೆ. ಬೆಂಗಳೂರು ನಗರ ಹೊರತುಪಡಿಸಿ ಉಳಿದ ಕಡೆ ಮಾಹಿತಿ ಸಂಗ್ರಹ ಪೂರ್ಣಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರು ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ ಸರಿಯಾಗಿ ಮಾಹಿತಿ ಸಂಗ್ರಹವಾಗಿಲ್ಲ ಎಂಬ ಮಾತುಗಳಿವೆ. ಹೀಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮರುಪರಿಶೀಲನೆ ನಡೆಸುತ್ತೇವೆ ಎಂದರು.

ನಾವು ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಹಾಸ್ಟೆಲ್ ಪ್ರವೇಶಗಳಿಗೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿತ್ತು. ಆದರೆ ಈಗ ಪ್ರವೇಶಕ್ಕೆ ಮಿತಿ ಇಲ್ಲ. ಕೆಲವೆಡೆ ಕಟ್ಟಡಗಳ ಕೊರತೆ ಇದೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ವಿದ್ಯಾಸಿರಿ ಯೋಜನೆ ಅನ್ವಯ ವಿದ್ಯಾರ್ಥಿ ವೇತನ ನೀಡಲಾಗಿದೆ. ಮುಂದಿನ ವರ್ಷದಿಂದ ಯಾವುದೇ ಹಾಸ್ಟೇಲ್ ಕಟ್ಟಡಗಳು ಬಾಡಿಗೆ ಕಟ್ಟಡದಲ್ಲಿರುವುದಿಲ್ಲ ಎಂದರು.

ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬರುವ ಶಾಲೆಗಳು, ಹಾಸ್ಟೆಲ್ ಸಿಬ್ಬಂದಿಯನ್ನು ಆದಷ್ಟು ಬೇಗ ಭರ್ತಿ ಮಾಡಿಕೊಳ್ಳುತ್ತೇವೆ. ಖಾಲಿ ಇರು ಹುದ್ದೆಗಳನ್ನು ಕೆಪಿಎಸ್ ಸಿ ಮೂಲಕ ಭರ್ತಿ ಮಾಡಿಕೊಳ್ಳುತ್ತೇವೆ ಎಂದರು. ಅಲ್ಲದೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ದಿಂಬು ಮತ್ತು ಹಾಸಿಗೆ ಖರೀದಿಯಲ್ಲಿ ಅವ್ಯವಹಾರ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಲು ಆದೇಶ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com