ಡಿಕೆ ರವಿ ಸಾವು ಪ್ರಕರಣ: ಮುನಿಯಪ್ಪ, ವರ್ತೂರು ಪ್ರಕಾಶ್ ವಿಚಾರಣೆ

ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಬುಧವಾರ ಕಾಂಗ್ರೆಸ್ ಸಂಸದ ಕೆಹೆಚ್ ಮುನಿಯಪ್ಪ...
ಡಿಕೆ ರವಿ
ಡಿಕೆ ರವಿ
Updated on
ಕೋಲಾರ: ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಬುಧವಾರ ಕಾಂಗ್ರೆಸ್ ಸಂಸದ ಕೆಹೆಚ್ ಮುನಿಯಪ್ಪ, ಕೋಲಾರ ಶಾಸಕ ವರ್ತೂರು ಪ್ರಕಾಶ್ ಸೇರಿದಂತೆ ಸುಮಾರು 50 ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಬೆಂಗಳೂರಿನ ಸಿಬಿಐ ಅಧಿಕಾರಿಗಳು ನಿನ್ನೆ ಕಾಂಗ್ರೆಸ್ ಪಕ್ಷದ ಸಂಸದರಾದ ಕೆಹೆಚ್ ಮುನಿಯಪ್ಪ ಮತ್ತು ಕೋಲಾರದ ಪಕ್ಷೇತರ ಶಾಸಕ ಮತ್ತು ಮಾಜಿ ಸಚಿವರಾದ ವರ್ತೂರು ಪ್ರಕಾಶ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
2013ರ ಆಗಸ್ಟ್ ನಲ್ಲಿ ಐಎಎಸ್ ಅಧಿಕಾರಿ ಡಿಕೆ ರವಿ ಅವರನ್ನು ರಾಜ್ಯ ಸರ್ಕಾರ ಕೋಲಾರಕ್ಕೆ ವರ್ಗಾವಣೆ ಮಾಡಿತ್ತು. ಈ ಸಂದರ್ಭದಲ್ಲಿ ರವಿ ಅವರು ಕೋಲಾರದಲ್ಲಿ ಬಲವಾಗಿ ಬೇರೂರಿದ್ದ ಅಕ್ರಮ ಮರಳು ದಂಧೆ ವಿರುದ್ಧ ಸಮರ ಸಾರಿದ್ದರು. ಇದರಿಂದ ರವಿ ಅವರು ಜಿಲ್ಲೆಯಲ್ಲಿ ತುಂಬಾ ಖ್ಯಾತಿ ಗಳಿಸಿದ್ದರು. ಅಲ್ಲದೆ ಜಿಲ್ಲೆಯಲ್ಲಿ ಜಾರಿಗೆ ತಂದ ಅದಾಲತ್ ಕಾರ್ಯಕ್ರಮ ಹೆಚ್ಚು ಜನಮೆಚ್ಚುಗೆ ಪಡೆದಿತ್ತು. ಸರ್ಕಾರಿ ಭೂಮಿಯನ್ನು ಕಬಳಿಸಿದವರ ವಿರುದ್ಧವೂ ರವಿ ಕಾರ್ಯಾಚರಣೆಗೆ ಇಳಿದಿದ್ದರು. ಸಾರ್ವಜನಿಕ ರಸ್ತೆ ನಿರ್ಮಾಣದಲ್ಲಾಗುತ್ತಿರುವ ಕಳಪೆ ಗುಣಮಟ್ಟದ ಪರೀಕ್ಷೆಗೆ ಮುಂದಾಗಿದ್ದರು. ಇದು ಸ್ಥಳೀಯ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ನಂತರ 2014ರ ಅಕ್ಟೋಬರ್ ನಲ್ಲಿ ರವಿ ಅವರನ್ನು ಕೋಲಾರದಿಂದ ವರ್ಗಾಯಿಸಲಾಗಿತ್ತು. ರವಿ ಕೋಲಾರದಲ್ಲಿ ಜನಸಾಮಾನ್ಯರ ಪಾಲಿಗೆ ಹೀರೋ ಆಗಿಬಿಟ್ಟಿದ್ದರು.
ಡಿಕೆ ರವಿ ಕೋಲಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಮುನಿಯಪ್ಪಗೆ ಇಷ್ಟವಿರಲಿಲ್ಲ. ಮುನಿಯಪ್ಪ ತಮ್ಮ ಕ್ಷೇತ್ರದಲ್ಲಿನ ಡಿಕೆ ರವಿ ಕಾರ್ಯಶೈಲಿಯಿಂದಾಗಿ ಅವರ ವಿರುದ್ಧ ಮುನಿಸಿಕೊಂಡು ಹಲವಾರು ಬಾರಿ ವಾಗ್ವಾದ ನಡೆಸಿದ್ದರು. ಅಲ್ಲದೇ ಸ್ಥಳೀಯ ಶಾಸಕ ವರ್ತೂರು ಪ್ರಕಾಶ್ ಕೂಡಾ ರವಿಗೆ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಅಲ್ಲದೆ ಸರ್ಕಾರಿ ಅಧಿಕಾರಿಯೊಬ್ಬರಿಗೆ ದೂರವಾಣಿ ಕರೆ ಮೂಲಕ ವರ್ತೂರು ಪ್ರಕಾಶ್ ಬೆದರಿಕೆ ಹಾಕಿದ್ದ ವಿಚಾರವನ್ನು ಕೂಡ ಸಿಬಿಐ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಆ ನಿಟ್ಟಿನಲ್ಲಿ ಮುನಿಯಪ್ಪ ಮತ್ತು ವರ್ತೂರು ಪ್ರಕಾಶ್ ಅವರನ್ನು ತನಿಖೆಗೆ ಒಳಪಡಿಸಲು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.
2015ರ ಮಾರ್ಚ್ 16ರಂದು ಬೆಂಗಳೂರಿನ ಕೋರಮಂಗಲ ಬಳಿ ಇರುವ ತಮ್ಮ ಫ್ಲ್ಯಾಟ್‌ನಲ್ಲಿ ಡಿ.ಕೆ. ರವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ರವಿ ಮೃತದೇಹ ಪತ್ತೆಯಾಗಿತ್ತು. ಅಧಿಕಾರಿಯ ಸಾವಿನ ಹಿಂದೆ ಕೊಲೆಯ ಸಂಚಿದೆ ಎಂಬ ವಾದಗಳ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ರಾಜ್ಯಾದ್ಯಂತ ತೀವ್ರ ಆಗ್ರಹ ಕೇಳಿಬಂದಿತ್ತು. ಜನರು ಹಾಗೂ ವಿಪಕ್ಷಗಳ ಒತ್ತಡಕ್ಕೆ ಸರ್ಕಾರ ಏಪ್ರಿಲ್ 13ರಂದು ಡಿ.ಕೆ. ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com