ನವದೆಹಲಿ: ಆಂತರಿಕ ಭಿನ್ನಮತದ ಸೆಖೆ ಅನುಭವಿಸುತ್ತಿರುವ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ದೆಹಲಿ ಮುಖ್ಯಮಂತ್ರಿ, ಭಿನ್ನಮತೀಯ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಸ್ಟಿಂಗ್ ಆಪರೇಶನ್ ನಲ್ಲಿ ಸೆರೆ ಹಿಡಿಯಲಾಗಿದೆ. ಹೊಸ ಪಕ್ಷವನ್ನು ರಚಿಸುವುದಾಗಿ ಕೂಡ ಅವರು ಗುಡುಗಿದ್ದಾರೆ.
ಕೇಜ್ರಿವಾಲ್ ಅವರ ಖಾಸಗಿ ಸಂಭಾಷಣೆಯನ್ನು ವಿರೋಧಿ ಬಣದವರು ಕಳೆದ ೯ ತಿಂಗಳಿನಿಂದ ರೆಕಾರ್ಡ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೇಜ್ರಿವಾಲ್ ಬಣ ದೂರಿದೆ.
ಕೇಜ್ರಿವಾಲ್, ಪಕ್ಷದ ಕಾರ್ಯಕರ್ತರಾದ ಉಮೇಶ್ ಸಿಂಗ್ ಅವರೊಂದಿಗೆ ಕೋಪ ಮಾಡಿಕೊಂಡು ಯಾದವ್ ಮತ್ತು ಭೂಷಣ್ ಅವರೊಂದಿಗೆ ಹೋಗಿ ಸೇರಿಕೊ, ನಾನು ಹೊಸ ಪಕ್ಷ ಕಟ್ಟುತ್ತೇನೆ ಎಂದು ಹೇಳುವ ಸಂಭಾಷಣೆಯನ್ನು ಟಿ ವಿ ವಾಹಿನಿಗಳು ಪ್ರಸಾರ ಮಾಡಿವೆ.
"ಅವರು (ಯಾದವ್ ಮತ್ತು ಭೂಷಣ್) ಚುನಾವಣೆ ವೇಳೆಯಲ್ಲಿ ಹೇಗೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ನಿನಗೆ ಗೊತ್ತಿಲ್ಲ. ನಾನು ಹೊಸ ಪಕ್ಷ ಪ್ರಾರಂಭಿಸಲು ಚಿಂತಿಸುತ್ತಿದ್ದೇನೆ. ೬೬ ಶಾಸಕರೊಂದಿಗೆ ಪಕ್ಷ ತೊರೆಯುತ್ತೇನೆ. ಯಾದವ್ ಮತ್ತು ಭೂಷಣ್ ಅವರೊಂದಿಗೆ ಕೆಲಸ ಮಾಡಲು ನಿನಗೆ ಅಭಿನಂದನೆಗಳು" ಎಂದು ಕೋಪದಿಂದ ಹೇಳಿದ್ದಾರೆ.
ಅಲ್ಲದೆ "ಈ ನಾಯಕರು ಬೇರೆ ಇನ್ಯಾವುದೇ ಪಕ್ಷದಲ್ಲಿ ಇದ್ದಿದ್ದರೆ ಅವರನ್ನು ಒದ್ದು ಹೊರಹಾಕಲಾಗುತ್ತಿತ್ತು" ಎಂದಿದ್ದಾರೆ ಕೇಜ್ರಿವಾಲ್.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಯೋಗೇಂದ್ರ ಯಾದವ್, ಇದು ನನಗೇನು ನೋವುಂಟು ಮಾಡಿಲ್ಲ. ನನ್ನದೇನು ದೂರಿಲ್ಲ. ಅವರು ನನ್ನ ಕಿರಿಯ ಸಹೋದರನಿದ್ದಂತೆ. ಅವರಿಗೆ ಹಾಗೆ ಮಾತನಾಡಲು ಹಕ್ಕಿದೆ ಎಂದಿದ್ದಾರೆ.