ಗ್ರಾಮಪಂಚಾಯಿತಿ ಚುನಾವಣೆಗೆ ಇಂದು ಅಧಿಸೂಚನೆ

ರಾಜ್ಯದ 5844 ಗ್ರಾಮ ಪಂಚಾಯ್ತಿಗಳ `ಮತಕದನ'ಕ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಸೋಮವಾರ ಅಧಿಸೂಚನೆ ಪ್ರಕಟವಾಗಲಿದೆ.
ಮತದಾನ (ಸಾಂದರ್ಭಿಕ ಚಿತ್ರ)
ಮತದಾನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ರಾಜ್ಯದ 5844 ಗ್ರಾಮ ಪಂಚಾಯ್ತಿಗಳ `ಮತಕದನ'ಕ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ಹಂತದ ಮತದಾನಕ್ಕೆ ಸೋಮವಾರ ಅಧಿಸೂಚನೆ ಪ್ರಕಟವಾಗಲಿದೆ.

ಚುನಾವಣೆಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೇ 29ರಂದು ನಡೆಯುವ ಮೊದಲ ಹಂತದ ಮತದಾನ ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ ಹಾಗೂ ಗದಗ ಜಿಲ್ಲೆಯಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಈ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ„ಕಾರಿಗಳು ಅಧಿಕೃತ ಅಧಿಸೂಚನೆ ಹೊರಡಿಸಲಿದ್ದು, ಮೇ 11ರಿಂದ ಮೇ 18ರವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆ ಯಲಿದೆ. ಎರಡನೇ ಹಂತದ ಚುನಾವಣೆಗೆ ಮೇ 15ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಮೇ 22ರವರೆಗೆ ನಾಮಪತ್ರ ಸಲ್ಲಿಸಬಹುದು. ಎರಡನೇ ಹಂತದ ಚುನಾವಣೆ ಜೂನ್ 2ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೀದರ್, ಬಳ್ಳಾರಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ನಡೆಯುತ್ತದೆ.

ಮೊದಲ ಹಂತದ ಚುನಾವಣೆಗೆ ಮೇ 19, ಎರಡನೇ ಹಂತದ ಚುನಾವಣೆಗೆ ಮೇ 23ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 21 ಮತ್ತು ಮೇ 25 ನಾಮಪತ್ರ ವಾಪಾಸ್

ಪಡೆಯುವುದಕ್ಕೆ ಕೊನೆಯ ದಿನ. ಮೇ 31 ಮತ್ತು ಜೂನ್ 4ರಂದು ಮರುಮತದಾನ ಅಗತ್ಯ ಇರುವ ಕಡೆ ಮತ್ತೆ ಎರಡು ಹಂತದಲ್ಲಿ ಮತದಾನ ನಡೆಯುತ್ತದೆ. ಜೂನ್ 5ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಜೂನ್ 6ರಂದು ಚುನಾವಣಾ ಪ್ರಕ್ರಿಯೆ ಅಂತಿಮಗೊಳ್ಳುತ್ತದೆ. ಮೇ 10ರ ಬೆಳಗ್ಗೆ 8ರಿಂದ ಜೂನ್ 7ರವರೆಗೆ ನೀತಿ ಸಂಹಿತೆ ಜಾರಿಗೆ ಬರಲಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ವೆಚ್ಚ ಮಾಡುವ ಹಣಕ್ಕೆ ಮಿತಿ ಹೇರಲಾಗಿಲ್ಲ.

ನೀತಿ ಸಂಹಿತೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಗೆ ಮಾತ್ರ ಅನ್ವಯಿಸುತ್ತದೆ. ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆ ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಒಟ್ಟು 2,81,56,987 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 38,604 ಮತಗಟ್ಟೆ ಗುರುತಿಸಲಾಗಿದೆ. ನಿರ್ವಹಣೆಗಾಗಿ ಆಯೋಗಕ್ಕೆ ರು.66 ಕೋಟಿ ವೆಚ್ಚವಾಗಲಿದೆ.

ಪರಿಷ್ಕೃತ ಮೀಸಲು ಪಟ್ಟಿ

ಚುನಾವಣೆಗೆ ಆಯೋಗ ಪರಿಷ್ಕೃತ ಮೀಸಲು ಪಟ್ಟಿ ಪ್ರಕಟಿಸಿದ್ದು, ಮಹಿಳೆ - 51,535, ಪರಿಶಿಷ್ಟ ಜಾತಿ- 19,945, ಪರಿಶಿಷ್ಟ ಪಂಗಡ 11,269, ಹಿಂದುಳಿದ ವರ್ಗ ಎ- 14,678, ಹಿಂದುಳಿದ ವರ್ಗ ಬಿ-3,560, ಹಾಗೂ 50,531 ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ನಿಗದಿ ಮಾಡಲಾಗಿದೆ. ರಾಜ್ಯದ 29 ಜಿಲ್ಲೆಗಳಲ್ಲಿ ಎಂದಿನಂತೆ ಬ್ಯಾಲೆಟ್ ಮೂಲಕ ಮತದಾನ ನಡೆಯಲಿದೆ. ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತದೆ.

6,073 ಗ್ರಾಪಂಗಳ ಪೈಕಿ ಆಗಸ್ಟ್‍ನಲ್ಲಿ ಅವಧಿ ಪೂರ್ಣಗೊಳ್ಳುವ, ಮೇಲ್ದರ್ಜೆಗೇರಿಸಿದ ಹಾಗೂ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಇರುವ 229 ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಉಳಿದ 5,844 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಮತಗಟ್ಟೆಗಳಲ್ಲಿ 1,93,020 ಸಿಬ್ಬಂದಿ ನೇಮಕವಾಗಲಿದ್ದಾರೆ. ಸಿಬ್ಬಂದಿ ನಿಯೋಜನೆ ಸೇರಿದಂತೆ ಚುನಾವಣೆಯ ನಿರ್ವಹಣೆಗೆ ರು.66 ಕೋಟಿ ವೆಚ್ಚವಾಗಲಿದೆ. ಸಾಮಾನ್ಯವಾಗಿ ಗ್ರಾಪಂ ಚುನಾವಣೆಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗುತ್ತಿದ್ದು, ಈ ಬಾರಿ ಕಡ್ಡಾಯ ಮತದಾನ ಜಾರಿ ಮಾಡಿರುವುದರಿಂದ ಇನ್ನಷ್ಟು ಜನರ ಪಾಲ್ಗೊಳ್ಳುವಿಕೆ ನಿರೀಕ್ಷಿಸಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಶೇ.80 ರ ಪ್ರಮಾಣದಲ್ಲಿ ಮತದಾನವಾಗಿತ್ತು.

ಮೊದಲ ಹಂತ ಎಲ್ಲೆಲ್ಲಿ ?
ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ, ಉತ್ತರ  ಕನ್ನಡ, ಧಾರವಾಡ, ಹಾಗೂ ಗದಗ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com