

ನಾಗಪುರ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಗವತ್ ಅವರನ್ನು ಭೇಟಿ ಮಾಡಿ ಬಿಜೆಪಿ ನಾಯಕತ್ವದ ಸರ್ಕಾರ ಕೇಂದ್ರದಲ್ಲಿ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲಿ ರಾಷ್ಟ್ರದ ರಾಜಕೀಯದ ಬಗ್ಗೆ ಚರ್ಚಿಸಿದ್ದಾರೆ.
ಆರ್ ಎಸ್ ಎಸ್ ಮೂಲಗಳ ಪ್ರಕಾರ ಮುಚ್ಚಿದ ಕೋಣೆಯಲ್ಲಿ ನಡೆದ ಈ ಚರ್ಚೆಯಲ್ಲಿ ಪ್ರಮುಖ ವಿಷಯಗಳಾದ ಭೂಸ್ವಾಧಿನ ಕಾಯ್ದೆ ಮುಂತಾದವುಗಳನ್ನು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಗೃಹ ಸಚಿವರಾದ ನಂತರ ಸಂಘದ ಮುಖ್ಯ ಕಚೇರಿ 'ಹೆಗ್ಡೇವಾರ್ ಭವನ್' ಗೆ ಮೊದಲ ಬಾರಿಗೆ ತೆರಳಿದ ರಾಜನಾಥ್ ಕಪ್ಪು ಹಣದ ವಿಷಯ ಹಾಗೂ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಚರ್ಚಿಸಿದ್ದಾರೆ ಎಂದು ಕೂಡ ತಿಳಿದುಬಂದಿದೆ.
ಇಂದು ಮುಂಜಾನೆ ಬಿಎಸ್ಎಫ್ ವಿಮಾನದಲ್ಲಿ ಬಂದಿಳಿದ ರಾಜನಾಥ್, ಅವರ ಸರ್ಕಾರ ರೈತರ ಏಳಿಗೆಗೆ ಬದ್ಧವಾಗಿದೆ ಎಂದು ಮತ್ತೆ ಹೇಳಿದ್ದಾರೆ. ರೈತರ ಸಮಸ್ಯೆ ವಿರುದ್ಧ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿರುವುದರ ಬೆಗ್ಗೆ ಪ್ರತಿಕ್ರಿಯೆ ನಿಡಲು ಗೃಹ ಸಚಿವರು ನಿರಾಕರಿಸಿದ್ದಾರೆ.
ಹರ್ಯಾಣ ಸರ್ಕಾರ ರಾಬರ್ಟ್ ವಾದ್ರಾ ವಿರುದ್ಧ ತನಿಖೆ ನಡೆಸುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ ನಮ್ಮ ಪಕ್ಷ ರಾಜಕೀಯ ದುರುದ್ದೇಶದಿಂದ ಏನನ್ನೂ ಮಾಡುವುದಿಲ್ಲ ಎಂದಿದ್ದಾರೆ.