
ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಆರೋಪ ಮುಕ್ತರಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರಿಗೆ ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರು ಶುಕ್ರವಾರ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಎಐಎಡಿಎಂ ಪ್ರಧಾನ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಯಲಲಿತಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸ್ಪೀಕರ್ ಪಿ.ಧನಪಾಲ್ ಹೊರತುಪಡಿಸಿ ಎಐಎಡಿಎಂಕೆಯ 144 ಶಾಸಕರು ಭಾಗವಹಿಸಿದ್ದರು.
ಶಾಸಕಾಂಗ ಪಕ್ಷದ ಸಭೆಯ ಬಳಿಕ ಸಿಎಂ ಓ ಪನ್ನೀರ್ ಸೇಲ್ವಂ ನೇತೃತ್ವದಲ್ಲಿ ಸಂಪುಟದ ಎಲ್ಲಾ ಸಚಿವರು ರಾಜ್ಯಪಾಲ ಕೆ.ರೋಸಯ್ಯ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದರು. ರಾಜಿನಾಮೆ ಅಂಗೀಕರಿಸಿದ ರಾಜ್ಯಪಾಲರು, ನೂತನ ಸರ್ಕಾರ ರಚಿಸುವಂತೆ ಜಯಲಲಿತಾ ಅವರಿಗೆ ಆಹ್ವಾನ ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 27ರಂದು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ದೋಷಿ ಎಂದು ಬೆಂಗಳೂರು ಸೆಷೆನ್ಸ್ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಮೇ 11ರಂದು ಕರ್ನಾಟಕ ಹೈಕೋರ್ಟ್ ಸೆಷೆನ್ಸ್ ಕೋರ್ಟ್ ತೀರ್ಪು ರದ್ದುಗೊಳಿಸಿ, ಜಯಲಲಿತಾ ನಿರ್ದೋಷಿ ಎಂದು ತೀರ್ಪು ನೀಡಿದೆ. ಹೀಗಾಗಿ ಜಯಾ ಮತ್ತೆ ಸಿಎಂ ಆಗುತ್ತಿದ್ದಾರೆ.
Advertisement