ಕೃಪಾಂಕವೇ 9, ಬಂದ ಅಂಕ ಮಾತ್ರ 8

ಎಲ್ಲ ವಿಷಯಗಳಲ್ಲಿಯೂ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ, ಆದರೆ ಗಣಿತದಲ್ಲಿ ಮಾತ್ರ 8 ಅಂಕ ಬಂದಿದೆ. ವಿಚಿತ್ರವೆಂದರೆ ಪದವಿಪೂರ್ವ ಶಿಕ್ಷಣ ಇಲಾಖೆಯೇ 9 ಕೃಪಾಂಕ ನೀಡಿದೆ!..
ಪ್ರತಿಭಟನಾ ನಿರತ ವಿದ್ಯಾರ್ಥಿಗಳು
ಪ್ರತಿಭಟನಾ ನಿರತ ವಿದ್ಯಾರ್ಥಿಗಳು

ಬೆಂಗಳೂರು: ಎಲ್ಲ ವಿಷಯಗಳಲ್ಲಿಯೂ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ, ಆದರೆ ಗಣಿತದಲ್ಲಿ ಮಾತ್ರ 8 ಅಂಕ ಬಂದಿದೆ. ವಿಚಿತ್ರವೆಂದರೆ ಪದವಿಪೂರ್ವ ಶಿಕ್ಷಣ ಇಲಾಖೆಯೇ 9 ಕೃಪಾಂಕ ನೀಡಿದೆ!

ಪದವಿಪೂರ್ವ ಶಿಕ್ಷಣ ಇಲಾಖೆ ಎದುರು ನಿಂತರೆ ಇಂತಹ ಹತ್ತಾರು ಉದಾಹರಣೆ ದೊರೆಯುತ್ತದೆ. ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯು ಅಂತಿಮ ಪರೀಕ್ಷೆಯ ಮೌಲ್ಯಮಾಪನದಲ್ಲಿ ಸಾಕಷ್ಟು ಎಡವಟ್ಟುಗಳಾಗಿವೆ ಎನ್ನುವುದಕ್ಕೆ ಇದು ಸಾಕ್ಷಿ. ಕೃಪಾಂಕ ನೀಡುವಾಗ ಎಲ್ಲ ವಿದ್ಯಾರ್ಥಿಗಳಿಗೆ ನೀಡಲಾಗಿಲ್ಲ ಹಾಗೂ ಕೃಪಾಂಕದ ನಿಯಮಗಳನ್ನು ಪಾಲಿಸಲಾಗಿಲ್ಲ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಬೆಂಗಳೂರಿನ ದೀಕ್ಷಾ ಕಾಲೇಜಿನ ವಿದ್ಯಾರ್ಥಿನಿಯಾದ ಸಾಗರಿಕಾ ಗಣಿತ ಬಿಟ್ಟು ಉಳಿದೆಲ್ಲ ವಿಷಯಗಳಲ್ಲಿ ಪ್ರಥಮ ದರ್ಜೆ ಅಂಕ ಪಡೆದಿದ್ದಾಳೆ. ಆದರೆ ಗಣಿತದಲ್ಲಿ ಮಾತ್ರ ಕೇವಲ 8 ಅಂಕ ಬಂದಿದೆ. ಇದೇ ವಿದ್ಯಾರ್ಥಿನಿಗೆ ಕಾಲೇಜು ನಡೆಸಿದ ಎರಡು ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ 60ಕ್ಕೂ ಅಂಕ ಅಂಕ ಬಂದಿದೆ. ಇದೇ ಕಾರಣದಿಂದ ಸಾಗರಿಕಾ ಹಾಗೂ ಆಕೆಯ ಪಾಲಕರು ಕಳೆದ 3 ದಿನಗಳಿಂದ ಇಲಾಖೆಗೆ ಬರುತ್ತಿದ್ದಾರೆ. ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನೂ ಹಾಕಿದ್ದಾರೆ. ಆದರೆ ಮೌಲ್ಯಮಾಪನದಲ್ಲಾದ ಗೊಂದಲಕ್ಕೆ ಬೆದರಿ ಇಲಾಖೆ ಎದುರು ಬಂದು ಠಿಕಾಣಿ ಹೂಡಿದ್ದಾರೆ. ಇದೇ ರೀತಿ ಹತ್ತಾರು ವಿದ್ಯಾರ್ಥಿಗಳು ಬಂದಿದ್ದಾರೆ. ಅವರ ವಾದವೆಂದರೆ ಇಲಾಖೆ ಹೇಳಿರುವ ಪ್ರಕಾರ ಗಣಿತದಲ್ಲಿ 9 ಕೃಪಾಂಕ ನೀಡಲಾಗಿದೆ. ಸಾಗರಿಕಾ ಸೇರಿದಂತೆ ಅಲ್ಲಿರುವ ವಿದ್ಯಾರ್ಥಿಗಳು ಹೇಳುವುದು `ನಾವು ತಪ್ಪಾಗಿದೆ ಎನ್ನಲಾದ ಎಲ್ಲ ಪ್ರಶ್ನೆ ಬರೆದಿದ್ದೇವೆ.

ಇಲಾಖೆ ಹೇಳಿದಂತೆ ಕೃಪಾಂಕ ನೀಡಿದ್ದರೆ ಕನಿಷ್ಠ 9 ಅಂಕವಾದರೂ ಬರಬೇಕಿತ್ತು. ಆದರೆ 8 ಅಂಕ ನೀಡಿದ್ದಾರೆ. ಇದರರ್ಥ ಕೃಪಾಂಕವನ್ನು ಸರಿಯಾಗಿ ನೀಡಲಾಗಿಲ್ಲ'. ಇದೇ ಪ್ರಶ್ನೆಯನ್ನು ನಿರ್ದೇಶಕಿ ಹಾಗೂ ಇಲಾಖೆ ಅಧಿಕಾರಿಗಳಿಗೆ ಪಾಲಕರು ಪ್ರಶ್ನಿಸಿದಾಗಲೂ ಯಾವುದೇ ಸ್ಪಷ್ಟ ಉತ್ತರ ಬರಲಿಲ. ಬದಲಾಗಿ `ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿ' ಎಂದು ಹೇಳಿದರು.

ಕೃಪಾಂಕದ ಬಗ್ಗೆ ಮುಂದುವರೆದ ಗೊಂದಲ

ಕೃಪಾಂಕವೆಂದರೆ ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಅಂಕ. ಪ್ರಶ್ನೆ ನಮೂದಿಸದಿದ್ದರೂ ಕಡ್ಡಾಯವಾಗಿ 9 ಅಂಕ ನೀಡಬೇಕಾಗುತ್ತದೆ. ಇದೇ ನಿಯಮವನ್ನು ಎಸ್‍ಎಸ್‍ಎಲ್‍ಸಿಯಲ್ಲಿ ಪಾಲಿಸಲಾಗಿದೆ.

ಆದರೆ ಪಿಯುಸಿಯಲ್ಲಿ ಇದರ ಬಗ್ಗೆ ಸ್ಪಷ್ಟತೆಯಿಲ್ಲ. ಮಾಧ್ಯಮಗಳಿಗೆ ನೀಡಿದ ಪ್ರಕಟಣೆಯಲ್ಲಿ ಕೃಪಾಂಕ ಎಂದು ಹೇಳಲಾಗಿದೆ. ಆದರೆ ಮೌಲ್ಯಮಾಪನ ಮಾಡುವಾಗ ಪತ್ರಿಕೆಯಲ್ಲಿ ನಮೂದಿಸಿದ ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ಎಂದು ಹೇಳಲಾಗುತ್ತಿದೆ. ಇಲಾಖೆಯಲ್ಲಿರುವ ಗೊಂದಲದ ಪರಿಣಾಮದಿಂದ ಕೆಲ ಉಪನ್ಯಾಸಕರು ಯಾವುದೇ ರೀತಿಯಲ್ಲಿ ಕೃಪಾಂಕ ನೀಡಿಲ್ಲ ಎಂಬ ಆರೋಪ ಪ್ರತಿಭಟನಾಕಾರರಿಂದ ಬಂದಿದೆ.

ಸಿಇಟಿ ಫಲಿತಾಂಶ ಮುಂದೂಡುವುದಿಲ್ಲ
ಪಿಯು ಫಲಿತಾಂಶ ಗೊಂದಲದ ಹಿನ್ನೆಲೆಯಲ್ಲಿ ಮೇ 26ರಂದು ಪ್ರಕಟವಾಗಬೇಕಿರುವ ಸಿಇಟಿ ಫಲಿತಾಂಶ ಮುಂದೂಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು. ಆದರೆ ಇದನ್ನು ನಿರಾಕರಿಸಿರುವ ನಿರ್ದೇಶಕಿ, ಸಿಇಟಿ ಫಲಿತಾಂಶವು ವೇಳಾಪಟ್ಟಿಯಂತೆ ಪ್ರಕಟವಾಗಲಿದೆ. ಮರುಮೌಲ್ಯಮಾಪನ ಅಥವಾ ಮರುಎಣಿಕೆಯಲ್ಲಿ ಹೆಚ್ಚುವರಿ ಅಂಕ ಬಂದರೂ ಕೂಡಲೇ ರ್ಯಾಂಕ್‍ನಲ್ಲಿ ಬದಲಾವಣೆ ತಂದು ಕೌನ್ಸೆಲಿಂಗ್‍ನಲ್ಲಿ ಪರಿಗಣಿಸಲಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಆತಂಕಗೊಳ್ಳಬೇಕಿಲ್ಲ ಎಂದು ಅಭಯ ನೀಡಿದ್ದಾರೆ.

ವಿದ್ಯಾರ್ಥಿಗಳ ಅಹವಾಲೇನು?
-ಕೃಪಾಂಕವನ್ನು ನೀಡಲಾಗಿಲ್ಲ, ಈ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಬೇಕು.
- ಗಣಿತ, ಭೌತಶಾಸuಉ ಹಾಗೂ ಇಂಗ್ಲಿಷ್ ಉತ್ತರ ಪತ್ರಿಕೆ ಮೌಲ್ಯಮಾಪನ ಅಸಮರ್ಪಕವಾಗಿದೆ.
-ತಪ್ಪಿತಸ್ಥ ಉಪನ್ಯಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
-ಮರುಎಣಿಕೆ, ಛಾಯಾಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ
-ಹೆಚ್ಚುವರಿ ಅಂಕ ಸಿಕ್ಕ ಬಳಿಕ ಮರುಎಣಿಕೆ ಹಾಗೂ ಛಾಯಾಪ್ರತಿಯ ಶುಲ್ಕವನ್ನು ಹಿಂತಿರುಗಿಸುತ್ತಿಲ್ಲ.
-ಇಲಾಖೆ ಅಧಿಕಾರಿಗಳು ನಮ್ಮ ಅಹವಾಲು ಕೇಳುತ್ತಿಲ್ಲ, ಪೊಲೀಸರ ಬಳಿ ಗೋಳು ಹೇಳಿಕೊಳ್ಳಬೇಕಿದೆ.
-ಪಿಸಿಎಂಬಿ ವಿಷಯಗಳ ಸಂಪೂರ್ಣ ಮರುಮೌಲ್ಯಮಾಪನ ನಡೆಸಿ.
- ಸಿಇಟಿ ಫಲಿತಾಂಶ ಮುಂದೂಡಬೇಕು.

ಇಲಾಖೆ ಅಭಯವೇನು?
-ಸಮಸ್ಯೆಗಳಿದ್ದರೆ ಅರ್ಜಿ ಹಾಕಿ, ಇಲಾಖೆ ಕೂಡಲೇ ಪರಿಶೀಲನೆ ನಡೆಸುತ್ತದೆ.
-ಜೂ.15ರೊಳಗೆ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟ.
-ಹೆಚ್ಚುವರಿ ಅಂಕವನ್ನು ಮತ್ತೆ ಸೇರಿಸಿ ಸಿಇಟಿ ರ್ಯಾಂಕ್ ನೀಡಲಾಗುವುದು,  ಸದ್ಯಕ್ಕೆ ಸಿಇಟಿ ಫಲಿತಾಂಶ ಮುಂದೂಡುವುದಿಲ್ಲ.
-ಶುಲ್ಕ ಕಡಿಮೆ ಮಾಡುವ ಅಧಿಕಾರ ಇಲಾಖೆಗಿಲ್ಲ, ಸರ್ಕಾರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು.
- ಪಾಲಕರ ಅಹವಾಲನ್ನು ಸರ್ಕಾರಕ್ಕೆ ತಿಳಿಸುತ್ತೇವೆ.

ಎಲ್ಲ ವಿಷಯಗಳಲ್ಲಿ ಉತ್ತಮ ಅಂಕ ಬಂದಿದೆ, ಆದರೆ ಗಣಿತದಲ್ಲಿ ಕೇವಲ 8 ಅಂಕ ಬಂದಿದೆ. ಇವರು ನೀಡಿದ ಕೃಪಾಂಕ ನೀಡಿದ್ದರೂ 9 ಆಗಬೇಕಿತ್ತು. ನನ್ನ ಸಾಕಷ್ಟು ಸಹಪಾಠಿಗಳಿಗೂ ಗಣಿತ ಹಾಗೂ ಭೌತಶಾಸ್ತ್ರ ವಿಚಾರದಲ್ಲಿ ಈ ರೀತಿಯಾಗಿದೆ. ವಿದ್ಯಾರ್ಥಿಗಳ ಜೀವನದೊಂದಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ.
-ಸಾಗರಿಕಾ, ದೀಕ್ಷಾ ಕಾಲೇಜಿನ ವಿದ್ಯಾರ್ಥಿನಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com