ಪಿಯುಸಿ ಮಕ್ಕಳ ಜತೆ ಇಲಾಖೆಯ ಚೆಲ್ಲಾಟ

ದ್ವಿತೀಯ ಪಿಯು ಫಲಿತಾಂಶದ ಗೊಂದಲ ನಾಲ್ಕನೇ ದಿನವೂ ಮುಗಿದಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರ ಪ್ರತಿಭಟನೆ ಬಿಸಿ ಏರುತ್ತಲೇ ಇದೆ...
ಪ್ರತಿಭಟನಾ ನಿರತ ವಿದ್ಯಾರ್ಥಿಗಳು
ಪ್ರತಿಭಟನಾ ನಿರತ ವಿದ್ಯಾರ್ಥಿಗಳು

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶದ ಗೊಂದಲ ನಾಲ್ಕನೇ ದಿನವೂ ಮುಗಿದಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರ ಪ್ರತಿಭಟನೆ ಬಿಸಿ ಏರುತ್ತಲೇ ಇದೆ.

ಭೌತಶಾಸ್ತ್ರ, ಗಣಿತ ಹಾಗೂ ಇಂಗ್ಲಿಷ್ ಮೌಲ್ಯಮಾಪನದಲ್ಲಿ ಲೋಪವಾಗಿದೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ನಗರದ ಮಲ್ಲೇಶ್ವರದಲ್ಲಿರುವ ಪಿಯು ಕಚೇರಿ ಎದುರು ಗುರುವಾರ ದಿನಪೂರ್ತಿ ಪ್ರತಿಭಟನೆ ಮಾಡಿದರು. ಇಲಾಖೆ ಪ್ರಮಾದದಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿ ದೆ, ಉಚಿತವಾಗಿ ಮರು ಮೌಲ್ಯ ಮೌಪನ ಮಾಡಬೇಕು ಹಾಗೂ ಸಿಇಟಿ ಫಲಿತಾಂಶ ಮುಂದೂಡಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕಿ ಸುಷ್ಮಾ ಗೋಡಬೋಲೆ ಅವರು ಕಚೇರಿಗೆ ಬೀಗ ಹಾಕಿಕೊಂಡು ಕೆಲಸ ಮಾಡಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು,

ಪೊಲೀಸರಿಗೇ ಅಹವಾಲು ಸಲ್ಲಿಸಿದರು. ಬೆಳಗ್ಗೆ 9 ಗಂಟೆಯಿಂದಲೇ ಪಾಲಕರು ಹಾಗೂ ವಿದ್ಯಾರ್ಥಿಗಳು ಕಚೇರಿ ಎದುರು ಜಮಾಯಿಸಿದ್ದರು. ಆದರೆ ಕಚೇರಿ ಒಳಗಿದ್ದ ನಿರ್ದೇಶಕಿ ಸುಷ್ಮಾ ಅವರು ಪಾಲಕರನ್ನು ಭೇಟಿಯಾಗಿ ಚರ್ಚೆ ನಡೆಸಲು ಮುಂದಾಗಲಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ವಿಚಾರಿಸಿದಾಗ, ನಿರ್ದೇಶಕರು ಕಚೇರಿಯಲ್ಲಿಲ್ಲ ಎಂಬ ಮಾಹಿತಿ ಬಂದಿದೆ. ಇದನ್ನು ವಿದ್ಯಾರ್ಥಿಗಳು ಒಪ್ಪದೇ ಪ್ರತಿಭಟನೆ ಮುಂದುವರಿಸಿದ್ದರಿಂದ ಅಧೀನ ಅಧಿಕಾರಿಗಳು ಬಂದು ಮಾತುಕತೆ ನಡೆಸಿದರು. ಮರು ಮೌಲ್ಯಮಾಪನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸುವ ಬಗ್ಗೆ ಭರವಸೆ ನೀಡಿದರು.

ಇಂದೂ ಕಾನ್ಫಿಡೆನ್ಷಿಯಲ್ ಸಭೆ
ಫಲಿತಾಂಶ ಪ್ರಕಟವಾದ ಮರುದಿನದಿಂದ ಪಿಯು ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದೆ. ಆದರೆ ನೆಪ ಮಾತ್ರಕ್ಕೆ ಒಂದು ದಿನವೂ ವಿದ್ಯಾರ್ಥಿಗಳೊಂದಿಗೆ ಚರ್ಚಿಸದೇ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬುಧವಾರ ತಮ್ಮ ಮನೆಗೇ ಕಡತ ತರಿಸಿಕೊಂಡು ಕೆಲಸ ಮಾಡಿದ್ದಾರೆ. ಗುರುವಾರ ಬೆಳಗ್ಗೆಯೇ ಕಚೇರಿಗೆ ಆಗಮಿಸಿದ್ದ ನಿರ್ದೇಶಕಿ ಯಾವುದೇ ವಿದ್ಯಾರ್ಥಿಗಳೊಂದಿಗೆ ಚರ್ಚಿಸದೇ ಕಚೇರಿ ಒಳಗೆ ಕುಳಿತಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

`ರಾಜಕಾರಣಿಗೆ ಹಾಗೂ ಪ್ರಭಾವಿತರಿಗೆ ಮಾತ್ರ ಇಲಾಖೆ ಒಳಗೆ ಪ್ರವೇಶ ನೀಡಲಾಗುತ್ತಿದೆ. ಸಾಮಾನ್ಯ ವಿದ್ಯಾರ್ಥಿ ಗಳ ಅಹವಾಲುಗಳನ್ನು ಯಾರೂ ಕೇಳುತ್ತಿಲ್ಲ' ಎಂದು ಪ್ರತಿಭಟನಾ ನಿರತ ಪಾಲಕರು ಹಾಗೂ ವಿದ್ಯಾರ್ಥಿಗಳು ನಿರ್ದೇಶಕರನ್ನೇ ನೇರವಾಗಿ ಪ್ರಶ್ನಿಸಿದರು. ಭದ್ರತಾ ಸಿಬ್ಬಂದಿಗಳನ್ನು ನೂಕಿಕೊಂಡು ನಿರ್ದೇಶಕರ ಕಚೇರಿಗೆ ಪಾಲಕರು ನುಗ್ಗಿದಾಗ ಅಲ್ಲಿ ಕೆಲ ರಾಜಕಾರಣಿಗಳೊಂದಿಗೆ ಮಾತ್ರ ಚರ್ಚೆ ನಡೆಸಲಾಗುತ್ತಿತ್ತು. ಸುಮಾರು 5 ಗಂಟೆಗಳ ಕಾಲ ಪಾಲಕರು ಕಚೇರಿ ಹೊರಗಡೆ ನಿಂತು ಪ್ರತಿಭಟನೆ ನಡೆಸುತ್ತಿದ್ದರೂ ಯಾರೊಬ್ಬರೂ ವಿಚಾರಿಸಿರಲಿಲ್ಲ. ನಿರ್ದೇಶಕರ ಭೇಟಿ ಕುರಿತಂತೆ ಪಾಲಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗಲೆಲ್ಲ `ಕಾನ್ಫಿಡೆನ್ಷಿಯಲ್ ಸಭೆಯಲ್ಲಿದ್ದಾರೆ' ಎಂಬ ಉತ್ತರ ಬರುತ್ತಿತ್ತು.

ನಿಮ್ಮ ಮಕ್ಕಳಿಗೂ ಹೀಗೆ ಮಾಡುತ್ತೀರಾ?

ಪಾಲಕರು ಭದ್ರತಾ ಸಿಬ್ಬಂದಿಗಳನ್ನು ನೂಕಿಕೊಂಡು ಇಲಾಖೆ ಕಚೇರಿಗೆ ಬಂದ ಬಳಿಕ ಒತ್ತಾಯದ ಮೇರೆಗೆ ಚರ್ಚೆಗೆ ನಿರ್ದೇಶಕರು ಒಪ್ಪಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಕರು, `ನಿಮ್ಮ ಮಕ್ಕಳಿಗೆ ಹೀಗಾದ್ರೆ ನಾಲ್ಕು ದಿನ ಮಾತನಾಡದೇ ಇರುತ್ತೀರಾ? ಪಾಲಕರ ಜಾಗದಲ್ಲಿ ನಿಂತು ಆಲೋಚಿಸಿ, ಕಳೆದ ನಾಲ್ಕು ದಿನದಿಂದ ನಿಮ್ಮನ್ನು ಭೇಟಿ ಮಾಡಲು ಅಲೆಯುತ್ತಿದ್ದೇವೆ, ಆದರೂ ನೀವು ಸಂಪರ್ಕಿಸುತ್ತಿಲ್ಲ' ಎಂದು ನಿರ್ದೇಶಕರನ್ನು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com