

ಮುಂಬೈ: ೨೦೦೨ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ೪೯ ವರ್ಷದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ವಿದೇಶ ಪ್ರವಾಸ ಮಾಡಲು ಬಾಂಬೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಈ ತಿಂಗಳ ಕೊನೆಯ ಭಾಗದಲ್ಲಿ ದುಬೈನಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿ ಕಳೆದ ವಾರ ಸಲ್ಮಾನ್ ಕೋರ್ಟ್ ಮೊರೆ ಹೋಗಿದ್ದರು.
೨೦೦೨ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಮೇ ೬ ರಂದು ಸೆಷನ್ಸ್ ನ್ಯಾಯಾಲಯ ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ತೀರ್ಪು ನೀಡಿ ೫ ವರ್ಷಗಳ ಕಠಿಣ ಸಜೆ ನೀಡಿತ್ತು. ತದನಂತರ ಹೈಕೋರ್ಟ್ ಈ ತೀರ್ಪನ್ನು ವಜಾ ಮಾಡಿ ನಟನಿಗೆ ಜಾಮೀನು ನೀಡಿತ್ತು. ಆದರೆ ಅವರು ವಿದೇಶಕ್ಕ ಪ್ರತಿ ಬಾರಿ ತೆರಳುವಾಗಲು ನ್ಯಾಯಾಲಯದ ಅನುಮತಿ ಪಡೆಯಬೇಕೆಂದು ಸೂಚಿಸಿತ್ತು.
ಆರೋಪಿಸಿರುವಂತೆ ಭಾಂದ್ರಾ ಹೊರವಲಯದಲ್ಲಿ ಸಲ್ಮಾನ್ ಖಾನ್ ಪಾನಮತ್ತರಾಗಿ ಟೊಯೋಟಾ ಲ್ಯಾಂಡ್ ಕ್ರ್ಯೂಸರ್ ಓಡಿಸುವಾಗ ಪಾದಚಾರಿ ಮಾರ್ಗದಲ್ಲಿ ಮಲಗಿದ್ದವರ ಮೇಲೆ ವಾಹನ ಹರಿಸಿದ್ದರಿಂದ ಒಬ್ಬ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು.