ನಾಗಪುರ: ಪ್ರಧಾನಿ ನರೇಂದ್ರ ಮೋದಿ ಅವರ ಒಂದು ವರ್ಷದ ಆಡಳಿತದಲ್ಲಿ ಅಂದರೆ ಮೇ ೨೦ ೨೦೧೪ ಮತ್ತು ಮೇ ೨೫ ೨೦೧೫ ರ ನಡುವೆ ಮಹಾರಾಷ್ಟ್ರದಲ್ಲಿ ದಾಖಲೆ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆ ಸಂಭವಿಸಿದೆ ಎಂದು ರೈತರ ಕಾವಲು ಸಮಿತಿ ಸೋಮವಾರ ಹೇಳಿದೆ. ಈ ಸಂಖ್ಯೆ ೧೩೦೬.
ಇದು ಕಳೆದ ವರ್ಷಕ್ಕೆ (ಮೇ ೨೦೧೩ ರಿಂದ ಮೇ ೨೦೧೪) ಹೋಲಿಸಿದರೆ ೪೦% ಹೆಚ್ಚಳವಾಗಿದೆ ಎಂದು ವಿದರ್ಭ ಜನ ಆಂದೋಲನ ಸಮಿತಿ ಅಧ್ಯಕ್ಷ ಕಿರ್ಶೋರ್ ತಿವಾರಿ ಹೇಳಿದ್ದಾರೆ.
ಮೋದಿ ಅವರ ಒಂದು ವರ್ಷದ ಆಡಳಿತದ ಬಗ್ಗೆ ಹಲವಾರು ಅಭಿಪ್ರಾಯಗಳಿದ್ದು ಅವುಗಳಲ್ಲಿ ಬಹುಪಾಲು ಆಶಾವಾದವಿದ್ದರೂ ಮಹಾರಾಷ್ಟ್ರ ರೈತರಿಗೆ ಅದರಲ್ಲೂ ವಿದರ್ಭದ ರೈತರಿಗೆ ಇದು ನಿಜವೆಂದೆನಿಸಿಲ್ಲ. ಕಳೆದ ೧೦ ವರ್ಷಗಳಿಂದ ರೈತರ ಸಾವಿಗೆ ವಿದರ್ಭ ಕೇಂದ್ರವಾಗಿ ಉಳಿದಿದೆ ಎಂದು ತಿವಾರಿ ತಿಳಿಸಿದ್ದಾರೆ.
"ಎನ್ ಡಿ ಎ -೨ ಅಧಿಕಾರಕ್ಕೆ ಬಂದಾಗಿನಿಂದ ರೈತರ ಅಧಿಕೃತ ಸಾವಿನ ಸಂಖ್ಯೆ ೧೩೦೬. ಅಲ್ಲದೆ ಇದು ದಿನೇ ದಿನ ಹೆಚ್ಚುತ್ತಿದ್ದೆ. ೨೦೧೫ ರ ಮೊದಲ ೧೪೦ ದಿನಗಳಲ್ಲಿ ೪೪೮ ಆತ್ಮಹತ್ಯೆಗಳಾಗಿವೆ. ಇದು ರಾಜ್ಯದಲ್ಲಿ ೫ ದಶಲಕ್ಷ ರೈತರ ಶೋಚನೀಯ ಸ್ಥಿತಿಯನ್ನು ತಿಳಿಸುತ್ತದೆ" ಎಂದು ತಿವಾರಿ ತಿಳಿಸಿದ್ದಾರೆ.
"ಈಗಾಗಲೇ ಒಂದು ವರ್ಷ ಕಳೆದಿದ್ದರೂ ಎನ್ ಡಿ ಎ -೨ ರೈತರಿಗೆ ತಾನು ನೀಡಿದ್ದ ಭರವಸೆಗಳನ್ನು ಮರೆತಿದೆ. ಹಳೆ ಸಾಲಗಳ ಮನ್ನಾ ಆಗಲಿ ಹೊಸ ಸಾಲ ನೀಡುವುದಾಗಲಿ ಯಾವ ಕಾರ್ಯಕ್ರಮವೂ ಜಾರಿಯಾಗಲಿಲ್ಲ" ಎಂದು ತಿವಾರಿ ಟೀಕಿಸಿದ್ದಾರೆ.