ಸೂಟ್ ಕೇಸ್ ಸರ್ಕಾರಕ್ಕಿಂತ ಸೂಟ್ ಬೂಟ್ ಸರ್ಕಾರವೇ ಮೇಲು: ಪ್ರಧಾನಿ ಮೋದಿ

60 ವರ್ಷಗಳ ಕಾಲ ದೇಶ ಆಳಿದ "ಸೂಟ್ ಕೇಸ್" ಸರ್ಕಾರಕ್ಕಿಂತ ಸೂಟ್ ಬೂಟ್ ಕೀ ಸರ್ಕಾರವೇ ಮೇಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on: 

ನವದೆಹಲಿ: 60 ವರ್ಷಗಳ "ಸೂಟ್ ಕೇಸ್" ಸರ್ಕಾರಕ್ಕಿಂತ ಸೂಟ್ ಬೂಟ್ ಕೀ ಸರ್ಕಾರವೇ ಮೇಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎನ್ ಡಿಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಭಿನಂದನೆ ಸಲ್ಲಿಸುವ ವೇಳೆ ಸೂಟ್ ಬೂಟ್ ಕೀ ಸರ್ಕಾರ್ ಎಂಬ ಆರೋಪ ಮಾಡಿದ್ದರು. ಇದೀಗ ರಾಹುಲ್ ಗಾಂಧಿ ಅವರ ಹೇಳಿಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಎಎನ್ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಕಳೆದ 60 ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ಸಿಗರಿಗೆ ಇದೀಗ ದಿಢೀರನೆ ದೇಶದ ಬಡ ಜನರ ನೆನಪಾಗಿದೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ದೂರದೃಷ್ಟಿ ರಹಿತ ನೀತಿಗಳಿಂದಾಗಿಯೇ ದೇಶದ ಜನರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಬಡವರು ಬಡವರಾಗಿಯೇ ಉಳಿಯುವಂತಾಗಿದೆ ಎಂದರು. ಕಲ್ಲಿದ್ದಲು, 2ಜಿ ಹಗರಣ, ಕಾಮನ್ ವೆಲ್ತ್ ಗೇಮ್ಸ್  ಹಗರಣದಿಂದ ಬಡವರಿಗೆ ಆಗಿರುವಂತಹ ಲಾಭವಾದರೂ ಏನು..? ಇದು ಯಾರಿಗೆ ಲಾಭ ತರುವಂತಹದ್ದು ಎಂದು ಎಲ್ಲರಿಗೂ ತಿಳಿದಿದೆ ಎಂದು ನರೇಂದ್ರ ಮೋದಿ ಹೇಳಿದರು.

ಇದೇ ವೇಳೆ ಒಂದು ವರ್ಷ ಪೂರೈಸಿರುವ ನಿಮ್ಮ ಸರ್ಕಾರಕ್ಕೆ 10ರಲ್ಲಿ ಎಷ್ಟು ಅಂಕ ಕೊಡುತ್ತೀರಿ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಆಡಳಿತಕ್ಕೆ ದೇಶದ ಜನರೇ ಅಂಕ ಕೊಡಬೇಕು. ನಾನು ಹೇಗೆ ಅವರ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯ? ನಮ್ಮ ಸರ್ಕಾರಕ್ಕೆ ಅಂಕ ಕೊಡುವ ಹಕ್ಕು ಇರುವುದು ದೇಶದ ಜನರಿಗೆ ಮಾತ್ರ. ಅವರು ಅದನ್ನು ನೀಡುತ್ತಾರೆ ಎಂದು ಹೇಳಿದರು.

ಅಧಿಕಾರಕ್ಕೆ ಬರುವ ಮುನ್ನ ದೇಶದ ಜನತೆಗೆ ಅಚ್ಚೇ ದಿನ್ ಭರವಸೆ ನೀಡಿದ್ದಿರಿ, ಮೊದಲ ವರ್ಷದಲ್ಲಿ ನೀವು ನಿಮ್ಮ ಗುರಿ ತಲುಪಲು ಯಶಸ್ವಿಯಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಹೌದು, ನಾನೇನು ಕೆಲಸ ಮಾಡಿದ್ದೇನೊ ಅದರ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ. ಅಭಿವೃದ್ಧಿ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ದೂರದೃಷ್ಟಿಯಿಂದ ಕೆಲಸ ಮಾಡಿದ್ದೇವೆ. ಕೇವಲ ಒಂದು ವರ್ಷದ ಹಿಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನೋಡಿದರೆ ನಿಮಗೇ ಅದು ತಿಳಿಯುತ್ತದೆ. ಸರ್ಕಾರದ ವಿವಿಧ ಹಂತದಲ್ಲಿ ಭ್ರಷ್ಟಾಚಾರದ ತಾಂಡವವಾಡುತ್ತಿತ್ತು. ನಮ್ಮ ಸರ್ಕಾರದ ಒಂದು ವರ್ಷದ ಸಾಧನೆಯಲ್ಲಿ ಭ್ರಷ್ಟಾಚಾರದ ಸಣ್ಣ ಕಲೆ ಕೂಡ ಇಲ್ಲ. ಹಾಗಾಗಿ ಕಷ್ಟದ ದಿನಗಳು ಮುಗಿದು ಹೋದವು, ದೇಶದಲ್ಲೀಗ ಇರುವುದು ಅಚ್ಚೇ ದಿನ್ ಅಲ್ಲವೇ ಎಂದು ಮೋದಿ ಮರು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com