ನಗರದಲ್ಲಿ ಮಳೆಗೆ ಸಂಚಾರ ಮಂದ

ರಸ್ತೆಯುದ್ದಕ್ಕೂ ವಾಹನಗಳ ಸಾಲು ಸಾಲು. ಪದೇ ಪದೇ ಮುರಿದು ಬೀಳುತ್ತಿರುವ ಮರದ ಕೊಂಬೆಗಳು, ಶಾಲಾ ಕಾಲೇಜುಗಳಿಗೆ ಹೋಗಲು ಹರಸಾಹಸ ಪಡುವ ವಿದ್ಯಾರ್ಥಿಗಳು, ಕಚೇರಿಗೆ ತೆರಳಲು ಉದ್ಯೋಗಿಗಳ ಪರದಾಟ. ಇವೆಲ್ಲದರ ನಡುವೆ ಸಮಸ್ಯೆ ಪರಿಹರಿಸುವಲ್ಲಿ...
ನಗರದಲ್ಲಿ ಮಳೆಗೆ ಸಂಚಾರ ಮಂದ (ಫೋಟೋ ಕೃಪೆ: ಕೆಪಿಎನ್)
ನಗರದಲ್ಲಿ ಮಳೆಗೆ ಸಂಚಾರ ಮಂದ (ಫೋಟೋ ಕೃಪೆ: ಕೆಪಿಎನ್)

ಬೆಂಗಳೂರು: ರಸ್ತೆಯುದ್ದಕ್ಕೂ ವಾಹನಗಳ ಸಾಲು ಸಾಲು. ಪದೇ ಪದೇ ಮುರಿದು ಬೀಳುತ್ತಿರುವ ಮರದ ಕೊಂಬೆಗಳು, ಶಾಲಾ ಕಾಲೇಜುಗಳಿಗೆ ಹೋಗಲು ಹರಸಾಹಸ ಪಡುವ ವಿದ್ಯಾರ್ಥಿಗಳು, ಕಚೇರಿಗೆ ತೆರಳಲು ಉದ್ಯೋಗಿಗಳ ಪರದಾಟ. ಇವೆಲ್ಲದರ ನಡುವೆ ಸಮಸ್ಯೆ ಪರಿಹರಿಸುವಲ್ಲಿ ನಿರಂತರವಾಗಿ ಕಾರ್ಯನಿರತರಾಗಿರುವ ಬಿಬಿಎಂಪಿ ಸಿಬ್ಬಂದಿ.

ನಗರದಲ್ಲಿ ಹಿಂಗಾರು ಮಳೆ ಆರಂಭವಾಗಿ ಎರಡು ವಾರ ಕಳೆದಿದ್ದು, ನಗರದ ಜನ ಇದರಿಂದ ನಿತ್ಯ ಬವಣೆ ಪಡುವಂತಾಗಿದೆ. ಇನ್ನೇನು ಇದಕ್ಕೆ ಮುಕ್ತಿ ಸಿಕ್ತು ಎನ್ನುವಷ್ಟರಲ್ಲಿ ಬಂಗಾಳಕೊಲ್ಲಿಯಲ್ಲಿ ಆದ ವಾಯುಭಾರ ಕುಸಿತ ಮತ್ತೆ ಮಳೆ ತಂದೊಡ್ಡಿದೆ. ಇದು ಜನರ ನಿತ್ಯ ಚಟುವಟಿಕೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಸೋಮವಾರವೂ ಜನರ ಪರದಾಟ ಕಂಡುಬಂತು. ಮಳೆಯ ನೇರ ಪರಿಣಾಮ ವಾಹನ ದಟ್ಟಣೆಯ ಮೇಲಾಗಿದೆ. ಭಾನುವಾರ ಹಾಗೂ ಶನಿವಾರ ರಜಾದಿನಗಳಾಗಿದ್ದರಿಂದ ವಾಹನ ದಟ್ಟಣೆ ಹೆಚ್ಚಿರಲಿಲ್ಲ. ಆದರೆ, ಸೋಮವಾರ ಮತ್ತೆ ನಿತ್ಯದ ಚಟುವಟಿಕೆಗಳು ಆರಂಭವಾಗಿದ್ದರಿಂದ ಮಳೆಯ ಪರಿಣಾಮ ಸಂಚಾರ ದಟ್ಟಣೆ ಮೇಲೆಯೇ ಜೋರಾಗಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಸವಾರರು ತೀವ್ರ ಪರದಾಡುವ ಪರಿಸ್ಥಿತಿ ಕಂಡಿತು. ಮೆಜೆಸ್ಟಿಕ್‍ಗೆ ಬರುವ ಕೆ.ಜಿ.ರಸ್ತೆ, ಸ್ಯಾಟ್ ಲೈಟ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು, ರೇಸ್‍ಕೋರ್ಸ್ ಮೇಲ್ಸೇತುವೆ, ಟೌನ್ ಹಾಲ್ ವೃತ್ತ, ಜೆಸಿ ರಸ್ತೆ, ಚೌಡಯ್ಯ ರಸ್ತೆ, ಶೇಷಾದ್ರಿ ರಸ್ತೆ, ಚಾಮರಾಜಪೇಟೆಯ ಬುಲ್‍ಟೆಂಪಲ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿಯ ಕೈಗಾರಿಕಾ ಪ್ರದೇಶಗಳು, ಸಹಕಾರ ನಗರ ಸೇರಿದಂತೆ ನಾನಾ ಕಡೆ ಮಳೆಯಿಂದಾಗಿ ವಾಹನ ಸಂಚಾರದ ದಟ್ಟಣೆ ಸೃಷ್ಟಿಯಾಗಿತ್ತು. ಜೊತೆಗೆ ಕೆಲವು ಸ್ಥಳಗಳಲ್ಲಿ ಮರ, ಕೊಂಬೆಗಳು ಬೀಳುತ್ತಿರುವುದರಿಂದ ವಾಹನ ಸಂಚಾರಕ್ಕೆ ಆಗಾಗ್ಗೆ ಅಡ್ಡಿಯಾಗುತ್ತಿದೆ.

ಕಾಮಗಾರಿ:
ಶಿವಾನಂದ ವೃತ್ತ, ಬನ್ನಪ್ಪ ಪಾರ್ಕ್ ಬಳಿ, ಜೆಸಿ ರಸ್ತೆ ಸೇರಿದಂತೆ ಹಲವು ಸ್ಥಳಗಳಲ್ಲಿ ಜಲಮಂಡಳಿಯಿಂದ ಕಾಮಗಾರಿ ನಡೆಯುತ್ತಿದೆ. ಬಿಬಿಎಂಪಿಯಿಂದಲೂ ನಡೆಯುತ್ತಿರುವ ಕಾಮಗಾರಿಯಿಂದ ಮತ್ತಷ್ಟು ತೊಂದರೆಯಾಗಿದೆ. ಮಳೆಯ ಸಂದರ್ಭದಲ್ಲಿ ಭೂಮಿ ಅಗೆಯುವುದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ಬಿಬಿಎಂಪಿಯಿಂದ ರಸ್ತೆಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದ್ದು, ಮಳೆಯ ಕಾರಣದಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮಳೆ ನಿರಂತರವಾಗಿ ಬರುತ್ತಿರುವುದರಿಂದ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿಲ್ಲ. ಇದರಿಂದ ಈಗ ಇರುವ ಗುಂಡಿಯ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಜೊತೆಗೆ ಕಿತ್ತು ಹೋಗಿರುವ ರಸ್ತೆಗಳು ನೀರಿನ ಹರಿವಿನಿಂದ ಮತ್ತಷ್ಟು ಹಾಳಾಗುತ್ತಿದೆ.

ಉರುಳಿದ ಮರಗಳು: ಸೋಮವಾರ ಸುರಿದ ಮಳೆಗೆ ಶಾಂತಿನಗರ ಹಾಗೂ ವಿನಾಯಕ ನಗರದಲ್ಲಿ ಎರಡು ಮರಗಳು ನೆಲಕ್ಕುರುಳಿವೆ. ಫ್ರೇಜರ್‍ಟೌನ್, ಬಾಣಸವಾಡಿ, ಜೀವನ್‍ಬೀಮಾನಗರದ 8ನೇ ಕ್ರಾಸ್, ಡಿಫೆನ್ಸ್ ಕಾಲೋನಿ, ಗೀತಾಂಜಲಿ ಲೇಔಟ್, ಸಂಜೀವಿನಿ ನಗರ, ಜಯನಗರದ 4ನೇ ಟಿ ಬ್ಲಾಕ್ 8ನೇ ಮುಖ್ಯರಸ್ತೆ, ರಾಜಾಜಿನಗರದ 2ನೇ ಮುಖ್ಯರಸ್ತೆ, ಪ್ರಶಾಂತನಗರದ 3ನೇ ಮುಖ್ಯರಸ್ತೆ, ತಿಮ್ಮೇನಹಳ್ಳಿಯ 2ನೇ ಕ್ರಾಸ್, ಮಾಗಡಿಯಲ್ಲಿ ಮರ ಹಾಗೂ ಕೊಂಬೆಗಳು ಧರೆಗುರುಳಿವೆ. ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರಾತ್ರಿ ಸುರಿದ ಮಳೆಗೆ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ದೂರುಗಳು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದಾಖಲಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com