ಲೋಕಾ ಪದಚ್ಯುತಿ ಪ್ರಕ್ರಿಯೆಗೆ ಚಾಲನೆ

ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪದಚ್ಯುತಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ...
ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ (ಸಂಗ್ರಹ ಚಿತ್ರ)
ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ಪದಚ್ಯುತಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆ, ವಿಧಾನ ಪರಿಷತ್‍ನಲ್ಲಿ ಲೋಕಾಯುಕ್ತ ಪದಚ್ಯುತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ ಹಾಗೂ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ನಿಲುವಳಿ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಲೋಕಾಯುಕ್ತ ಪದಚ್ಯುತಿ ವಿಚಾರದಲ್ಲಿ ಜಂಟಿ ಹೋರಾಟದ ಸುಳಿವು ನೀಡಿದ್ದ ಬಿಜೆಪಿ ಹಾಗೂ ಜೆಡಿಎಸ್ ಈ ಬಾರಿ ಮಾತ್ರ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಮುಂದಾಗಿವೆ. ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಪ್ರತಿಪಕ್ಷಗಳು ಪರಸ್ಪರ `ಅಸಹಿಷ್ಣುತೆ'ಯ ಸುಳಿವು ನೀಡಿದ್ದಾರೆ.

ಹೀಗಾಗಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿಯ 46 ಸದಸ್ಯರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ ನೇತೃತ್ವದಲ್ಲಿ 37 ಶಾಸಕರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪದಚ್ಯುತಿ ನಿರ್ಣಯ ಸಲ್ಲಿಸಿವೆ. ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಜೆಡಿಎಸ್ ನಾಯಕರು ವಿಧಾನ ಪರಿಷತ್ ಸಭಾಪತಿ ಶಂಕರಮೂರ್ತಿ  ಅವರಿಗೆ ನಿರ್ಣಯ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಧಿನಿಯಮ 1984 ಹಾಗೂ (ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ 2015)ರ ನಿಯಮ 6(2)ರ ಅಡಿ ಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ಬಗ್ಗೆ ಉಲ್ಲೇಖಿಸಲಾಗಿದ್ದು, ನ್ಯಾಯಾಧೀಶರ ಪದಚ್ಯುತಿ ಅಧಿನಿಯಮ (ವಿಚಾರಣೆ) 68ರಲ್ಲಿ ಸೂಚಿಸಿರುವ ವಿಧಾನದ ಮೂಲಕ ಲೋಕಾಯುಕ್ತರನ್ನು ದುರ್ವರ್ತನೆ  ಮತ್ತು ಅಸಾಮರ್ಥ್ಯದ ಆಧಾರದ ಮೇಲೆ ಪದಚ್ಯುತಿಗೊಳಿಸಲು ಅವಕಾಶ ಕಲ್ಪಿಸುವಂತೆ ಕೆಲ ದಾಖಲೆ ಸಮೇತ ಮನವಿ ಸಲ್ಲಿಸಲಾಗಿದೆ.

ಅರ್ಜಿ ಮುಖ್ಯಾಂಶ ಏನು?: ಲೋಕಾಯುಕ್ತರ ಪುತ್ರ, ಕೆಲವು ಪರಿಚಿತರೊಂದಿಗೆ ಲೋಕಾಯುಕ್ತ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ನೌಕರರಿಗೆ ಅಕ್ರಮವಾಗಿ ಬೆದರಿಕೆ ಒಡ್ಡುವ  ಮೂಲಕ ಕೋಟ್ಯಂತರ ರುಪಾಯಿ ವಸೂಲಿ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಲೋಕಾಯುಕ್ತರು ಪುತ್ರನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿ ಪ್ರತ್ಯೇಕ ವಿಶೇಷ  ತನಿಖಾ ಘಟಕ ರಚಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದರನ್ವಯ ಸರ್ಕಾರ ಲೋಕಾಯುಕ್ತ ಮನವಿಗೆ ಸ್ಪಂದಿಸಿ ಎಸ್‍ಐಟಿ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಮಧ್ಯೆ ಸಾರ್ವಜನಿಕ ಸಂಘ ಸಂಸ್ಥೆಗಳು ಲೋಕಾಯುಕ್ತದಲ್ಲಾಗಿರುವ ಭ್ರಷ್ಟಾಚಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಲೋಕಾಯುಕ್ತರು ನೈತಿಕ ಜವಾಬ್ದಾರಿ ಹೊತ್ತು ರಾಜಿನಾಮೆ  ನೀಡಬೇಕೆಂದು ಒತ್ತಾಯಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಎಲ್ಲ ಬೆಳವಣಿಗೆ ಲೋಕಾಯುಕ್ತ ದುರ್ಬಲಗೊಂಡಿರುವುದನ್ನು ಸಾಬೀತು ಪಡಿಸುತ್ತಿದೆ. ಲೋಕಾಯುಕ್ತ ಹಾಗೂ ಅವರ  ಕುಟುಂಬದ ಸದಸ್ಯರು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿದ್ದು, ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತರುವ ಸಂಗತಿ. ತಮ್ಮ ಮೇಲಿನ  ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತರು 3 ತಿಂಗಳಿನಿಂದ ಖಾಸಗಿ ರಜೆಯ ಮೇಲೆ ತೆರಳಿದ್ದು, ಸಂಪೂರ್ಣ ನಿಷ್ಕ್ರಿಯವಾಗಿರುವ ಲೋಕಾಯುಕ್ತ ಸಂಸ್ಥೆ ಜನತೆಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ.

ಲೋಕಾಯುಕ್ತರು ಪುತ್ರನ ಮೇಲೆ ಬಂದಿರುವ ಆರೋಪಗಳನ್ನು ತಾವೇ ಸೂಚಿಸಿರುವ ತನಿಖಾ ಸಮಿತಿಗೆ ವಹಿಸುವಂತೆ ಕೋರಿರುವುದು ದುರದೃಷ್ಟಕರ ಹಾಗೂ ಲೋಕಾಯುಕ್ತ  ಕಾರ್ಯವೈಖರಿ ಮೇಲೆ ಅನುಮಾನ ಮೂಡಿಸುವಂತದ್ದು. ಲೋಕಾಯುಕ್ತರ ಅಸಾಮರ್ಥ್ಯ, ದುರ್ವರ್ತನೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಾಂವಿಧಾನಿಕ ಹುದ್ದೆಯಾದ ಕರ್ನಾಟಕ ಲೋಕಾಯುಕ್ತರಾಗಿ ಭಾಸ್ಕರ್ ರಾವ್ ಮುಂದುವರಿಯುವುದು ಸಾರ್ವಜನಿಕವಾಗಿ ಮತ್ತು ಸಾಂವಿಧಾನಿಕವಾಗಿ ಅಪೇಕ್ಷಣೀಯವಲ್ಲದ್ದಾಗಿರುವುದರಿಂದ ಲೋಕಾಯುಕ್ತ ಕಾಯ್ದೆ ಅಧಿನಿಯಮ 1994ರ ನಿಯಮ (6)ರ ಅನ್ವಯ ಪದಚ್ಯುತಿಗೊಳಿಸಬೇಕೆಂದು ಆಗ್ರಹಿಸಲಾಗಿದೆ.

ಮುಂದೇನು?: ಪ್ರತಿಪಕ್ಷಗಳು ಸಲ್ಲಿಸಿರುವ ಮನವಿ (ನಿಲುವಳಿ) ಪ್ರಕ್ರಿಯೆ ಆರಂಭ ಮಾತ್ರ. ಸಭಾಪತಿ ಮತ್ತು ಸಭಾಧ್ಯಕ್ಷರು ಶಾಸಕರು ನೀಡಿದ ಅರ್ಜಿ ಮತ್ತು ದಾಖಲೆ ಗಳನ್ನು ಪರಿಶೀಲಿಸಿ  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಈ ಅರ್ಜಿಯೊಂದಿಗೆ ಕ್ರಮಕ್ಕೆ ಶಿಫಾರಸು ಮಾಡುತ್ತಾರೆ. ಹೊಸ ತಿದ್ದುಪಡಿ ಪ್ರಕಾರ ನಿಗದಿತ ಸಂಖ್ಯಾ ಬಲದೊಂದಿಗೆ ಉಭಯ ಸದನದಲ್ಲಿ ಅರ್ಜಿ  ಸಲ್ಲಿಕೆಯಾಗಿ ಸ್ಪೀಕರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತಿದ್ದಂತೆ ಲೋಕಾಯುಕ್ತರ ಹಕ್ಕುಗಳು ಮೊಟಕುಗೊಳ್ಳುತ್ತವೆ. ಮುಖ್ಯ   ನ್ಯಾಯಮೂರ್ತಿಗಳು ಶಾಸಕಾಂಗದಿಂದ ತಮ್ಮ ವರದಿಯನ್ನು ಪುನಃ ವಿಧಾನ ಮಂಡಲಕ್ಕೆ ಕಳುಹಿಸುತ್ತಾರೆ. ನಂತರ ನ್ಯಾಯಮೂರ್ತಿಗಳ ವರದಿ ಸದನದ ಸ್ವತ್ತಾಗುತ್ತದೆ, ಜೊತೆಗೆ ಅಲ್ಲಿ  ಶಾಸಕರು ಈ ವಿಚಾರದಲ್ಲಿ ಚರ್ಚಿಸಲು ಅವಕಾಶ ಸಿಗುತ್ತದೆ. ಇನ್ನೊಂದೆಡೆ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಕ್ರಿಯೆ ನಿಯಮದಂತೆ ನಡೆಯುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com