
ಬೆಂಗಳೂರು: ಬಸವಣ್ಣನವರು ಹುಟ್ಟಿದ ವರ್ಷ ಕುರಿತು ಎಲ್ಲಿಯೂ ಗೊಂದಲ ವಿಲ್ಲ. ಆದರೆ, ಅವರು ಲಿಂಗೈಕ್ಯರಾದ ವರ್ಷ ಕುರಿತು ಸಾಕಷ್ಟು ಗೊಂದಲ ಗಳಿವೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ.
ಇನ್ನು, ಬಸವಣ್ಣನವರು ಲಿಂಗೈಕ್ಯರಾದ ಕಾಲ ಕುರಿತ ವಿವಾದದ ಬಗ್ಗೆ ಡಾ. ನೀರಜ್ ಪಾಟೀಲ್ ನೀಡುವ ವಿವರಣೆ ಹೀಗಿದೆ: `ಬಸವಣ್ಣನವರು ಹುಟ್ಟಿದ ವರ್ಷ ಕುರಿತು ಎಲ್ಲಿಯೂ ಗೊಂದಲವಿಲ್ಲ. ಆದರೆ, ಅವರು ಲಿಂಗೈಕ್ಯರಾದ ವರ್ಷ ಕುರಿತು ಸಾಕಷ್ಟು ಗೊಂದಲಗಳಿವೆ. ಕ್ರಿಶ 1168ರ ನಂತರ ಬಸವಣ್ಣನವರ ಚಟುವಟಿಕೆ ಕುರಿತು ಯಾವುದೇ ಮಾಹಿತಿ ಎಲ್ಲಿಯೂ ದಾಖಲಾಗಿಲ್ಲ. ಹೀಗಾಗಿ, ಅವರು ಬಿಜ್ಜಳನ ದೇಹಾಂತ್ಯ ಸಮಯದಲ್ಲೇ ಲಿಂಗೈಕ್ಯರಾಗಿರುವ ಸಾಧ್ಯತೆಗಳಿವೆ ಎಂದು ಬಹಳಷ್ಟು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಈ ಕುರಿತು ಐತಿಹಾಸಿಕ ದಾಖಲೆಗಳಿಲ್ಲ. ಈ ಹಿನ್ನೆಲೆಯಲ್ಲಿ ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬಸವಣ್ಣನವರ ದೇಹಾಂತ್ಯ ಕಾಲ ನಿರ್ಣಯಿಸಲು ಸರ್ಕಾರ ತಜ್ಞರ ಸಮಿತಿ ರಚಿಸಲಿ. ಆ ಸಮಿತಿ ನೀಡುವ ವರದಿಯ ಆಧಾರದ ಮೇಲೆ ನಾನು ಪುತ್ಥಳಿಯ ಕೆಳಗೆ ನಮೂದಾಗಿರುವ ಲಿಂಗೈಕ್ಯ ವರ್ಷವನ್ನು ಬದಲಿಸಲು ಸಿದ್ಧನಿದ್ದೇನೆ'. ಬಸವಣ್ಣನವರು ಲಿಂಗೈಕ್ಯರಾದ ವರ್ಷದ ಕುರಿತು ಖುದ್ದು ನೀರಜ್ ಪಾಟೀಲ್ ಅವರಿಗೇ ಗೊಂದಲವಿರುವಾಗ, ಪುತ್ಥಳಿಯ ಕೆಳಗೆ ಮರಣ ವರ್ಷವನ್ನು ಹೇಗೆ ಕೆತ್ತಿಸಿದರು? ಯಾವ ಆಧಾರದ ಮೇಲೆ ಬಸವಣ್ಣನವರು ಲಿಂಗೈಕ್ಯರಾಗಿದ್ದು ಕ್ರಿಶ 1168ರಲ್ಲಿ ಎಂದು ನಿರ್ಣಯಿಸಿದರು ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಕೇವಲ 12ನೇ ಶತಮಾನದ ದಾರ್ಶನಿಕ ಎಂದು ಹೇಳಬಹುದಿತ್ತು.
Advertisement