

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಮನವಿ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮಿಳುನಾಡಿಗೆ ತಕ್ಷಣ 939.63 ಕೋಟಿ ರುಪಾಯಿ ಪ್ರವಾಹ ಪರಿಹಾರದ ಹಣ ನೀಡುವಂತೆ ಸೂಚಿಸಿದ್ದಾರೆ.
ಭಾರಿ ಮಳೆಯಿಂದ ತತ್ತರಿಸಿರುವ ತಮಿಳುನಾಡಿಗೆ 8,481 ಕೋಟಿ ಪರಿಹಾರ ನೀಡುವಂತೆ ಹಾಗೂ ಮುಂಗಡವಾಗಿ 2 ಸಾವಿರ ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸರ್ಕಾರ ಮನವಿ ಮಾಡಿತ್ತು.
ಈ ಮಧ್ಯೆ ಪ್ರವಾಹದಿಂದ ಉಂಟಾದ ಹಾನಿಯ ಪ್ರಮಾಣವನ್ನು ಅಂದಾಜಿಸಲು ಕೇಂದ್ರ ತಂಡ ತಮಿಳುನಾಡಿಗೆ ಆಗಮಿಸುತ್ತಿದ್ದು, ತಂಡ ನೀಡುವ ವರದಿಯನ್ನು ಆಧರಿಸಿ ಕೇಂದ್ರ ಮುಂದಿನ ಕ್ರಮ ತೆಗೆದುಕೊಳ್ಳಲಿದೆ.
ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಉಂಟಾದ ಪ್ರವಾಹದಿಂದ 8481 ಕೋಟಿ ರುಪಾಯಿ ನಷ್ಟವಾಗಿದ್ದು, ಪರಿಹಾರ ಕಾರ್ಯಗಳಿಗಾಗಿ ತಕ್ಷಣ ಎರಡು 2 ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡುವಂತೆ ಪ್ರಧಾನಿಗೆ ಜಯಲಲಿತಾ ಪತ್ರ ಬರೆದು ಮನವಿ ಮಾಡಿದ್ದರು.