
ಬೆಂಗಳೂರು: ಧಾರ್ಮಿಕ ನೆಪವೊಡ್ಡಿ ವೈದ್ಯಕೀಯ ಪರೀಕ್ಷೆಯಿಂದ ಜಾರಿಕೊಂಡಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಶ್ರೀಗಳಿಗೆ ನೀಡಿರುವ ಜಾಮೀನನ್ನು ರದ್ದು ಮಾಡುವಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ರಾಮಕಥಾ ಗಾಯಕಿ ಪ್ರೇಮಲತಾ ಅವರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಶ್ವರ ಶ್ರೀಗಳು ನ್ಯಾಯಾಲಯದಿಂದ ಪಡೆದಿರುವ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಸಿಐಡಿ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಸಿಐಡಿ ಅಧಿಕಾರಿಗಳ ಸೂಚನೆಯಿದ್ದರೂ ರಾಘವೇಶ್ವರ ಶ್ರೀಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗಿಲ್ಲ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವೈದ್ಯಕೀಯ ಪರೀಕ್ಷೆಗೆ ಶ್ರೀಗಳು ಹಾಜರಾಗಿಲ್ಲ. ಈ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಶ್ರೀಗಳು, ತಾವು ಈಗಾಗಲೇ ಡಿಎನ್‍ಎ ಪರೀಕ್ಷೆಗೆ ಹಾಜರಾಗಿದ್ದೇನೆ ಉಳಿದ ಮೂರು ಪರೀಕ್ಷೆಗಳು ಅಗತ್ಯವಿಲ್ಲ ಎಂದು ಪತ್ರ ಬರೆದಿರುವ ಶ್ರೀಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗಿಲ್ಲ. ಇದು ತಿನಿಖಾಧಿಕಾರಿಗಳ ಸೂಚನೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಅವರಿಗಿರುವ ನಿರೀಕ್ಷಣಾ ಜಾಮೀನನ್ನು ಕೂಡಲೇ ರದ್ದುಗೊಳಿಸುವಂತೆ ಕೋರಿ ಬಿ.ಎ.ಬೆಳ್ಳಿಯಪ್ಪ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಆರೋಪಪಟ್ಟಿ ಸಲ್ಲಿಸಿ ಶ್ರೀಗಳಿಗೆ ಸೆ.30ರಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣ ಮತ್ತು ಯಕ್ಷಗಾನ ಕಲಾವಿದೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳು ಜಾಮೀನು ಪಡೆದಿದ್ದರು.
Advertisement