
ಬೆಂಗಳೂರು: ಕೇಂದ್ರ ಸರ್ಕಾರವು ಔಷಧ ಮತ್ತು ಕಾಂತಿವರ್ಧಕ ಕಾಯಿದೆಗೆ ತಿದ್ದುಪಡಿ ತಂದು ಆನ್ ಲೈನ್ ಮುಖಾಂತರ ಔಷಧ ಮಾರಾಟಕ್ಕೆ ಹೊರಟಿರುವ ಕ್ರಮ ಖಂಡಿಸಿ ಔಷಧ ವ್ಯಾಪಾರಿಗಳು ಅ. 14 ರಂದು ರಾಷ್ಟ್ರಾದ್ಯಂತ ಔಷಧ ಅಂಗಡಿ ಬಂದ್‍ಗೆ ಕರೆ ನೀಡಿದ್ದಾರೆ.
ಇದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಬೃಹತ್ ಬೆಂಗಳೂರು ಕೆಮಿಸ್ಟ್ಸ್ ಆ್ಯಂಡ್ ಡ್ರಗ್ಗಿಸ್ಟ್ಸ್ಅಸೋಸಿಯೇಷನ್ ಅಂದು ಬೆಳಗ್ಗೆ ಸುಮಾರು 5 ಸಾವಿರ ಮಂದಿ ಜತೆಗೂಡಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಲಿದೆ. ಆಸ್ಪತ್ರೆಗಳಲ್ಲಿರುವ ಔಷಧ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಔಷಧ ಅಂಗಡಿಗಳು ಬಂದ್ ಆಗಲಿವೆ. ಈಗಾಗಲೇ ಕೆಲವು ಅಂಗಡಿಗಳಲ್ಲಿ ವೈದ್ಯರ ಶಿಫಾರಸು ಇಲ್ಲದೆ ಔಷಧ ನೀಡುತ್ತಿರುವುದರಿಂದ ಅನಾಹುತ ಹೆಚ್ಚಾಗುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಕಾಯಿದೆಗೆ ತಿದ್ದುಪಡಿ ತಂದು ಆನ್‍ಲೈನ್‍ನಲ್ಲಿ ಔಷಧ ದೊರೆತರೆ ದೇಶದ ಪರಿಸ್ಥಿತಿ ಏನಾಗಬಹುದು?
ಡಿಜಿಟಲ್ ಇಂಡಿಯಾ ಮಾಡಲು ಹೊರಟಿರುವ ಕೇಂದ್ರ ಕಾರ್ಪೊರೇಟ್ ಕುಳಗಳ ಹಿಡಿತಕ್ಕೆ ಸಿಲುಕಿ ಜನರ ಜೀವನದೊಂದಿಗೆ ಆಟವಾಡಲು ಹೊರಟಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ. ಮಾಯಣ್ಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಭಾರತವನ್ನು ಡಿಜಿಟಲ್ ಇಂಡಿಯಾವನ್ನಾಗಿ ರೂಪಿಸುವುದು ಒಳ್ಳೆಯದು. ಆದರೆ ಸೂಕ್ಷ್ಮ ವಿಚಾರಕ್ಕೂ ಅನ್ವಯಿಸುವುದು ಸರಿಯಲ್ಲ. ದೇಶಾದ್ಯಂತ 8 ಲಕ್ಷ ಔಷಧ ಉದ್ಯಮಿಗಳಿದ್ದಾರೆ. ಒಂದೂವರೆ ಕೋಟಿ ಔಷಧ ಅಂಗಡಿಗಳಿವೆ. ಆನ್‍ಲೈನ್‍ನಲ್ಲಿ ಮಾರಾಟಕ್ಕೆ ಅವಕಾಶ ನೀಡಿದರೆ ಇವರೆಲ್ಲ ಬೀದಿ ಪಾಲಾಗುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳು ಲಾಭ ಮಾಡಿಕೊಳ್ಳುತ್ತಾರೆ. ನಿರ್ಬಂಧಿತ ಔಷಧ ಜನರ ಕೈಗೆ ಸಿಕ್ಕರೆ ದುರಂತ ಸಂಭವಿಸುವುದು ಗ್ಯಾರಂಟಿ. ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡಿ ತಂದು ಕೊಡುವಷ್ಟರಲ್ಲಿ ಜೀವ ಹೋಗಿರುತ್ತದೆ.
ಏನೇ ಆದರೂ ಆನ್‍ಲೈನ್ ಮುಖಾಂತರ ಔಷಧ ಮಾರಾಟ ಸರಿಯಲ್ಲ. ಇದನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕು ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕೆ. ಕೃಷ್ಣಕುಮಾರ್, ವಿ.ಕೆ. ರಾಘವೇಂದ್ರ, ರಾಜು ಉಪಸ್ಥಿತರಿದ್ದರು.
Advertisement