
ಬೆಂಗಳೂರು: ಉಪ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾ.ಕೆ. ಎಲ್.ಮಂಜುನಾಥ್‍ರನ್ನೇ ನೇಮಿಸಬೇಕೆಂದು ಹಠಕ್ಕೆ ಬಿದ್ದಂತಿರುವ ರಾಜ್ಯ ಸರ್ಕಾರ ಮತ್ತೆ ರಾಜಭವನ ಕದ ತಟ್ಟಲು ನಿರ್ಧರಿಸಿದೆ.
ಹಲವು ತಿಂಗಳಿಂದ ಖಾಲಿ ಇರುವ ಉಪ ಲೋಕಾಯುಕ್ತರ ಹುದೆಗ್ದೆ ನ್ಯಾ.ಕೆ. ಎಲ್.ಮಂಜುನಾಥ್ ಅವರನ್ನು ನೇಮಿಸುವಂತೆ ಕೋರಿ ಮತ್ತೆ ರಾಜ್ಯಪಾಲ ವಿ.ಆರ್.ವಾಲಾಗೆ ಪ್ರಸ್ತಾಪನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ನ್ಯಾ.ಮಂಜುನಾಥ್ ಅವರನ್ನು ನೇಮಿಸುವಂತೆ ಸರ್ಕಾರ ಈ ಹಿಂದೆಯೇ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ನ್ಯಾ.ಮಂಜುನಾಥ್ ವಿರುದ್ಧ ಕೆಲವು ಆರೋಪಗಳಿರುವ ಹಿನ್ನೆಲೆಯಲ್ಲಿ ನೇಮಕ ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಇಲ್ಲ ಎಂದು ಆಕ್ಷೇಪಿಸಿ ಪ್ರಸ್ತಾವನೆ ವಾಪಸ್ ಕಳುಹಿಸಿದ್ದರು.
ಆದರೆ ಸರ್ಕಾರ ಮತ್ತೆ ಅವರನ್ನೇ 2ನೇ ಬಾರಿಗೆ ಶಿಫಾರಸು ಮಾಡಿದಾಗಲೂ ರಾಜ್ಯಪಾಲರು ಕಡತ ವಾಪಸ್ ಕಳುಹಿಸಿದ್ದರು. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸರ್ಕಾರ ಅದೇ ಪ್ರಸ್ತಾಪವನ್ನು ಮತ್ತೆ ಏಕೆ ಸಲ್ಲಿಸಬಾರದೆಂಬ ತೀರ್ಮಾನಕ್ಕೆ ಬಂದಿದೆ. ಇದರ ಹಿಂದೆ `ಪವರ್ ಫುಲ್' ಸಚಿವರ ಒತ್ತಡವಿದೆ ಎಂದು ಹೇಳಲಾಗುತ್ತಿದೆ. ಅಂದರೆ ಸರ್ಕಾರ ಸಲ್ಲಿಸುವ ಯಾವುದೇ ಪ್ರಸ್ತಾಪವನ್ನು ರಾಜ್ಯಪಾಲರು ಸಾಮಾನ್ಯವಾಗಿ ಎರಡನೇ ಬಾರಿಗೆ ತಿರಸ್ಕರಿಸುವುದಿಲ್ಲ. ಆದರೆ ವಿ.ಆರ್.ವಾಲಾ ಎರಡು ಬಾರಿ ತಿರಸ್ಕರಿಸಿದ್ದಾರೆ. ಆದರೆ ಮೂರನೇ ಬಾರಿಗೆ ಸಾಮಾನ್ಯವಾಗಿ ತಿರಸ್ಕರಿಸುವುದಿಲ್ಲ. ಅಂಥ ಉದಾಹರಣೆಗಳೂ ಯಾವುದೂ ಇಲ್ಲ. ಸಾಲದಕ್ಕೆ ಸರ್ಕಾರದ ಪ್ರಸ್ತಾಪವನ್ನು ಮೂರನೇ ಬಾರಿಗೆ ವಾಪಸ್ ಕಳುಹಿಸುವುದು ಅಷ್ಟು ಸುಲಭವೂ ಅಲ್ಲ.
ಈ ಹಿನ್ನೆಲೆಯಲ್ಲಿ ಸರ್ಕಾರ ಮರಳಿ ಯತ್ನವ ಮಾಡಲು ಮುಂದಾಗಿದೆ. ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಹುದ್ದೆಗಳಿಗೆ ನೇಮಿಸುವಾಗ ಮುಖ್ಯಮಂತ್ರಿ, ಕಾನೂನು ಸಚಿವರು, ಪ್ರತಿಪಕ್ಷ ನಾಯಕ, ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ ಸಭಾಪತಿ ಅವರನ್ನು ಒಳಗೊಂಡು ಸಮಿತಿ ರಚಿಸಲಾಗುತ್ತದೆ. ಆ ಸಮಿತಿಯಲ್ಲಿ ಚರ್ಚಸಿ ಸೂಕ್ತ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಅವರನ್ನು ಹೆಸರು ನಿರ್ಧರಿಸಲಾಗುತ್ತದೆ. ನಂತರ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಸಲಹೆ ಪಡೆದು ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಇದೇ ಮಾದರಿಯಲ್ಲಿ ಸರ್ಕಾರ ಎಲ್ಲ ಪ್ರಕ್ರಿಯೆಗಳನ್ನೂ ಪೂರೈಸಿ ನಂತರ ನ್ಯಾ. ಮಂಜುನಾಥ್ ಆಯ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೂ ರಾಜ್ಯಪಾಲರು ಈ ನೇಮಕ ಮಾರ್ಗಸೂಚಿ ಪ್ರಕಾರ ಇಲ್ಲ ಎಂದು ಆಕ್ಷೇಪಿಸಿದ್ದರು.
ಸರ್ಕಾರ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿರುವಾಗ ರಾಜ್ಯಪಾಲರು ಪದೇಪದೇ ಪ್ರಸ್ತಾವನೆ ಯನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದ್ದರಿಂದ ಮತ್ತೆ ಪ್ರಸ್ತಾಪ ಸಲ್ಲಿಸಿದರೆ ರಾಜ್ಯಪಾಲರು ತಿರಸ್ಕರಿಸಲು ಅವಕಾಶ ಇರುವುದಿಲ್ಲ ಎಂದು ಭಾವಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸರ್ಕಾರ ಸಲ್ಲಿಸುವ ಪ್ರಸ್ತಾಪಗಳನ್ನು ಸಾಮಾನ್ಯವಾಗಿ ರಾಜ್ಯಪಾಲರು ವಾಪಸ್ ಕಳುಹಿಸುವುದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರಾಜ್ಯಪಾಲರಾಗಿದ್ದ ಎಚ್. ಆರ್.ಭಾರದ್ವಾಜ್, ಒಂದೆರಡು ವಿಚಾರಗಳಲ್ಲಿ ಮಾತ್ರ ಆಕ್ಷೇಪ ಎತ್ತಿದ್ದನ್ನು ಬಿಟ್ಟರೆ ಉಳಿದೆಲ್ಲಾ ವಿಚಾರದಲ್ಲೂ ಸರ್ಕಾರದ ಪ್ರಸ್ತಾಪಗಳನ್ನು ಅಂಗೀಕರಿಸಿದ್ದರು. ಆದ್ದರಿಂದ ರಾಜ್ಯಪಾಲ ವಿ.ಆರ್.ವಾಲಾ ಮೂರನೇ ಬಾರಿಯೂ ಪ್ರಸ್ತಾವನೆಯನ್ನು ವಾಪಸ್ ಕಳುಹಿಸಿದರೆ ಹೊಸ ಸಂಪ್ರದಾಯ ಆರಂಭಿಸಿ ಟೀಕಿಗೆ ಗುರಿಯಾಗುತ್ತಾರೆ. ಆದ್ದರಿಂದ ಈ ಬಾರಿ ಮತ್ತೆ ತಿರಸ್ಕಾರದ ಸಾಧ್ಯತೆ ಬರುವುದಿಲ್ಲ ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ.
ಹಿನ್ನೆಲೆ ಏನು?: ಉಪ ಲೋಕಾಯುಕ್ತರಾಗಿದ್ದ ಎಸ್.ಬಿ. ಮಜಗೆ ನಿವೃತ್ತಿ ನಂತರ ಆ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಲು ಸರ್ಕಾರ ಪ್ರಕ್ರಿಯೆ ಆರಂಭಿಸಿತ್ತು. ನಿರೀಕ್ಷೆಯಂತೆ ನ್ಯಾ. ಕೆ.ಎಲ್.ಮಂಜುನಾಥ್ ಅವರನ್ನು ನೇಮಕ ಮಾಡುವಂತೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ ರಾಜ್ಯಪಾಲರು ನಿರ್ದಿಷ್ಟ ಆಕ್ಷೇಪ ಎತ್ತುವ ಮೂಲಕ ಸರ್ಕಾರದ ಪ್ರಸ್ತಾಪವನ್ನು ವಾಪಸ್ ಕಳುಹಿಸಿದ್ದರು. ಇದರಿಂದ ಹಠಕ್ಕೆ ಬಿದ್ದ ಸರ್ಕಾರ ಎರಡನೇ ಬಾರಿ ರಾಜ್ಯಪಾಲರು ಒಪ್ಪಿಗೆ ಸೂಚಿಸುತ್ತಾರೆಂದು ನಿರೀಕ್ಷಿಸಿ ಮತ್ತೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿತ್ತು. ಆಗ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸ್ವೀಕರ್ ಹಾಗೂ ಸಭಾಪತಿ ಅವರಿಗೆ ಪತ್ರ ಬರೆದು ಸಲಹೆ ಕೇಳಿ ಮತ್ತೆ ಪ್ರಸ್ತಾವೆ ಸಲ್ಲಿಸಿತ್ತು. ಆದರೆ ರಾಜ್ಯಪಾಲರು ಎರಡನೇ ಬಾರಿಯೂ ಪ್ರಸ್ತಾಪವನ್ನು ವಾಪಸ್ ಕಳುಹಿಸಿದ್ದರು.
ಆರೋಪಗಳೇನು?
-ಆದಾಯ ಮೀರಿ ಆಸ್ತಿ ಗಳಿಕೆ
- 2004ರಲ್ಲಿ ಕೆಎಲ್‍ಎಂ ಅವರ ಪುತ್ರಿ ಕೆ.ಎಂ.ಚೈತ್ರ ಹೆಸರಿನಲ್ಲಿ ವೈಯಾಲಿಕಾವಲ್ ಸೊಸೈಟಿಯಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ.
- ಸೊಸೈಟಿ ಸದಸ್ಯರಲ್ಲದವರಿಗೆ ನಿವೇಶನ ಹಂಚುವುದು ಕಾನೂನು ಬಾಹಿರ. ಆದರೂ ಚೈತ್ರ ಅವರಿಗೆ ನಿವೇಶನ ಲಭಿಸಿದೆ
-ಬೆಂಗಳೂರಿನಲ್ಲಿ ಯಾವುದೇ ಗೃಹ ಸಂಬಂಧಿ ಆಸ್ತಿ ಇಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಲು ನಿಯಮವಿದ್ದರೂ ಅದನ್ನು ಪಾಲಿಸಿಲ್ಲ
-ಹೈಕೋರ್ಟ್‍ನಲ್ಲಿ ವೈಯಾಲಿಕಾವಲ್ ಸೊಸೈಟಿ ಮತ್ತು ಬಿಡಿಎ ಮಧ್ಯದ ಪ್ರಕರಣವೊಂದರಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಿದ್ದೇ ಕೆಎಲ್‍ಎಂ
- ಮಗಳ ಹೆಸರಿನಲ್ಲಿ ಸೈಟು ಪಡೆಯುವುದು, ಸೈಟುಕೊಟ್ಟ ಸಂಸ್ಥೆಯ ಪ್ರಕರಣಕ್ಕೆ ತಾವೇ ತೀರ್ಪು ನೀಡಿದ್ದು
- ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆ ನಿರ್ಮಾಣಕ್ಕೆ ಶ್ರೀಶಕ್ತಿ ಬಿಲ್ಡರ್ಸ್‍ನೊಂದಿಗೆ ಒಪ್ಪಂದ ಮಾಡಿಕೊಂಡು ಬಡಾವಣೆ ನಿರ್ಮಾಣಕ್ಕೆ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದೆ. ಆದರೆ, ಹಣ ಬಿಡುಗಡೆ ಮಾಡುವಾಗ ತೆರಿಗೆ ಹಿಡಿದುಕೊಳ್ಳುವ ನಿಯಮ ಉಲ್ಲಂಘಿಸಲಾಗಿದೆ. ಆದಾಯ ತೆರಿಗೆ ಇಲಾಖೆ ದಾಖಲಿಸಿದ ಪ್ರಕರಣವನ್ನು ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಒಬ್ಬರಾಗಿದ್ದ ಕೆಎಲ್‍ಎಂ ವಿಲೇವಾರಿ ಮಾಡಿದ್ದರು. ವಿಶೇಷವೆಂದರೆ ಎಟಿ ರಾಮಸ್ವಾಮಿಯವರ ವರದಿಯಲ್ಲಿ ನಿವೇಶನ ಪಡೆದವರ ಪಟ್ಟಿಯಲ್ಲಿ ಕೆಎಲ್‍ಎಂ ಹೆಸರೂ ಇದೆ.
ಸಚಿವ ಡಿ.ಕೆ.ಶಿವಕುಮಾರ್ ಲೋಕಾಯುಕ್ತದ ಮೇಲೆ ಹಿಡಿತ ಸಾಧಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ತಂದು ಭ್ರಷ್ಟರನ್ನು ನೇಮಿಸಲು ಮುಂದಾಗುತ್ತಿರಬಹುದು. ಇದರ ಮೂಲಕ ಡಿ.ಕೆ.ಶಿವಕುಮಾರ್ ತಮ್ಮ ಮೇಲಿನ ಆರೋಪಗಳನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ನಡೆಸಿರಬಹುದು. ಹೀಗಾಗಿ ಸರ್ಕಾರ ಮತ್ತೆ ಉಪ ಲೋಕಾಯುಕ್ತ ಪ್ರಸ್ತಾಪವನ್ನು ಸಲ್ಲಿಸಲು ನಿರ್ಧರಿಸಿರುವ ಸಾಧ್ಯತೆ ಇದೆ.
-ನ್ಯಾ ಸಂತೋಷ್ ಹೆಗ್ಡೆ ನಿವೃತ್ತ ಲೋಕಾಯುಕ್ತ
ನ್ಯಾ.ಕೆ.ಎಲ್.ಮಂಜುನಾಥ್ ವಿರುದ್ಧದ ಆರೋಪಗಳ ಬಗ್ಗೆ ದಾಖಲೆ ಸಹಿತ ಸಿಎಂಗೆ ಪತ್ರ ಬರೆದಿದ್ದೆವು. ಆದರೆ, ಸಿಎಂ ಮಂಜುನಾಥ್ ಅವರ ಪತ್ರಿಕಾ ಹೇಳಿಕೆಯನ್ನು ನಮಗೆ ಕಳುಹಿಸಿಕೊಟ್ಟರೇ ವಿನಃ ಆರೋಪಗಳು ನಿರಾಧಾರ ಎಂಬುದಕ್ಕೆ ಯಾವುದೇ ದಾಖಲೆ ಒದಗಿಸಿಲ್ಲ. ಈಗಲೂ ಕೂಡ ಅವರು ದಾಖಲೆ ಒದಗಿಸಲಿ, ಆಗ ನಾವು ಸರ್ಕಾರದ ಶಿಫಾರಸು ಬೆಂಬಲಿಸುತ್ತೇವೆ. ಅವರ ಹೆಸರನ್ನು ವಿರೋಧಿಸಲು ನಮಗೇನೂ ಬೇರೇನು ಕಾರಣಗಳಿಲ್ಲ.
-ಕೆ.ಎಸ್.ಈಶ್ವರಪ್ಪ ಪ್ರತಿಪಕ್ಷ ನಾಯಕ
Advertisement