ಬೆಂಗಳೂರು: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಹತ್ಯೆ ಖಂಡಿಸಿ ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯನ್ನು ಅಧಿಕೃತವಾಗಿ ಗುರುವಾರ ಹಿಂದಿರುಗಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆಗಿರುವ ಹಾಗೂ ಈಗಾಗಲೇ ಪಂಪ ಪ್ರಶಸ್ತಿ ಹಿಂದಿರುಗಿಸಿರುವ ಪ್ರೊ.ಚಂದ್ರಶೇಖರ ಪಾಟೀಲ್ ಜತೆಯಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕಚೇರಿಗೆ ತೆರಳಿ 2007ರಲ್ಲಿ ಸ್ವೀಕರಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಫಲಕ, ರು.50 ಸಾವಿರ ಚೆಕ್ ಅನ್ನು ಪ್ರಾದೇಶಿಕ ಕಾರ್ಯದರ್ಶಿ ಮಹಾಲಿಂಗೇಶ್ವರ್ ಭಟ್ ಅವರಿಗೆ ನೀಡಿದರು. ಕುಂವೀ ಅವರು ತಮ್ಮ `ಅರಮನೆ' ಕಾದಂಬರಿಗೆ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.
ಪ್ರಶಸ್ತಿ ಹಿಂದಿರುಗಿಸುವುದಕ್ಕೂ ಮುನ್ನ ಮಾತನಾಡಿದ ಕುಂವೀ, ಅಸಹಿಷ್ಣುತೆ ಹೆಚ್ಚಾಗುತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಮೂಲಭೂತವಾದಿಗಳು ಸಾಹಿತಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಹಿತ್ಯ ಅಕಾಡೆಮಿ ಸಮಕಾಲೀನ ಘಟನೆಗಳಿಗೆ ಸ್ಪಂದಿಸಬೇಕು. ಎಂ.ಎಂ.ಕಲಬುರ್ಗಿ ಹತ್ಯೆ ತನಿಖೆ ಬಗ್ಗೆ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಬೇಸರ ತಂದಿದೆ. ಅತ್ಯಂತ ನೋವಿನಿಂದ ಈ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ ಎಂದು ತಿಳಿಸಿದರು. ಸಾಮಾಜಿಕ ವ್ಯವಸ್ಥೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ದನಿ ಎತ್ತಬೇಕು. ಸರ್ಕಾರ ಕೂಡ ಸಾಮಾಜಿಕ ವ್ಯವಸ್ಥೆಯ ಒಂದು ಭಾಗ. 2 ತಿಂಗಳಿನಿಂದ ಸರ್ಕಾರ ಕಲಬುರ್ಗಿ ಹತ್ಯೆ ಬಗ್ಗೆ ಮೌನ ವಹಿಸಿದೆ. ಸರ್ಕಾರ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕಿತ್ತು. ಪ್ರಸುತ್ತ ಸಾಮಾಜಿಕ ವ್ಯವಸ್ಥೆ ವಿರೊಧಿಸಿ ಈ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ ಎಂದರು.
ಪ್ರೊ.ಚಂಪಾ ಅವರು ಮಾತನಾಡಿ, ಕಲಬುರ್ಗಿ ಹತ್ಯೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗಿದೆ. ಸಾಹಿತಿಗಳು ವ್ಯಕ್ತಿವಾದಿಗಳು. ವ್ಯಕ್ತಿತ್ವ ಅನನ್ಯತೆಯಿಂದ ಕೂಡಿರುವಂತಹುದು. ಲೇಖಕರಿಗೆ ಬರವಣಿಗೆ ಎಂಬುದು ಒಂದು ಗುರುತಿದ್ದಂತೆ ಎಂದರು. ಕೇಂದ್ರ ಸಾಹಿತ್ಯ ಅಕಾಡೆಮಿ ಮೇಲೆ ಒತ್ತಡ ಬಂದಿರುವ ಕಾರಣ ಅ.23ರಂದು ಸಭೆ ಕರೆಯಲಾಗಿದೆ. ಕಲಬುರ್ಗಿ ಅಕಾಡೆಮಿ ಸದಸ್ಯರಾಗಿದ್ದು ನಂತರ ರಾಜಿನಾಮೆ ನೀಡಿದರು. ಹತ್ಯೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಖಂಡಿಸಬೇಕಿತ್ತು. ದಾಭೋಲ್ಕರ್, ಗೋವಿಂದ ಪಾನ್ಸರೆ ಹಾಗೂ ಕಲಬುರ್ಗಿ ಹತ್ಯೆ ಚುರುಕಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕಂಬಾರರ ನಿಲುವು ಪ್ರಶ್ನಾರ್ಹ
ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಚಂದ್ರಶೇಖರ ಕಂಬಾರ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರೊ.ಚಂಪಾ ಅವರು, ಸಾಮಾಜಿಕ ತಲ್ಲಣದ ಸಮಯದಲ್ಲಿ ಕಂಬಾರರ ನಿಲುವು ಪ್ರಶ್ನಾರ್ಹವಾಗಿದೆ. ಪ್ರಗತಿಪರ ಆಂದೋಲನಗಳಲ್ಲಿ ಗುರುತಿಸಿಕೊಳ್ಳದ ಅವರ ನಿಲುವಿನಿಂದ ಯಾವುದೇ ಆಶ್ವರ್ಯವಿಲ್ಲ ಎಂದರು.
Advertisement