ಶೌರ್ಯ ಪ್ರಶಸ್ತಿಗೆ ಪಿಎಸ್‌ಐ ಜಗದೀಶ್‌ ಹೆಸರು ಶಿಫಾರಸು: ಜಾರ್ಜ್‌

ಬೈಕ್‌ ಕಳ್ಳರನ್ನು ಹಿಡಿಯಲು ಹೋಗಿ ಅವರಿಂದ ಹತ್ಯೆಗೀಡಾದ ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಜಗದೀಶ್‌ ಅವರ ಹೆಸರನ್ನು ಶೌರ್ಯ ಪ್ರಶಸ್ತಿ...
ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್
Updated on: 

ರಾಮನಗರ: ಬೈಕ್‌ ಕಳ್ಳರನ್ನು ಹಿಡಿಯಲು ಹೋಗಿ ಅವರಿಂದ ಹತ್ಯೆಗೀಡಾದ ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್‌ಐ ಜಗದೀಶ್‌ ಅವರ ಹೆಸರನ್ನು ಶೌರ್ಯ ಪ್ರಶಸ್ತಿ ಶಿಫಾರಸು ಮಾಡುವುದಾಗಿ ಗೃಹ ಸಚಿವ ಕೆ.ಜೆ ಜಾರ್ಜ್‌ ಅವರು ಸೋಮವಾರ ಹೇಳಿದ್ದಾರೆ.

ಇಂದು ಬೆಳಗ್ಗೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಲ್ಲಾಪುರದಲ್ಲಿರುವ ಜಗದೀಶ್ ಅವರ ಸಮಾಧಿಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್‌, ವಿಷಯ ಕೇಳಿ ತುಂಬಾ ನೋವಾಯಿತು, ಆದರೆ ನಾನು ವಿದೇಶದಲ್ಲಿದ್ದೆ, ಹೀಗಾಗಿ ನನಗೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದರು.

ಜಗದೀಶ್‌ ಅವರ ಕರ್ತವ್ಯ ನಿಷ್ಠೆಗೆ ತಲೆ ಬಾಗುತ್ತೇವೆ. ಅವರ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ ಎಂದು ಗೃಹ ಸಚಿವರು ತಿಳಿಸಿದರು. ಈ ವೇಳೆ ಹಿರಿಯ ಪೊಲೀಸ್‌ ಅಧಿಕಾರಿಗಳು ಜಾರ್ಜ್‌ ಅವರೊಂದಿಗೆ ಇದ್ದರು.

ಈ ಮಧ್ಯೆ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಜಗದೀಶ್ ಹತ್ಯೆ ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬುಗೆ ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ಇಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಮೆಕ್ಯಾನಿಕ್ ನಿಜಾಮ್ ಹಾಗೂ ಲ್ಯಾಬ್ ಟೆಕ್ನಿಷೀಯನ್ ಆಗಿರುವ ಮಂಜುನಾಥ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com