

ನವದೆಹಲಿ: ಮುಂಬೈನಲ್ಲಿ ಪಾಕಿಸ್ತಾನಿ ದೇಶದ ಗಣ್ಯರ ವಿರುದ್ಧ ಶಿವಸೇನೆ ನಡೆಸುತ್ತಿರುವ ನಿರಂತರ ಪ್ರತಿಭಟನೆ ಮತ್ತು ದಾಂಧಲೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ ಶಿವಸೈನಿಕರ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮನ್ನು ತಡೆದಿರುವುದೇನು ಎಂದು ಪ್ರಶ್ನಿಸಿದೆ.
"ಮಹಾರಾಷ್ಟ್ರ ಭಾರತದ ಭಾಗವಲ್ಲವೇ? ಈಗ ಮಹಾರಾಷ್ಟ್ರಕ್ಕೆ ಹೋಗುವವರು ಶಿವಸೇನೆಯಿಂದ ಪ್ರತ್ಯೇಕ ವೀಸಾ ಪಡೆಯಬೇಕೆ? ಪ್ರಧಾನಿಯವರು ಇದಕ್ಕೆ ಉತ್ತರಿಸಬೇಕು. ದೇಶಕ್ಕೆ ಬರುವುದಕ್ಕಾಗಿ ಸರ್ಕಾರ ವೀಸಾ ನೀಡಿದ ಮೇಲೆ ಬೇರೆ ಯಾರಿಗೂ ಅದನ್ನು ತಡೆಯುವ ಅವಕಾಶವಿಲ್ಲ" ಎಂದು ಕಾಂಗ್ರೆಸ್ ನಾಯಕ ರಶೀದ್ ಆಲ್ವಿ ಹೇಳಿದ್ದಾರೆ.
ಶಿವಸೇನೆ ನಡೆಸುತ್ತಿರುವ ದಾಂಧಲೆಗಳನ್ನು ದುರದೃಷ್ಟಕರ ಎಂದು ಬಣ್ಣಿಸಿರುವ ಅವರು ಇದನ್ನು ತಡೆಯಲು ವಿಫಲವಾಗುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡ ಪ್ರಶ್ನಿಸಿದ್ದಾರೆ.
"ಮಹಾರಾಷ್ಟ್ರ ಸರ್ಕಾರ ಮೌನ ಪ್ರೇಕ್ಷನಾಗಿ ಕುಳಿತಿದೆ. ಅವರು ಕ್ರಮ ತೆಗೆದುಕೊಳ್ಳದೆ ಇರುವುದೇಕೆ? ಉದ್ಧವ್ ಠಾಕ್ರೆಯನ್ನು ಬಂಧಿಸದೆ ಇರುವುದೇಕೆ?
ನೆನ್ನೆ ಬಿಸಿಸಿಐ-ಪಿಸಿಬಿ ಮಾತುಕತೆಗೆ ಅಡ್ಡಿ ಪಡಿಸಿದ್ದಕ್ಕೆ ಶಿವಸೇನೆ ದೇಶಾದ್ಯಂತ ಖಂಡನೆಗೆ ಒಳಗಾಗಿದೆ" ಎಂದು ಅವರು ಹೇಳಿದ್ದಾರೆ.
ಈ ಪ್ರತಿಭಟನೆಯ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಲಿ, ಈಗ ಸದ್ಯಕ್ಕೆ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನ ಅಂಪೈರ್ ಅಲೀಮ್ ಧಾರ್ ಅವರನ್ನು ಹಿಂದಕ್ಕೆ ಕರೆಸಿಕೊಂಡಿದೆ.