

ಬೆಂಗಳೂರು: ಪ್ರತಿಪಕ್ಷಗಳ ನಾಯಕರ ಕುಮ್ಮಕ್ಕಿನಿಂದ ರಾಜ್ಯದಲ್ಲಿ ದಲಿತ ನಾಯಕರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಕೇಳಿ ಬರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಅನುಪಸ್ಥಿತಿಯಲ್ಲಿ ಅವರ ಭಾಷಣ ಬಿಡುಗಡೆ ಮಾಡಲಾಯಿತು. ಸಿಎಂ ತಮ್ಮ ಲಿಖಿತ ಭಾಷಣದಲ್ಲಿ ಇದೇ ಮೊದಲ ಬಾರಿಗೆ ದಲಿತ ಮುಖ್ಯಮಂತ್ರಿ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಆಡಳಿತದ ವೇಳೆ ಹುಟ್ಟಿಕೊಳ್ಳದ ದಲಿತ ಸಿಎಂ ಪ್ರಶ್ನೆ, ಈಗ ಒಬ್ಬ ಹಿಂದೂಳಿದ ವರ್ಗವ ವ್ಯಕ್ತಿ ಮುಖ್ಯಮಂತ್ರಿಯಾದಾಗ ಹುಟ್ಟಿಕೊಂಡಿದೆ. ಇದರ ಹಿಂದೆ ಹಿಂದೂಳಿದ ವರ್ಗಗಳನ್ನು ಹೊಡೆಯು ಪಿತೂರಿ ಇದೆ. ದಲಿತ ಸಿಎಂ ಕೂಗಿಗೆ ಪ್ರತಿಪಕ್ಷಗಳ ಕುಮ್ಮಕ್ಕೇ ಕಾರಣ ಎಂದು ಆರೋಪಿಸಿದ್ದಾರೆ.
ದಲಿತರು ಸಿಎಂ ಅಷ್ಟೇ ಅಲ್ಲ, ಪ್ರಧಾನಮಂತ್ರಿಯೂ ಆಗಬೇಕು ಎಂಬುದು ನಮ್ಮ ಇಚ್ಛೆಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬಂಗಾರು ಲಕ್ಷ್ಮಣ್ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ಆದರೆ ಬಿಜೆಪಿಯವರು ಲಕ್ಷ್ಮಣ್ ಪ್ರಧಾನಿಯಾಗದಂತೆ ತಡೆದರು. ಅಲ್ಲದೆ ಅವರನ್ನು ಲಂಚ ಹಗರಣದಲ್ಲಿ ಸಿಲುಕಿಸಿ ಜೈಲಿಗೆ ಅಟ್ಟಲಾಯಿತು. ಅದೇ ಕೊರಗಿನಲ್ಲಿ ಅವರು ಸಾವಿಗೀಡಾದರು. ಇದು ಬಿಜೆಪಿಯವರ ದಲಿತ ಕಾಳಜಿಯನ್ನು ತೋರಿಸುತ್ತದೆ ಎಂದು ಸಿಎಂ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ದಲಿತ ಜನಾಂಗದಲ್ಲಿ ಹುಟ್ಟದೇ ಇರಬಹುದು. ನಾನು ದಲಿತರ ಜೊತೆಯಲ್ಲೇ ಬೆಳೆದವನು. ದಲಿತ ಸಂಘಟನೆಗಳ ಜೊತೆ ಈಗಲೂ ನಿಕಟ ಸಂಪರ್ಕವಿಟ್ಟುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರ ದಲಿತ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ನೆರವು ನೀಡಿದೆ. ಆದರೆ ವಿಪಕ್ಷದವರಿಗೆ ಹಿಂದುಳಿದ ಜಾತಿಯ ವ್ಯಕ್ತಿಯೇ ಸಿಎಂ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ. ಆ ಕಾರಣಕ್ಕಾಗಿಯೇ ದಲಿತ ಸಿಎಂ ಚರ್ಚೆ ಹುಟ್ಟು ಹಾಕಿ ನಮ್ಮ, ನಮ್ಮೊಳಗೆ ಒಡಕು ಮೂಡಿಸುವ ಪಿತೂರಿ ಮಾಡುತ್ತಿದ್ದಾರೆ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.