ಬಂದ್ ವೇಳೆ ಏನಿರುತ್ತೆ, ಏನೇನು ಇರುವುದಿಲ್ಲ?

ಕೇಂದ್ರದ ಕಾರ್ಮಿಕ ನೀತಿಗೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ಕಾರ್ಮಿಕ ಸಂಘಟನೆಗಳು ಬುಧವಾರ `ಭಾರತ್ ಬಂದ್'ಗೆ ಕರೆ ನೀಡಿವೆ...
ಭಾರತ್ ಬಂದ್ (ಸಂಗ್ರಹ ಚಿತ್ರ)
ಭಾರತ್ ಬಂದ್ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರದ ಕಾರ್ಮಿಕ ನೀತಿಗೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವು ಕಾರ್ಮಿಕ ಸಂಘಟನೆಗಳು ಬುಧವಾರ `ಭಾರತ್ ಬಂದ್'ಗೆ ಕರೆ ನೀಡಿವೆ.
 
ಈ ಬಗ್ಗೆ ಮಾತನಾಡಿದ ಕಾರ್ಮಿಕ ಮುಖಂಡ ಎಸ್ ನಾಗರಾಜ್, ರಾಷ್ಟ್ರವ್ಯಾಪಿ ಬಂದ್‍ಗೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯೂಕೆಎಸ್‍ಆರ್‍ಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳ  ಸಂಘಟನೆಗಳು ಬೆಂಬಲ ಸೂಚಿಸಿವೆ. 1.20 ಲಕ್ಷ ಸಿಬ್ಬಂದಿ ಬಂದ್‍ನಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರದ ನೂತನ ರಸ್ತೆ ಸುರಕ್ಷತಾ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಸ್  ತೆಗೆದುಕೊಳ್ಳಬೇಕು ಎನ್ನುವ ಬೇಡಿಕೆ ಇದೆ. ಸರ್ಕಾರಿ ಹಾಗೂ ಖಾಸಗಿ ವಲಯದ ಕೈಗಾರಿಕೆ ಹಾಗೂ ಕಾರ್ಖಾನೆಗಳ ಕಾರ್ಮಿಕರೂ ಭಾಗವಹಿಸಲಿದ್ದಾರೆ. ಆಟೋ ಚಾಲಕರ ಸಂಘಟನೆಗಳು ಬಂದ್‍ಗೆ ಬೆಂಬಲಿಸಿವೆ.

ಖಾಸಗಿ ವಾಹನಗಳ ಮಾಲೀಕರಿಗೂ ಬಂದ್‍ನಲ್ಲಿ ಭಾಗವಹಿಸುವಂತೆ ಕೋರಲಾಗಿದೆ ಎಂದರು. ಕಳೆದ 25 ವರ್ಷಗಳಲ್ಲಿ ಅಧಿಕಾರ ನಡೆಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ದುಡಿಯುವ ಕೈಗಳಿಂದ ಕೆಲಸ ಕಿತ್ತುಕೊಂಡಿವೆ. ಇದರಿಂದಾಗಿ ಲಕ್ಷಾಂತರ ಕೈಗಾರಿಕೆಗಳು ನೆಲಕಟ್ಟಿವೆ. ಮತ್ತೊಂದೆಡೆ ಎರಡೂವರೆ ಲಕ್ಷ ರೈತರು  ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಲವು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಎನ್‍ಡಿಎ ಸರ್ಕಾರ ಕೂಡಾ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನೇ  ಜಾರಿಗೊಳಿಸುವ ಮೂಲಕ ಅದೇ ಹಾದಿಯಲ್ಲೇ ಸಾಗುತ್ತಿದೆ ಎಂದು ಸಿಐಟಿಯು ಸಂಘಟನೆ ಆರೋಪಿಸಿದೆ.

ಏನು ಇರುತ್ತೆ?
ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್, ಎಟಿಎಂ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಖಾಸಗಿ ವಾಹನಗಳು, ಪೆಟ್ರೋಲ್ ಬಂಕ್, ಹಾಲು ಸರಬರಾಜು ಮಾಡುವ ವಾಹನಗಳು ಸೇರಿದಂತೆ  ಅಗತ್ಯ ವಸ್ತುಗಳ ಸರಬರಾಜು ಎಂದಿನಂತೆ ಇರಲಿದೆ. ಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಕಾರಣ ತರಕಾರಿ, ಹಣ್ಣುಗಳು ಕೂಡಾ ಸ್ಟಾಕ್ ಇದ್ದರೆ ಸಿಗಬಹುದು. ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳು ಕಾರ್ಯ ನಿರ್ವಹಿಸಲಿವೆ.

ಏನೇನು ಬಂದ್?
ಖಾಸಗಿ ಶಾಲಾಕಾಲೇಜು ಗಳಿಗೆ ರಜೆ ಘೋಷಣೆ, ಪರಿಸ್ಥಿತಿ ನೋಡಿ ಸರ್ಕಾರಿ ಶಾಲೆಗಳ ರಜಾ ಘೋಷಣೆ ಕೆಎಸ್‍ಆರ್‍ಟಿಸಿ ಅಡಿಯಲ್ಲಿ ಬರುವ ಸಾರಿಗೆ ನಿಗಮಗಳ ಬಸ್‍ಗಳು ರಸ್ತೆಗಿಳಿಯುವುದಿಲ್ಲ. ಬ್ಯಾಂಕ್, ಎಲ್‍ಐಸಿ, ಅಂಚೆ ಕಚೇರಿಗಳು ಮಾರುಕಟ್ಟೆ, ರೈಲ್ವೆ, ಬಸ್ ನಿಲ್ದಾಣಗಳ ಹಮಾಲಿ ಸಂಘಟನೆಗಳೂ ಭಾಗಿ ಯಶವಂತಪುರ ಎಪಿಎಂಸಿ ಮಾರುಕಟ್ಟೆ ಸ್ಥಗಿತ
ತರಕಾರಿ, ಹಣ್ಣುಗಳು ಸ್ಟಾಕ್ ಇದ್ದರೆ ಮಾತ್ರ ಲಭ್ಯ ಇಲ್ಲದಿದ್ದರೆ ಕಾಯಬೇಕು.

ಬೇಡಿಕೆಗಳೇನು?
ಕಾರ್ಪೋರೇಟ್ ವಲಯದ ಪರ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಕೈ ಬಿಡಬೇಕು. ವಿಮಾ ರಂಗದಲ್ಲಿ ವಿದೇಶಿ ನೇರ ಬಂಡವಾಳ ಮಿತಿ ಶೇ.49ಕ್ಕೆ ಹೆಚ್ಚಿಸುವ ಸುಗ್ರೀವಾಜ್ಞೆ ಕೈಬಿಡಬೇಕು
ಭೂ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಾಪಸ್‍ಗೆ ಆಗ್ರಹ
ರಸ್ತೆ ಸುರಕ್ಷತಾ ಕಾಯ್ದೆ ವಾಪಸ್ ಪಡೆಯಬೇಕು
ರಾಜಸ್ಥಾನ, ಗುಜರಾತ್ ಶಾಸನ ಸಭೆ
ಅಂಗೀಕರಿಸಿರುವ ಕಾರ್ಮಿಕ ಕಾನೂನು ತಿದ್ದುಪಡಿ ಮಸೂದೆ ವಾಪಸಾಗಬೇಕು
ಸಮಾನ ಕನಿಷ್ಠ ವೇತನ ರು.15 ಸಾವಿರ ನಿಗದಿ ಆಗಬೇಕು
ಗುತ್ತಿಗೆ ಕಾರ್ಮಿಕ ಕಾನೂನಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಿದ್ದುಪಡಿ ಮಾಡಬೇಕು
ರು.3,000 ಕನಿಷ್ಠ ಪಿಂಚಣಿ, ಬೋನಸ್ ಭವಿಷ್ಯ ನಿಧಿ, ಉಪಧನ ಕಾಯ್ದೆಗಳಲ್ಲಿನ ಮಿತಿ ಹೆಚ್ಚಳ ಮಾಡಬೇಕು
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗಳ ಜಾರಿಗಾಗಿ ಸಮರ್ಪಕ ಹಣ ಮೀಸಲಿಡಬೇಕು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com