ತ್ರಿಭಜನೆ ಕೈಬಿಡುವಂತೆ ಜೆಡಿಎಸ್ ಪಟ್ಟು

ಬಿಬಿಎಂಪಿ ಗದ್ದುಗೆ ಹಿಡಿಯಲು ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಬಹಿರಂಗ ಘೋಷಣೆ ಮಾಡಿರುವ ಜೆಡಿಎಸ್ ವರಿಷ್ಠರು ಈಗ ಬಿಬಿಎಂಪಿ ವಿಭಜನೆ ಪ್ರಸ್ತಾಪ ಕೈ ಬಿಡುವಂತೆ ಪಟ್ಟು ಹಿಡಿದಿದ್ದಾರೆ...
ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ
ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ
Updated on

ಬೆಂಗಳೂರು: ಬಿಬಿಎಂಪಿ ಗದ್ದುಗೆ ಹಿಡಿಯಲು ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಬಹಿರಂಗ ಘೋಷಣೆ ಮಾಡಿರುವ ಜೆಡಿಎಸ್ ವರಿಷ್ಠರು ಈಗ ಬಿಬಿಎಂಪಿ ವಿಭಜನೆ ಪ್ರಸ್ತಾಪ ಕೈ ಬಿಡುವಂತೆ  ಪಟ್ಟು ಹಿಡಿದಿದ್ದಾರೆ.

ಈ ಬೆಳವಣಿಗೆ ಕಾಂಗ್ರೆಸ್ ನಾಯಕರನ್ನು ತೀರ ಇಕ್ಕಟ್ಟಿಗೆ ಸಿಲುಕಿಸಿದೆ. ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಕಾಂಗ್ರೆಸ್ ನಾಯಕರು ಬುಧವಾರ ಬೆಳಿಗ್ಗೆ ನಡೆಸಿದ ಮಾತುಕತೆ ಒಂದರ್ಥದಲ್ಲಿ  ಫಲಪ್ರದವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ನಡುವೆ ನಡೆಯಬೇಕಿದ್ದ ಸಂಜೆಯ ನಿರೀಕ್ಷಿತ  ಮಾತುಕತೆ ನಡೆಯಲಿಲ್ಲ. ಈ ಸಭೆ ಗುರುವಾರ ಅಥವಾ ಶುಕ್ರವಾರ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸ್ಪರೂಪದ ಸ್ಪಷ್ಟತೆಗೆ ಇನ್ನೆರಡು ದಿನ ಕಾಯಬೇಕಿದೆ.  ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಸೂಚನೆ ಪ್ರಕಾರ, ಜೆಡಿಎಸ್ ರಾಷ್ಟ್ರೀಯ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮನೆ ಅಂಗಳಕ್ಕೆ  ಮಾತುಕತೆಗಾಗಿ ಕಾಲಿಟ್ಟ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನೇತೃತ್ವದ ಕಾಂಗ್ರೆಸ್ ನಿಯೋಗದ ಮುಂದೆ ದೇವೇಗೌಡರು ಇಂಥದೊಂದು ಗಂಭೀರ ಪ್ರಸ್ತಾಪವನ್ನು ಮೆಲ್ಲಗೆ ಮಂಡಿಸಿದ್ದಾರೆ.

ಮೈತ್ರಿ ಪ್ರಕ್ರಿಯೆ ಸಂದರ್ಭದಲ್ಲಿ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಈಗ ಎದುರಾಗಿದೆ. ಡಾ.ಜಿ.ಪರಮೇಶ್ವರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ   ಎಸ್.ಟಿ.ಸೋಮಶೇಖರ್, ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಬುಧವಾರ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ವಿಚಾರ  ಪ್ರಸ್ತಾಪಿಸಿದ ದೇವೇಗೌಡರು ಮಾತುಕತೆಯ ಕೊನೆಯಲ್ಲಿ `ಮೈತ್ರಿ ವಿಚಾರದಲ್ಲಿ ನಮ್ಮದು ಯಾವ ಷರತ್ತು ಇಲ್ಲ. ಆದರೆ ಬೆಂಗಳೂರು ವಿಭಜನೆ ಪ್ರಸ್ತಾಪದ ಬಗ್ಗೆ ನಮ್ಮ ಕುಮಾರಸ್ವಾಮಿ ಅವರ  ಮನಸಿನಲ್ಲಿ ಬೇರೆ ಏನೋ ಇದೆ. ಹೀಗಾಗಿ ಅದೊಂದು ಸ್ವಲ್ಪ ವಿಚಾರಿಸಿಕೊಳ್ರಪ್ಪ' ಎಂದು ತಮ್ಮ ಎಂದಿನ ಶೈಲಿಯಲ್ಲಿ ಕಾಂಗ್ರೆಸ್ ನಾಯಕರ ಮುಂದೆ ಹೊಸ ಪ್ರಸ್ತಾಪ ಬಿಟ್ಟಿದ್ದಾರೆ.

ಸುಮಾರು 45 ನಿಮಿಷಗಳ ಕಾಲ ಕಾಂಗ್ರೆಸ್ ನಿಯೋಗದ ಜತೆ ಮಾತನಾಡಿದ ದೇವೇಗೌಡರು, ಪ್ರಪಂಚದಲ್ಲಿ ಯಾವ ಮಹಾನಗರ ಪಾಲಿಕೆಯನ್ನೂ ಆಡಳಿತ ದೃಷ್ಟಿಯಿಂದ ವಿಭಜನೆ ಮಾಡಿಲ್ಲ.   ಅಮೆರಿಕ ದೇಶದಲ್ಲೂ ಇದು ಪಾಲನೆಯಾಗಿದೆ. ನಮ್ಮ ದೇಶದಲ್ಲೂ ನಗರ ಪಾಲಿಕೆ ವಿಭಜನೆಯಾಗಿಲ್ಲ. ದೆಹಲಿಯಲ್ಲಿ ಮಾಡಿದ ಪ್ರಯೋಗ ಕೈಕೊಟ್ಟಿದೆ. ಇದನ್ನೆಲ್ಲವನ್ನೂ ನಾವು ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಬಗ್ಗೆಯೂ ಸ್ವಲ್ಪ ಹೊತ್ತು ಮಾತನಾಡಿ ಕೊನೆಯದಾಗಿ ಕುಮಾರಸ್ವಾಮಿ   ಮನಸಿನಲ್ಲಿ ವಿಭಜನೆಗೆ ವಿರುದ್ಧವಾದ ಭಾವನೆ ಇರಬಹುದು ಎಂದು ಹೇಳಿದ್ದಾರೆ.

ಕ್ರಾಸ್ ಚೆಕ್
ದೇವೇಗೌಡರ ಮನೆಗೆ ಸಂಧಾನಕಾರನಾಗಿ ಹೋಗುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಪರಮೇಶ್ವರ  ಅವರನ್ನು ಉಪಹಾರ ಸೇವನೆ ನೆಪದಲ್ಲಿ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ದೇವೇಗೌಡರ ಮನೆಗೆ ತೆರಳಿ ತಮ್ಮ ಪರವಾಗಿ ಮಾತನಾಡುವಂತೆ ಮನವಿ ಮಾಡಿದರು.

ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಕೆ.ಜೆ.ಜಾರ್ಜ್ ಈ ಸಂದರ್ಭದಲ್ಲಿ ಜತೆಗಿದ್ದರು. ಇದಾದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಡಾ.ಪರಮೇಶ್ವರ ಅವರಿಗೆ ಕರೆ  ಮಾಡಿ ದೇವೇಗೌಡರ ನಿವಾಸಕ್ಕೆ ತೆರಳಿ ಮೈತ್ರಿ ಪ್ರಸ್ತಾಪದ ಸತ್ಯಾಸತ್ಯತೆ ಪರಿಶೀಲಿಸಿಕೊಂಡು ಬರುವಂತೆ ಸೂಚನೆ ನೀಡಿದರು. ಹೀಗಾಗಿ ರಾಮಲಿಂಗಾ ರೆಡ್ಡಿ, ಎಸ್.ಟಿ.ಸೋಮಶೇಖರ್  ಹಾಗೂ ರಿಜ್ವಾನ್ ಜತೆ ತೆರಳಿದ ಪರಮೇಶ್ವರ, ಬಿಬಿಎಂಪಿ ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ತಾವು ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಜತೆ ಚರ್ಚೆ ನಡೆಸುವುದಕ್ಕೆ ಬಂದಿದ್ದೇನೆ ಎಂದಾಗ, ಬೆಂಬಲ ಕೊಡುವುದಕ್ಕೆ ನಾವು ಸಿದ್ದರಿದ್ದೇವೆ ಎಂದು ದೇವೇಗೌಡರು ಪುನರುಚ್ಚರಿಸಿದರು.

ಜತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ನೀವು ಹಾಗೂ ಸಿದ್ದರಾಮಯ್ಯನವರೇ ಮಾತಾಡಿಕೊಳ್ಳಿ ಎಂದು ಹೇಳಿದರು. ಇದಾದ ಬಳಿಕ ಸಾಯಂಕಾಲ 5.30ರ  ಸುಮಾರಿಗೆ ಮತ್ತೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಪರಮೇಶ್ವರ ಹಾಗೂ ಎಸ್.ಟಿ.ಸೋಮಶೇಖರ್, ದೇವೇಗೌಡರ ಜತೆಗಿನ ಚರ್ಚೆ ಸಂದರ್ಭದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ವಿವರಣೆ  ನೀಡಿದರು.

ಮೈತ್ರಿ ಯಶಸ್ವಿಯಾದರೆ ಶಂಕರಮೂರ್ತಿ ಪದಚ್ಯುತಿಗೆ ಸ್ಕೆಚ್
ಬಿಬಿಎಂಪಿ ಮೇಯರ್ ಆಯ್ಕೆಗೆ ಜೆಡಿಎಸ್ ಜತೆಗಿನ ಮೈತ್ರಿ ಯಶಸ್ವಿಯಾದರೆ ಇದೇ ಸಂಬಂಧದ ಆಧಾರದ ಮೇಲೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಪದಚ್ಯುತಿಗೆ ಪ್ರಯತ್ನ  ನಡೆಸಬಹುದೆಂಬ ಚಿಂತನೆ ಈಗ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ. ಶಂಕರಮೂರ್ತಿ ಅವರ ವಿರುದ್ಧವಾಗಿ ಕಾಂಗ್ರೆಸ್‍ನ ಎಲ್ಲ ವಿಧಾನ ಪರಿಷತ್ ಸದಸ್ಯರಿದ್ದಾರೆ. ಸರ್ಕಾರ ತಮ್ಮದಾದರೂ  ಪರಿಷತ್‍ನಲ್ಲಿ ಶಂಕರಮೂರ್ತಿ ಸಭಾಪತಿಯಾಗಿರುವುದು ಕಾಂಗ್ರೆಸ್ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ತಾನಾಗೇ ಒದಗಿ ಬಂದಿರುವ ಜೆಡಿಎಸ್ ಸಂಬಂಧದ ಆದಾರದ ಮೇಲೆ ಶಂಕರಮೂರ್ತಿ ಪದಚ್ಯುತಿಗೆ ಏಕೆ ಪ್ರಯತ್ನ ನಡೆಸಬಾರದೆಂಬ ಪ್ರಸ್ತಾಪವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಕೆಲ ವಿಧಾನ ಪರಿಷತ್ ಸದಸ್ಯರು ಈಗ ತೇಲಿಬಿಟ್ಟಿದ್ದಾರೆ.

ನಡೆಯಲಿಲ್ಲ ಅಂತಿಮ ಚರ್ಚೆ
ಆದರೆ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ನಡೆಯಬೇಕಿದ್ದ ಚರ್ಚೆ ಕೊನೆ ಹಂತದಲ್ಲಿ ಮೊಟಕುಗೊಂಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಾ.ಪರಮೇಶ್ವರ ಅವರನ್ನು ಸಿ.ಎಂ.ಇಬ್ರಾಹಿಂ ಅವರ  ನಿವಾಸದಲ್ಲಿ ಬುಧವಾರ ಸಾಯಂಕಾಲ 6.30ಕ್ಕೆ ಕುಮಾರಸ್ವಾಮಿ ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಇದು ಹಠಾತ್ ರದ್ದುಗೊಂಡಿದೆ. ಗುರುವಾರ ಖಾಸಗಿ ಹೊಟೇಲ್ ನಲ್ಲಿ ಭೇಟಿ ನಡೆಯುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com